ಬೀದರ: ಸಾರ್ವಜನಿಕರು ತಪ್ಪದೇ ಡಿ.ಇ.ಸಿ. ಅಲ್ಬೆಂಡಾಜೋಲ್ ಹಾಗೂ ವ್ಯಕ್ತಿಯ ಅಳತೆಗನುಸಾರವಾಗಿ ಐವರಮೆಕ್ಟಿನ್ ಮಾತ್ರೆಗಳು ಸೇವನೆ ಮಾಡಿ, ಆನೇಕಾಲು ರೋಗ ಮುಕ್ತ ಸಮಾಜ ಮಾಡಬೇಕು ಎಂದು ಡಿಸಿ ರಾಮಚಂದ್ರನ್ ಆರ್. ಮನವಿ ಮಾಡಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಸಂಚಲನಾ ಸಮಿತಿ ಸಭೆಯಲ್ಲಿ ಆನೆ ಕಾಲು ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಆನೆಕಾಲು ರೋಗಿಗಳ ಪ್ರಕರಣ ಮತ್ತು ರೋಗ ಹರಡಿಸುವ ಸಕ್ರಿಯ ಪ್ರಕರಣಗಳು ಪದೇಪದೇ ಗೋಚರಿಸುತ್ತಿರುವುದರಿಂದ ಜಿಲ್ಲೆಯಲ್ಲಿ ಮಾ.15ರಿಂದ 31ರವರೆಗೆ ಪ್ರತಿ ವರ್ಷದಂತೆ ಊಟದ ನಂತರ ಅರ್ಹ ಫಲಾನುಭವಿಗಳಿಗೆ ಸಾಮೂಹಿಕ ಔಷ ಧ ಡಿಇಸಿ ಹಾಗೂ ಅಲ್ಬೆಂಡಾಜೋಲ್ ಜೊತೆಯಲ್ಲಿ ಐವರ್ ಮೆಕ್ಟೀನ್ ಮಾತ್ರೆ ಸೇರಿಸಲಾಗಿದೆ. ಈ ಕಾರ್ಯಕ್ರಮ ಗುಣಾತ್ಮಕವಾಗಿ ಪ್ರತಿಶತ ಸಾಧನೆಗೆ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೋಸ್ಟರ್ ಬಿಡುಗಡೆ: ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸಲು ಹಾಕಲಾಗಿರುವ ಪೋಸ್ಟರ್, ಕರಪತ್ರ, ಬ್ಯಾನರ್ ಇತ್ಯಾದಿಗಳನ್ನು ವೇದಿಕೆಯಲ್ಲಿ ಜಿಪಂ ಸಿಇಒ ಜಹೀರಾ ನಸೀಂ ಅವರು ಬಿಡುಗಡೆ ಮಾಡಿದರು. ಕ್ರಿಯಾ ಯೋಜನೆಯಂತೆ ಯಾವುದೇ ಅಡೆತಡೆಯಾಗದಂತೆ ಈ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ನಡೆಸಬೇಕು ಎಂದು ತಿಳಿಸಿದರು.
ಡಾ| ಅನಿಲಕುಮಾರ ತಾಳಿಕೋಟೆ ಅವರು ಪ್ರಾತ್ಯಕ್ಷಿಕೆ ಮೂಲಕ ಸಭೆಗೆ ಹಲವಾರು ಮಾಹಿತಿ ನೀಡಿದರು. ಆನೇಕಾಲು ರೋಗವು ಪ್ರಪಂಚದಾದ್ಯಂತ ಒಂದು ಪ್ರಮುಖ ಸಮಸ್ಯೆಯಾಗಿದೆ. ಭಾರತ ದೇಶದಲ್ಲಿ ಎಲ್ಲಾ ಕಡೆ ಈ ರೋಗ ಕಂಡು ಬಂದಿದೆ. ಕರ್ನಾಟಕದೆಲ್ಲೆಡೆ ಹೆಚ್ಚಿನ ಪ್ರಮಾಣದಲ್ಲಿ ಆನೆಕಾಲು ಪೀಡಿತ ರೋಗಿಗಳಿದ್ದಾರೆ. ರಾಜ್ಯದ 6 ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಬೀದರ ಕೂಡ ಒಂದಾಗಿದೆ ಎಂದು ತಿಳಿಸಿದರು.
ಡಿಎಚ್‌ಒ ಡಾ| ವಿ.ಜಿ.ರೆಡ್ಡಿ ಮಾತನಾಡಿ, ಆನೆ ಕಾಲು ರೋಗವು ಗೊಚ್ಚೆ (ಕಲುಷಿತ) ನೀರಿನಲ್ಲಿ ಬೆಳೆಯುವ ಕ್ಯೂಲೆಕ್ಸ್ ಜಾತಿಯ ಸೊಳ್ಳೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಸೊಳ್ಳೆ ಕಚ್ಚಿದ ಈ ರೋಗವು ಮನುಷ್ಯರ ದೇಹದಲ್ಲಿ ಕಾಣಿಸಿಕೊಳ್ಳಲು ಕನಿಷ್ಠ 2ರಿಂದ 10 ವರ್ಷದವರೆಗೆ ಯಾವುದೇ ಅವಧಿಯಲ್ಲಿ ದೇಹದಲ್ಲಿ ಕಾಣಿಸಿಕೊಳ್ಳಬಹುದು. ಈ ರೋಗವು ಮನುಷ್ಯರ ದೇಹದ ನಾಲ್ಕು ಭಾಗಗಳಲ್ಲಿ ರೋಗದ ಬಾಧೆಯನ್ನುಂಟು ಮಾಡುತ್ತದೆ. ಕಾಲುಗಳು ದಪ್ಪಾಗುವುದು, ಗಂಡಸರಲ್ಲಿ ಅಂಡವೃದ್ಧಿ ಚೇರು ಬೆಳವಣಿಗೆ, ಕೈಗಳು ಕೂಡ ದಪ್ಪಾಗುವುದು ಮತ್ತು ಮಹಿಳೆಯಲ್ಲಿ ಸ್ತನಗಳು (ದಪ್ಪಾಗುವುದು) ಬೃಹದ್ದಾಕಾರವಾಗಿ ಕಂಡು ಬರುತ್ತವೆ ಎಂದರು.
ವಿಷಯ ತಜ್ಞೆ ಜ್ಯೋತ್ಸಾ ಅವರು, ಜಿಲ್ಲೆಯ ಆನೆಕಾಲು ರೋಗದ ಹಾಗೂ ರಾಜ್ಯದ ಚಿತ್ರಣ ಮತ್ತು ಅಂಕಿ-ಸಂಖ್ಯೆಗಳ ಮಾಹಿತಿ ನೀಡಿದರು. ಡಾ| ಸಂಜೀವಕುಮಾರ ಪಾಟೀಲ ಮಾತನಾಡಿದರು. ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ರತಿಕಾಂತ.ವಿ.ಸ್ವಾಮಿ, ಡಾ| ಅನೀಲಕುಮಾರ ಚಿಂತಾಮಣಿ, ಡಾ| ಕೃಷ್ಣಾ ರೆಡ್ಡಿ, ಡಾ| ದೀಪಾ ಖಂಡ್ರೆ, ಡಾ| ಮಹೇಶ ತೊಂಡಾರೆ, ಸಂಗಪ್ಪ ಕಾಂಬಳೆ ಮತ್ತು ಇನ್ನಿತರ ಅಧಿಕಾರಿಗಳು ಸಭೆಯಲ್ಲಿದ್ದರು.
ಅಧಿಕಾರಿಗಳ ಸಮ್ಮುಖದಲ್ಲಿ ಡಿಸಿ ರಾಮಚಂದ್ರನ್ ಆರ್ ಅವರು ಔಷಧ ಸೇವನೆ ಮಾಡುವ ಮೂಲಕ ಸಾಂಕೇತಿಕವಾಗಿ ಆನೆಕಾಲು ರೋಗ ನಿರ್ಮೂಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ್ ಪಟೇಲ್, ಡಿಎಚ್‌ಒ ಡಾ| ವಿ.ಜಿ. ರೆಡ್ಡಿ ಹಾಗೂ ಇತರೆ ಅಧಿ ಕಾರಿಗಳು ಸಾಂಕೇತಿಕವಾಗಿ ಔಷಧ ಸೇವನೆ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು ವಿಶೇಷವಾಗಿತ್ತು.