ಬೆಂಗಳೂರು: ಮೊದಲ ಹಂತದ ಮೆಟ್ರೋ ಸೇವೆ ಪಡೆದಿರುವ ಬೆಂಗಳೂರಿಗರಿಗೆ ಇನ್ಮುಂದೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲವೂ ಸಿಗಲಿದೆ. ಪೈಪ್‌ಲೈನ್ ಮೂಲಕ ಮನೆ ಮನೆಗೆ ಅಡುಗೆ ಅನಿಲ ಪೂರೈಸುವ ವ್ಯವಸ್ಥೆ ದೆಹಲಿ, ಮುಂಬೈ ಹಾಗೂ ಅಹಮ್ಮದಬಾದ್‌ನಲ್ಲಿ ಜಾರಿಯಲ್ಲಿದೆ. ಈಗ ಈ ಸೌಲಭ್ಯ ಬೆಂಗಳೂರಿಗೂ ಲಭ್ಯವಾಗಿದೆ. ಮುಂದಿನ ಐದು ವರ್ಷದಲ್ಲಿ 1.32 ಲಕ್ಷ ಮನೆಗಳಿಗೆ ದಿನದ 24 ಗಂಟೆಯೂ ಅಡುಗೆ ಅನಿಲ ಪೈಪ್ ಮೂಲಕವೇ ದೊರೆಯಲಿದೆ.
ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿಯ “ಮನೆ ಮನೆಗೆ ಅಡುಗೆ ಅನಿಲ ಯೋಜನೆಗೆ’ ಭಾನುವಾರ ಬೊಮ್ಮನಹಳ್ಳಿಯ ಎಚ್‌ಎಸ್‌ಆರ್ ಬಡವಾಣೆಯಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ ನೀಡಿದರು.
ಈ ಯೋಜನೆ ಮೂಲಕ ಭಾರತೀಯ ಅನಿಲ ಪ್ರಾಧಿಕಾರ ನಿಯಮಿತ(ಗೈಲ್) ಸಂಸ್ಥೆ ನಾಗರಿಕರಿಗೆ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ಪೂರೈಕೆ ಮಾಡಲಿದೆ. ಇದು ಸಂಪೂರ್ಣ ಜಾರಿಯಾದರೆ, ಸಿಲಿಂಡರ್ ಬುಕ್ ಮಾಡುವ, ಪದೇಪದೇ ಸಿಲಿಂಡರ್ ಬದಲಿಸುವ ಕಿರಿಕಿರಿ ಇರುವುದಿಲ್ಲ. ಪೈಪ್‌ಲೈನ್ ಮೂಲಕ ಅನಿಲ ಬಳಸುವ ನಾಗರಿಕರು ಪ್ರತಿ 2 ತಿಂಗಳಿಗೊಮ್ಮೆ ಹಣ ಪಾವತಿ ಮಾಡಬೇಕು.
ಬೆಂಗಳೂರಿನಲ್ಲಿ ಈಗಾಗಲೇ 66 ಕಿ.ಮೀ ಉದ್ದದ ಸ್ಟೀಲ ಮತ್ತು 452 ಕಿ.ಮೀ ಉದ್ದದ ಎಂಡಿಪಿಇ ಪೈಪ್‌ಲೈನ್ ಅಳವಡಿಕೆ ಪೂರ್ಣಗೊಂಡಿದೆ. 34,500 ಮನೆಗಳ ಪೈಕಿ 23 ಸಾವಿರ ಮನೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. 3 ಸಾವಿರಕ್ಕೂ ಅಧಿಕ ಮನೆಗಳಲ್ಲಿ ಪೈಪ್‌ಲೈನ್ ಮೂಲಕ ಅಡುಗೆ ಅನಿಲ ದೊರೆಯುತ್ತಿದೆ. ಈ ವರ್ಷದ ಅಂತ್ಯದೊಳಗೆ 60 ಸಾವಿರಕ್ಕೂ ಅಧಿಕ ಮನೆಗಳಿಗೆ ಈ ಸೌಲಭ್ಯ ಸಿಗಲಿದೆ.
ಮುಂದಿನ ಐದು ವರ್ಷದಲ್ಲಿ ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ, ಬೆಂಗಳೂರು ಪೂರ್ವ, ಉತ್ತರ, ದಕ್ಷಿಣ ಮತ್ತು ಆನೇಕಲ್ ಭಾಗದ 1.32 ಲಕ್ಷ ಮನೆಗೆ ಈ ಸೇವೆ ಲಭ್ಯವಾಗಲಿದೆ. ಒಟ್ಟು 4395 ಕಿ.ಮೀ ಪೈಪ್‌ಲೈನ್ ಇದಾಗಿದ್ದು, ಮಹಾರಾಷ್ಟ್ರದಿಂದ ಅನಿಲ ಪೂರೈಕೆಯಾಗುತ್ತಿದೆ. ಇದಕ್ಕಾಗಿ 6,283 ಕೋಟಿ ರೂಪಾಯಿ ವೆಚ್ಚ ಮಾಡಲಾಗುತ್ತಿದೆ.
ಮನೆಯ ಜತೆಗೆ ನಗರದಲ್ಲಿರುವ ದೊಡ್ಡ ದೊಡ್ಡ ಉದ್ಯಮಗಳು, ಐಟಿ ಕಂಪನಿಗಳು ಪೈಪ್‌ಲೈನ್ ಗ್ಯಾಸ್ ಸಂಪರ್ಕ ಪಡೆದಿದೆ. ಅನಿಲ ಪೂರೈಕೆಗಾಗಿ ಲಗ್ಗೆರೆಯಲ್ಲಿ ಸಿಎನ್‌ಜಿ ಸ್ಟೇಷನ್ ಆರಂಭಿಸಲಾಗಿದೆ. ಸುಮನಹಳ್ಳಿ, ಹೆಣ್ಣೂರು ಮತ್ತು ಪೀಣ್ಯದ ಬಿಎಂಟಿಸಿ ಬಸ್ ಡಿಪೋ ಸೇರಿದಂತೆ 60 ಕಡೆಗಳಲ್ಲಿ ಸಿಎನ್‌ಜಿ ಸ್ಟೇಷನ್ ಆರಂಭವಾಗಲಿದೆ.