Advertisement
ಅಂದು ಕನ್ನಡದ ಕೆಲ ಚಿತ್ರಗಳು ತಮ್ಮ ಟ್ರೇಲರ್, ಪೋಸ್ಟರ್ ಹಾಗು ಶೀರ್ಷಿಕೆ ಬಿಡುಗಡೆ ಮಾಡಲು ಸಜ್ಜಾಗಿವೆ. ಮೊದಲ ವಾರದಲ್ಲಿ ಹಲವು ಚಿತ್ರಗಳು ತೆರೆಗೆ ಬರುತ್ತಿವೆ. ಹೊಸಬರು ಕೂಡ ಸಿನಿಮಾಗೆ ಚಾಲನೆ ಕೊಡುತ್ತಿದ್ದಾರೆ. ಆ ಕುರಿತು ಒಂದು ರೌಂಡಪ್.
Related Articles
Advertisement
ನರ್ತನ್ ನಿರ್ದೇಶನದ “ಮಫ್ತಿ’ ಚಿತ್ರದಲ್ಲಿ ಶಿವರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಫೈಟ್ಸ್ ವಿಶೇಷತೆಗಳಲ್ಲೊಂದು ಎನ್ನುವ ಶ್ರೀಮುರಳಿ, ಕನ್ನಡ ರಾಜ್ಯೋತ್ಸವದಲ್ಲಿ ಬಿಡುಗಡೆಯಾಗುತ್ತಿರುವ ಟ್ರೇಲರ್, ನವೆಂಬರ್ ತಿಂಗಳ ಪೂರ್ತಿ, ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲೂ ಆ ಟ್ರೇಲರ್ ಕಾಣಿಸಿಕೊಳ್ಳಲಿದೆ ಎನ್ನುತ್ತಾರೆ.
ಇನ್ನು, ಆರ್.ಚಂದ್ರು ನಿರ್ದೇಶಿಸಿರುವ ದುನಿಯಾವ ವಿಜಯ್ ಅಭಿನಯದ “ಕನಕ’ ಚಿತ್ರದ ಟ್ರೇಲರ್ ಕೂಡ ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದೇ ತೆರೆಗೆ ಬರಲಿದೆ. ಈಗಾಗಲೇ ಪೋಸ್ಟರ್ ಮೂಲಕ ಒಂದಷ್ಟು ಸುದ್ದಿಯಾಗಿರುವ “ಕನಕ’ ಈಗ ದುನಿಯಾ ವಿಜಯ್ ಅಭಿಮಾನಿಗಳಿಗಾಗಿಯೇ ಚಂದ್ರು ವಿಶೇಷ ಟ್ರೇಲರ್‌ವೊಂದನ್ನು ಸಿದ್ಧಪಡಿಸಿ, ರಾಜ್ಯೋತ್ಸವದಂದು ಬಿಡುಗಡೆ ಮಾಡುತ್ತಿದ್ದಾರೆ.
ಇದರೊಂದಿಗೆ ನವೆಂಬರ್ 6 ರಂದು ಕನಕ ಜಯಂತಿ ಇರುವ ಹಿನ್ನೆಲೆಯಲ್ಲಿ, ಅಂದು “ಕನಕ’ ಚಿತ್ರದ ವಿಶೇಷ ಹಾಡೊಂದನ್ನು ಬಿಡುಗಡೆ ಮಾಡಲು ಸಜ್ಜಾಗಿದ್ದಾರೆ ಆರ್.ಚಂದ್ರು. ಅದರೊಂದಿಗೆ ನವೆಂಬರ್ 16 ರಂದು ಶಿಡ್ಲಘಟ್ಟದಲ್ಲಿ ಕಲರ್‌ಫುಲ್ ಕಾರ್ಯಕ್ರಮ ನಡೆಸುವುದರೊಂದಿಗೆ ಹಾಡುಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಿದ್ದಾರೆ ಚಂದ್ರು.
ಈಗಾಗಲೇ “ಕನಕ’ ಚಿತ್ರದ ಕೆಲಸಗಳು ಪೂರ್ಣಗೊಂಡಿದ್ದು, ನವೆಂಬರ್ ಅಂತ್ಯದಲ್ಲಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ. ಈ ಚಿತ್ರದಲ್ಲಿ ಮಾನ್ವಿತಾ ಹರೀಶ್, ಹರಿಪ್ರಿಯಾ ನಾಯಕಿಯರು. ಇಲ್ಲಿ ರಾಜ್ ಅಭಿಮಾನಿಯಾಗಿರುವ ಆಟೋಡ್ರೈವರ್ ಪಾತ್ರದಲ್ಲಿ ಮೊದಲ ಸಲ ದುನಿಯಾ ವಿಜಯ್ ನಟಿಸಿದ್ದಾರೆ. ಆರ್.ಚಂದ್ರು ನಿರ್ದೇಶನದ ಜತೆ ನಿರ್ಮಾಣವನ್ನೂ ಮಾಡಿದ್ದಾರೆ.
ಇನ್ನು, ಶಿವರಾಜ್‌ಕುಮಾರ್ ಅವರ ಸಂಬಂಧಿ ಲಕ್ಕಿಗೋಪಾಲ್ ಅವರು ಇದೇ ಮೊದಲ ಬಾರಿಗೆ ಶಿವರಾಜ್‌ಕುಮಾರ್ ಅವರ ಚಿತ್ರವೊಂದನ್ನು ನಿರ್ದೇಶಿಸಲಿದ್ದು, ನವೆಂಬರ್ 1 ರ ಕನ್ನಡ ರಾಜ್ಯೋತ್ಸವದಂದೇ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಲಿದ್ದಾರೆ. ಡಾ.ರಾಜ್‌ಕುಟುಂಬದವರಿಂದಲೇ ಆ ಶೀರ್ಷಿಕೆಯನ್ನು ಬಿಡುಗಡೆ ಮಾಡುವ ಮೂಲಕ ಚಿತ್ರಕ್ಕೆ ಚಾಲನೆ ಕೊಡಲಿದ್ದಾರೆ.
ಈ ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ ವಿಶೇಷ ಪಾತ್ರ ಕಟ್ಟಿಕೊಡುವ ಮೂಲಕ ರಾಜ್ ಕುಟುಂಬದಲ್ಲಿ ಮೊದಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಲಕ್ಕಿ. ಅನೂಪ್ ಭಂಡಾರಿ ನಿರ್ದೇಶನದ “ರಾಜರಥ’ ಚಿತ್ರದ ಪೋಸ್ಟರ್ ಈಗಾಗಲೇ ಬಿಡುಗಡೆಯಾಗಿದೆ. ಆದರೆ, ಕನ್ನಡ ರಾಜ್ಯೋತ್ಸವದಂದೇ ಚಿತ್ರದ ಇನ್ನೊಂದು ವಿಶೇಷ ಪೋಸ್ಟರ್ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದ್ದು, ಅಂದು ವಿಶೇಷ,
ವಿಭಿನ್ನವಾಗಿರುವಂತಹ ಪೋಸ್ಟರ್ ರಿಲೀಸ್ ಮಾಡಲು ಅನೂಪ್ ಭಂಡಾರಿ ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ನಿರೂಪ್ ಭಂಡಾರಿ ಹೀರೋ ಆಗಿದ್ದಾರೆ. ರವಿಶಂಕರ್ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ “ಕರ್ವ’ ಖ್ಯಾತಿಯ ನವನೀತ್ ನಿರ್ದೇಶನದ ರವಿಚಂದ್ರನ್ ಅಭಿನಯದ “ಬಕಾಸುರ’ ಚಿತ್ರದ ಮೊದಲ ಟ್ರೇಲರ್ ಕೂಡ ನವೆಂಬರ್ ಮೊದಲ ವಾರದಲ್ಲೇ ಬಿಡುಗಡೆಯಾಗಲಿದೆ.
ದುನಿಯಾ ಸೂರಿ ನಿರ್ದೇಶನದ “ಟಗರು’ ಚಿತ್ರದ ಟೀಸರ್ ಕೂಡ ನವೆಂಬರ್ 7 ರಂದು ಬಿಡುಗಡೆಯಾಗುತ್ತಿದ್ದು, ಶಿವಣ್ಣ ಅಭಿಮಾನಿಗಳೇ ಪ್ರೀತಿಯಿಂದ ಕಾರ್ಯಕ್ರಮ ಆಯೋಜಿಸಿ, ಟೀಸರ್ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡ ರಾಜ್ಯೋತ್ಸವ ದಿನದಂದು ಇನ್ನು ಅನೇಕ ಚಿತ್ರತಂಡದವರು ಹಾಡು, ಟೀಸರ್, ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾರೆ. ನವೆಂಬರ್ ಮೊದಲ ವಾರದಲ್ಲಿ ಕನ್ನಡದ ಕೆಲ ಚಿತ್ರಗಳು ಬಿಡುಗಡೆಯಾಗುತ್ತಿರುವುದು ವಿಶೇಷ.