ಸಿಂಧನೂರು: ಸಹಕಾರ ತತ್ವದಲ್ಲಿ ನಂಬಿಕೆಯಿಟ್ಟು ಮುನ್ನಡೆದಾಗ ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗುತ್ತದೆ. ಸಹಕಾರಿ ಕ್ಷೇತ್ರದಿಂದ ಇಂದು ಮಧ್ಯಮ ವರ್ಗಕ್ಕೆ ಅತಿ ಹೆಚ್ಚು ಅನುಕೂಲವಾಗಿದೆ ಎಂದು ಮಾಜಿ ಸಂಸದ, ತುಂಗಭದ್ರಾ ಪತ್ತಿನ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.
ನಗರದ ಕನಕದಾಸ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ತುಂಗಭದ್ರಾ ಪತ್ತಿನ ಸೌಹಾರ್ದ ಸಹಕಾರಿಯ 22ನೇ ವಾರ್ಷಿಕ ಸಾಮಾನ್ಯಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಹಲವು ಕ್ಷೇತ್ರಗಳಲ್ಲಿನ ದುರ್ಬಲ ವರ್ಗದ ಜನರನ್ನು ಮೇಲೆತ್ತುವ ಕೆಲಸವನ್ನು ಸಹಕಾರಿ ಕ್ಷೇತ್ರ ಮಾಡುತ್ತಿದೆ. ಸಹಕಾರದಿಂದ ಸರ್ವರ ಏಳ್ಗೆ ಸಾಧ್ಯ. ಸಹಕಾರಿ ಕ್ಷೇತ್ರದಲ್ಲೂ ಸ್ಪರ್ಧೆ ಇದೆ. ಬಡವರಿಗೆ, ಹಿಂದುಳಿದವರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರನ್ನು ಸಬಲೀಕರಣ ಮಾಡುವ ಉದ್ದೇಶ ನಮ್ಮದು. ವಿಶ್ವಾಸವೇ ಸಹಕಾರಿಯ ಉಸಿರು. ಪ್ರಾಮಾಣಿಕತೆಯೇ ಆಸ್ತಿ. ಆಡಳಿತ ಮಂಡಳಿ, ಸಿಬ್ಬಂದಿ ಪ್ರಾಮಾಣಿಕ ಕೆಲಸ ಮಾಡಿದರೆ ಯಶಸ್ಸು ಸಾಧ್ಯ ಎಂದರು.
ಶೇ.15ಲಾಭಾಂಶ ಹಂಚಿಕೆ: ಆಡಳಿತ ಮಂಡಳಿ ಸಹಕಾರ, ಸಿಬ್ಬಂದಿ ಪರಿಶ್ರಮದಿಂದ ತುಂಗಭದ್ರಾ ಪತ್ತಿನ ಸೌಹಾರ್ದ ಸಹಕಾರಿ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ಈ ವರ್ಷ ಶೇ.25 ದುಡಿಯುವ ಬಂಡವಾಳ ಅಧಿಕವಾಗಿದೆ. ಪ್ರಸಕ್ತ ವರ್ಷ 94.64 ಲಕ್ಷ ನಿವ್ವಳ ಲಾಭ ಗಳಿಸಿದೆ. ಶೇ.15 ಲಾಭಾಂಶ ನೀಡಲು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಕೆಲವು ತಿದ್ದುಪಡಿ ಮಂಡಿಸಲಾಯಿತು. ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ನೀಡಲಾಯಿತು. ತುಂಗಭದ್ರಾ ಪತ್ತಿನ ಸಹಕಾರಿಯ ಉಪಾಧ್ಯಕ್ಷ ಎಂ.ದೊಡ್ಡಬಸವರಾಜ, ರಮೇಶಪ್ಪ ಸಾಹುಕಾರ ದಿದ್ದಿಗಿ, ನಲ್ಲಾ ವೆಂಕಟೇಶ್ವರರಾವ್, ವೆಂಕಣ್ಣ ಜೋಷಿ, ಮಾಜಿ ಅಧ್ಯಕ್ಷರಾದ ಕೆ.ಭೀಮಣ್ಣ, ದೀಲೀಪ್‌ಕುಮಾರ ಸಕಲೇಚಾ, ನಿರ್ದೇಶಕರಾದ ಎಂ.ಲಿಂಗಪ್ಪ, ಹನುಮಂತಪ್ಪ ಹೆಚ್.ತಿಡಿಗೋಳ, ಅಮರೇಶ ಕೆ. ಬಸಾಪುರ, ಕೆ.ಅಸದ್ ಖಾನ್, ಸಿದ್ರಾಮೇಶ ಮನ್ನಾಪುರ, ಎಸ್.ವೆಂಕಣ್ಣ ತಿಪ್ಪನಹಟ್ಟಿ, ಎಂ.ಜಿ.ಶಂಕರ್, ತಿಮ್ಮಮ್ಮ, ಶರಣಮ್ಮ ಎಂ.ದೊಡ್ಡಬಸವರಾಜ ಇದ್ದರು. ಮುಖ್ಯಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತ.ಬಿ ವಾರ್ಷಿಕ ವರದಿ ವಾಚಿಸಿದರು. ಶಾಖಾ ವ್ಯವಸ್ಥಾಪಕ ಹುಸೇನ್ ಸಾಬ್ ನಿರ್ವಹಿಸಿದರು.