Advertisement

ದಾಖಲೆ ರಹಿತ ಜನವಸತಿ ಕಂದಾಯ ಗ್ರಾಮಗಳಾಗಿ ಪರಿವರ್ತನೆ

09:26 PM Nov 08, 2022 | Team Udayavani |

ಬೆಂಗಳೂರು: ಬಹುದಿನಗಳ ಬೇಡಿಕೆಯಾಗಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸುವ ಕಾರ್ಯಕ್ಕೆ ಸರ್ಕಾರ ಚಾಲನೆ ನೀಡಿದೆ.

Advertisement

ಲಂಬಾಣಿ ತಾಂಡ, ಗೊಲ್ಲರ ಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರ ಹಟ್ಟಿ, ಹಾಡಿ, ಮಜರೆ, ದೊಡ್ಡಿ, ಪಾಳ್ಯ, ಕ್ಯಾಂಪ್‌, ಕಾಲೋನಿ ಇತರೆ ಗುರುತಿಸಲ್ಪಟ್ಟ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಇಲ್ಲವೇ ಗ್ರಾಮದ ಭಾಗವಾಗಿ ಪರಿವರ್ತಿಸಿ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.

ಕರ್ನಾಟಕ ಭೂಸುಧಾರಣಾ ಕಾಯಿದೆಗೆ ತಿದ್ದುಪಡಿ ತಂದು ಕಲಂ 38ಎ ಹಾಗೂ ನಿಯಮ 9ಸಿ ಸೇರ್ಪಡೆ ಮೂಲಕ ಖಾಸಗಿ ಭೂಮಿಯಲ್ಲಿರುವ ಇಂತಹ ಜನವಸತಿಯಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಹಕ್ಕುಪತ್ರ ನೀಡಿಕೆಗೆ ಪಾಲಿಸಬೇಕಾದ ಅಂಶಗಳ ಬಗ್ಗೆ ಕಂದಾಯ ಗ್ರಾಮಗಳ ರಚನಾ ಕೋಶದ ನಿರ್ದೇಶಕ ಡಾ.ಎಂ.ಎನ್‌. ರಾಜೇಂದ್ರ ಪ್ರಸಾದ್‌ ಮಂಗಳವಾರ ಸುತ್ತೋಲೆ ಹೊರಡಿಸಿದ್ದಾರೆ.

ಖಾಸಗಿ ಜಮೀನಿನಲ್ಲಿನ ಜನವಸತಿಯ ಸರ್ವೇ ಸಂಖ್ಯೆ, ವಿಸ್ತೀರ್ಣ ಗುರುತಿಸಬೇಕು. ಕಂದಾಯ ಗ್ರಾಮ, ಗ್ರಾಮದ ಭಾಗ ಅಥವಾ ಉಪ ಗ್ರಾಮವಾಗಿ ಪರಿವರ್ತನೆಗೆ ಪ್ರಸ್ತಾವ ಸಲ್ಲಿಕೆಗೂ ಮೊದಲು ಜಿಲ್ಲಾಧಿಕಾರಿಗಳು 1961ರ ಭೂಸುಧಾರಣಾ ಕಾಯಿದೆಯ ಪ್ರಕಾರ ಅಧಿಸೂಚನೆ ಹೊರಡಿಸಬೇಕು. ಸಾರ್ವಜನಿಕ ಸಲಹೆ/ ಆಕ್ಷೇಪಣೆ ಆಹ್ವಾನಿಸಿ ರಾಜ್ಯಪತ್ರ ಪ್ರಕಟಿಸಬೇಕು. ಜನವಸತಿ ನೆಲೆಸಿರುವ ಖಾಸಗಿ ಜಮೀನಿನ ವಿಸ್ತೀರ್ಣಕ್ಕಷ್ಟೇ ಅಧಿಸೂಚನೆ ಹೊರಡಿಸಬೇಕು.ಖಾಸಗಿ ಹೆಸರಿನ ಜಾಗದಲ್ಲಿ ಭೂಮಾಲೀಕರೇ ಸ್ವತಃ ಮನೆ ನಿರ್ಮಿಸಿಕೊಂಡಿದ್ದರೆ ಅದರ ವಿಸ್ತೀರ್ಣವನ್ನು ಅಧಿಸೂಚನೆಯಲ್ಲಿ ತರುವಂತಿಲ್ಲ ಎಂದು ತಿಳಿಸಲಾಗಿದೆ.

ನಿಗದಿತ ಅವಧಿಯೊಳಗೆ ಸ್ವೀಕೃತಗೊಂಡ ಸಾರ್ವಜನಿಕ ಸಲಹೆ/ ಆಕ್ಷೇಪಣೆಗಳನ್ನು ಜಿಲ್ಲಾಧಿಕಾರಿಗಳು ಪರಿಶೀಲಿಸಿ ಸೂಕ್ತ ಲಿಖೀತ ಆದೇಶದೊಂದಿಗೆ ಆಕ್ಷೇಪಣೆ ಒಪ್ಪಬಹುದು/ ತಿರಸ್ಕರಿಸಬಹುದು ಎಂದು ಉಲ್ಲೇಖೀಸಲಾಗಿದೆ.
ತಹಸೀಲ್ದಾರ್‌ ದಾಖಲೆರಹಿತ ಜನವಸತಿಗಳಿಗೆ ಖುದ್ದಾಗಿ ತಂಡದೊಂದಿಗೆ ಭೇಟಿ ನೀಡಿ ಗ್ರಾಮವಾರು ಅರ್ಜಿ ಸ್ವೀಕರಿಸುವುದು ಸೂಕ್ತ, ತಹಸೀಲ್ದಾರ್‌ ಅರ್ಜಿಯಲ್ಲಿ ಉಲ್ಲೇಖಿಸಿರುವ ವಿವರಗಳನ್ನು ಸ್ಥಳ ಪರಿಶೀಲನೆ ನಡೆಸಿ ಸರ್ವೆ ನಂಬರ್‌, ವಿಸ್ತೀರ್ಣ ಹಾಗೂ ಗಡಿಗಳನ್ನು ನಿರ್ದಿಷ್ಟಪಡಿಸಿ ಪಟ್ಟಿ ಮಾಡಬೇಕು. ವೈಯಕ್ತಿಕ ನೋಟಿಸ್‌ ಅರ್ಜಿದಾರರು ಹಾಗೂ ಭೂಮಾಲೀಕರಿಗೆ ಕಡ್ಡಾಯವಾಗಿ ಜಾರಿಗೊಳಿಸಬೇಕು ಎಂದು ತಿಳಿಸಲಾಗಿದೆ.

Advertisement

4000 ಚ.ಮೀ. ಮಿತಿ: ಭೂಮಿಗೆ ಮಾಲೀಕರಾಗಿ ನೋಂದಾಯಿಸಲು ಅರ್ಹರಾದ ವ್ಯಕ್ತಿಗೆ 4000 ಚ.ಮೀ. ಮೀರದಂತೆ ಅಥವಾ ವ್ಯಕ್ತಿಯ ನೈಜ ಸ್ವಾಧೀನದ ಭೂಮಿಯನ್ನು ಲಿಖೀತ ಆದೇಶದ ಮೂಲಕ ನಿರ್ಧರಿಸಬೇಕು. ವಿಚಾರಣೆ ನಂತರ ಆದೇಶ ಹೊರಡಿಸಬೇಕು.

ಅರ್ಹ ಅರ್ಜಿದಾರರು ಗೊತ್ತುಪಡಿಸಿದ ಮೊತ್ತವನ್ನು ಸರ್ಕಾರಕ್ಕೆ ಪಾವತಿಸಿದ ನಂತರ ತಹಸೀಲ್ದಾರ್‌ ನಮೂನೆ- 2ಎಲ್‌ನಲ್ಲಿ ನೋಂದಣಿ ಪ್ರಮಾಣ ಪತ್ರ ನೀಡಬೇಕು. ಪ್ರಮಾಣ ಪತ್ರದ ನಕಲು ಪ್ರತಿಯನ್ನು ಉಪನೋಂದಣಾಧಿಕಾರಿಗಳಿಗೆ ನೋಂದಣಿ ಉದ್ದೇಶಕ್ಕೆ ಕಳುಹಿಸಬೇಕು ಎಂಬ ಅಂಶಗಳನ್ನು ಪಾಲಿಸುವಂತೆ ಸೂಚಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next