ಕೋಲಾರ: ಪ್ರೌಢಶಾಲಾ ಹಂತದಲ್ಲೇ ಮಕ್ಕಳು ಗುರಿ ಸಾಧನೆಗೆ ಅಗತ್ಯವಾದ ವೃತ್ತಿ ಅಥವಾ ಕೋರ್ಸಿನ ಆಯ್ಕೆಗೆ ಆಲೋಚನೆ ನಡೆಸಬೇಕು ಎಂದು ಬೆಂಗಳೂರಿನ ಗೂಗಲ್ ಕಂಪನಿ ಇಂಟಲೆಕ್ಚುಯಲ್ ಪ್ರಾಪರ್ಟೀಸ್‌ನ ನೋಂದಣಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಿ.ಎಂ.ರೋಷಿಣಿ ತಿಳಿಸಿದರು.
ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಮಕ್ಕಳೊಂದಿಗೆ ‘ಶಾಲೆಗೆ ಬನ್ನಿ ಶನಿವಾರ ಕಲಿಯಲು ನೀಡಿ ಸಹಕಾರ’ ಕಾರ್ಯಕ್ರಮದಡಿ ನಡೆದ ಸಂವಾದದಲ್ಲಿ ಮಾತನಾಡಿದರು. ಸ್ವ ಅಭಿವೃದ್ಧಿ ಮತ್ತು ವೃತ್ತಿ ಆಯ್ಕೆಯ ಕುರಿತು ಮಕ್ಕಳಿಗೆ ಅಗತ್ಯ ಮಾಹಿತಿ ಒದಗಿಸಿದರು.
ನುರಿತವರ ಸಲಹೆ ಪಡೆಯಿರಿ: ಶಿಕ್ಷಣದ ಜತೆಗೆ ಸಾಮಾನ್ಯ ಜ್ಞಾನವೂ ಅಗತ್ಯ. ನಿಮ್ಮ ಮುಂದಿನ ಜೀವನ ಉಜ್ವಲವಾಗಿರಲು ನೀವು ಗುರಿಯನ್ನು ಹೊಂದಿರಬೇಕು. ಇಂದು ಕಲಿಕೆಗೆ, ವೃತ್ತಿಜೀವನಕ್ಕೆ ಅನೇಕ ಮಾರ್ಗಗಳಿವೆ. ಅವುಗಳ ಆಯ್ಕೆಗೆ ನುರಿತವರ ಸಲಹೆ ಪಡೆಯಬೇಕೆಂದರು. ಬಡತನ ಶಾಶ್ವತವಲ್ಲ, ಅದನ್ನು ಮೆಟ್ಟಿನಿಲ್ಲುವ ಶಕ್ತಿ ಪ್ರತಿಯೊಬ್ಬರಲ್ಲೂ ಇದೆ ಆದರೆ, ಆತ್ಮವಿಶ್ವಾಸ ನಿಮ್ಮಲ್ಲಿ ಇಲ್ಲವಾದರೆ ಗುರಿ ತಲುಪಲು ಸಾಧ್ಯವಿಲ್ಲ ಎಂದರು.
ಆತ್ಮವಿಶ್ವಾಸ ಕಳೆದುಕೊಳ್ಳದಿರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಹತ್ತಿರವಾಗುತ್ತಿದೆ. ನಾನು ಎಷ್ಟು ಓದಿದರೂ ಅರ್ಥವಾಗುತ್ತಿಲ್ಲ, ಫೇಲಾಗು ತ್ತೇನೆ ಎಂದು ನೀವೇ ನಿರ್ಧರಿಸಿ ಬಿಟ್ಟರೆ ನಿಮ್ಮ ಆತ್ಮವಿಶ್ವಾಸ ಮಾಯವಾಗುತ್ತದೆ ಎಂದು ಎಚ್ಚರಿಸಿದರು.
ಕಷ್ಟಗಳನ್ನು ಎದುರಿಸಿ: ತನ್ನ ಆಶಯ ಈಡೇರಿಸಿಕೊಳ್ಳುವ ದೃಢ ನಿರ್ಧಾರ ಕೈಗೊಂಡರೆ ಅವನಿಗೆ ಎಂತಹ ಸಂಕಷ್ಟಗಳು ಎದುರಾದರೂ ಅವನು ಮೆಟ್ಟಿನಿಲ್ಲ ಬಲ್ಲ ಎಂದು ಕಿವಿಮಾತು ಹೇಳಿದರು. ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ರತ್ನಾಬಾಯಿ, ಹಿರಿಯ ಶಿಕ್ಷಕರಾದ ಎಸ್.ಅನಂತಪದ್ಮನಾಭ್, ಸತೀಶ್ ಎಸ್. ನ್ಯಾಮತಿ, ಭವಾನಿ, ಶ್ವೇತಾ, ಸುಗುಣಾ, ಲೀಲಾ, ಶ್ರೀನಿವಾಸಲು, ವೆಂಕಟರೆಡ್ಡಿ, ಫರೀದಾ, ಡಿ.ಚಂದ್ರಶೇಖರ್ ಇದ್ದರು.