Advertisement

ಸುವ್ಯವಸ್ಥಿತ ಚುನಾವಣೆಗೆ ಸ್ಪರ್ಧಿಗಳ ಸಹಕಾರ ಅಗತ್ಯ

04:51 PM Nov 29, 2021 | Shwetha M |

ವಿಜಯಪುರ: ಸ್ಥಳೀಯ ಸಂಸ್ಥೆಗಳಿಂದ ನಡೆಯುತ್ತಿರುವ ಮೇಲ್ಮನೆಯ ಚುನಾವಣೆಯಲ್ಲಿ ವಿಜಯಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಎಲ್ಲ ಅಭ್ಯರ್ಥಿಗಳು ತಮಗೆ ನೀಡಿದ ಗುರುತಿನ ಚೀಟಿಗಳನ್ನು ಕೌಂಟಿಂಗ್‌ ಮುಗಿಯುವವರೆಗೂ ಸುರಕ್ಷಿತವಾಗಿ ಇರಿಸಿಕೊಳ್ಳಬೇಕು ಎಂದು ಚುನಾವಣಾಧಿಕಾರಿ ಸುನೀಲಕುಮಾರ ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಜಯಪುರ-ಬಾಗಲಕೋಟೆ ವಿಧಾನ ಪರಿಷತ್‌ ಚುನಾವಣೆಗೆ ಸಂಬಂಧಪಟ್ಟಂತೆ ಸ್ಪರ್ಧಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಪರಿಷ್ಕೃತಗೊಂಡು ಚುನಾವಣಾ ಆಯೋಗದಿಂದ ಅಂತಿಮವಾಗಿ 411 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.

ಅಂತಿಮವಾಗಿ ಕಣದಲ್ಲಿ ಏಳು ಜನ ಅಭ್ಯರ್ಥಿಗಳು ಉಳಿದಿದ್ದು ಸುವ್ಯವಸ್ಥಿತ ಚುನಾವಣೆಗೆ ಎಲ್ಲ ಅಭ್ಯರ್ಥಿಗಳು ಹಾಗೂ ಅವರ ಏಜೆಂಟರು ಚುನಾವಣೆ ಸಹಕರಿಸಬೇಕೆಂದು ಹೇಳಿದರು.

ಅದರಂತೆ ಕೋವಿಡ್‌ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ 500ಕ್ಕಿಂತ ಹೆಚ್ಚಿನ ಜನ ಸೇರುವಂತಿಲ್ಲ ಎಂದು ನಿರ್ದೇಶನವಿದ್ದು, ಇದರೊಂದಿಗೆ ಮಾಸ್ಕ್, ಸ್ಯಾನಿಟೈಸರ್‌ ಬಳಕೆ ಸೇರಿದಂತೆ ಸಾಮಾಜಿಕ ಅಂತರದಂತಹ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.

ಈಗಾಗಲೇ ಈ ಚುನಾವಣೆಗೆ ಸಂಬಂಧಪಟ್ಟಂತೆ ಎರಡು ಜಿಲ್ಲೆಗಳಿಗೆ ಎಂಸಿಸಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. ಪ್ರಚಾರಕ್ಕೆ ಬಳಸುವ ವಾಹನಗಳ ಪರವಾನಿಗೆಯನ್ನು ಚುನಾವಣಾಧಿಕಾರಿಗಳಿಂದ ಪಡೆಯಬೇಕೆಂದು ತಿಳಿಸಿದ ಅವರು, ಈ ಚುನಾವಣೆಯ ಪ್ರತಿಯೊಂದು ಬೂತ್‌ನಲ್ಲಿ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಲಾಗಿದ್ದು ಅವರು ಎಲ್ಲದರ ಬಗ್ಗೆ ನಿಗಾ ವಹಿಸುತ್ತಾರೆ. ಚುನಾವಣಾ ಕಾರ್ಯದಲ್ಲಿ ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಹೇಳಿದರು.

Advertisement

ಹಾಗೆಯೇ ಮತದಾನ ಜಾಗೃತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಚೋರಗಸ್ತಿ, ಹಾದಿಮನಿ ಸೇರಿದಂತೆ ಕ್ಷೇತ್ರದ ವಿವಿಧ ಸ್ಪರ್ಧಿಗಳು, ವಿವಿಧ ಪಕ್ಷಗಳು, ಸ್ಪರ್ಧಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next