ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯಲ್ಲಿ ಅನ್ಯ ಧರ್ಮಿಯರಿಗೆ ಮಳಿಗೆ ಹಾಕಲು ಅವಕಾಶವಿಲ್ಲ ಎಂಬ ವಿವಾದಕ್ಕೆ ಶ್ರೀ ಕೋಟೆ ಮಾರಿಕಾಂಬಾ ಸೇವಾ ಸಮಿತಿ ಸ್ಪಷ್ಟನೆ ನೀಡಿದೆ. ಯಾವ ಸಮುದಾಯದವರನ್ನು ಹೊರಗಿಟ್ಟು ಮಾರಿಕಾಂಬಾ ಜಾತ್ರೆ ಮಾಡಲಾಗುತ್ತಿಲ್ಲ. ಹೀಗಾಗಿ, ಯಾರೂ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಮಿತಿ ಅಧ್ಯಕ್ಷ ಎಸ್.ಕೆ.ಮರಿಯಪ್ಪ ಮನವಿ ಮಾಡಿದರು.
ಭಾನುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಿದ್ಧ ಕೋಟೆ ಮಾರಿಕಾಂಬಾ ದೇವಿ ದೇವಸ್ಥಾನಕ್ಕೆ ಶಿವಮೊಗ್ಗದ ಸರ್ವ ಧರ್ಮಿಯರು ನಡೆದುಕೊಳ್ಳುತ್ತಾರೆ. ಜಾತ್ರೆಯ ಸಿದ್ಧತೆಯ ಹಲವು ಕೆಲಸಗಳಲ್ಲಿ ಅವರು ತೊಡಗಿಸಿಕೊಳ್ಳುತ್ತಾರೆ. ಕ್ರೈಸ್ತ ಸಮುದಾಯದ ನಿಯೋಗ ದೇವಸ್ಥಾನಕ್ಕೆ ಭೇಟಿ ನೀಡಿತ್ತು. ವಾಹನಗಳ ಪಾರ್ಕಿಂಗ್ಗೆ ವ್ಯವಸ್ಥೆ ಕಲ್ಪಿಸುವ ಕುರಿತು ಚರ್ಚೆ ಮಾಡಿದ್ದಾರೆ. ಆದರೆ ಕೆಲವರು ಗೊಂದಲ ಸೃಷ್ಟಿ ಮಾಡಲಾಗಿದೆ. ಜಾತ್ರೆಯಲ್ಲಿ ಎಲ್ಲರೂ ತೊಡಗಿಸಿಕೊಳ್ಳಬಹುದು, ಎಲ್ಲರೂ ದೇವಿಯ ಪೂಜೆ ಮಾಡಬಹುದು. ಹೀಗಾಗಿ, ಜನರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಿದರು.
ಮಳಿಗೆ ಹರಾಜು ಸಂಬಂಧ ನಾಗರಾಜು ಎಂಬವವರು ಟೆಂಡರ್ ಪಡೆದಿದ್ದಾರೆ. 9.01 ಲಕ್ಷ ರೂ. ಗೆ ಟೆಂಡರ್ ನೀಡಲಾಗಿದೆ. ಅವರು ಮಳಿಗೆಗಳನ್ನು ಯಾರಿಗೆ ಬೇಕಿದ್ದರೂ ಕೊಡಬಹುದು. ಇದಕ್ಕೂ ದೇವಸ್ಥಾನದ ಆಡಳಿತ ಮತ್ತು ಜಾತ್ರೆ ಸಮಿತಿಗೂ ಸಂಬಂಧವಿಲ್ಲ ಎಂದು ಎಸ್.ಕೆ.ಮರಿಯಪ್ಪ ತಿಳಿಸಿದರು.
ಜೀವ ಬೆದರಿಕೆ
ಇನ್ನು, ಟೆಂಡರ್ ವಿಚಾರವಾಗಿ ಜೀವ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ಈ ಮೊದಲು ಚಿಕ್ಕ ಎಂಬುವವರು ಟೆಂಡರ್ ಪಡೆದಿದ್ದರು. ಅವರಿಗೆ ಕೆಲವರು ಜೀವ ಬೆದರಿಕೆ ಒಡ್ಡಿದ್ದರಿಂದ ಟೆಂಡರ್ ಹಿಂತಿರುಗಿಸಿದ್ದಾರೆ. ಆಮೇಲೆ ನಾಗರಾಜು ಎಂಬುವವರು ಟೆಂಡರ್ ಪಡೆದುಕೊಂಡಿದ್ದಾರೆ ಎಂದರು. ಈ ಬಾರಿ ಕೋಟೆ ಮಾರಿಕಾಂಬಾ ದೇವಿ ದೇವಸ್ಥಾನದ ಸುತ್ತಮತ್ತ ಮಳಿಗೆ ಹಾಕಲು ಅವಕಾಶವಿಲ್ಲ. ಪೊಲೀಸ್ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊಳೆ ಬಸ್ ಸ್ಟಾಪ್‌ಗೆ ತೆರಳುವ ರಸ್ತೆ, ಎಸ್.ಪಿ. ರಸ್ತೆ, ದೇವಸ್ಥಾನದ ಹಿಂಭಾಗ ಕೃಷ್ಣ ಕೆಫೆಗೆ ಹೋಗುವ ರಸ್ತೆಯಲ್ಲಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಲಾಗಿದೆ. ಆದರೆ ದೇವಸ್ಥಾನದ ಸಮೀಪ ಮಳಿಗೆ ಹಾಕದಂತೆ ಷರತ್ತು ವಿಧಿಸಲಾಗಿದೆ ಎಂದು ತಿಳಿಸಿದರು.
ಮಳಿಗೆಗಳನ್ನು ನೀಡುವ ವಿಚಾರದಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಟೆಂಡರ್ ಪಡೆದಿರುವ ವ್ಯಕ್ತಿಯೊಂದಿಗೆ ಮಾತನಾಡಲಾಗುವುದು. ಈ ಸಲ ಉಂಟಾಗಿರುವ ಗೊಂದಲದಿಂದ ಪಾಠ ಕಲಿತಿದ್ದೇವೆ. ಇದು ಮುಂದಿನ ದಿನಗಳಲ್ಲಿ ಪುನರಾವರ್ತನೆ ಆಗದಂತೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.
ಈ ಮುಂಚಿನಿಂದಲೂ ಎಲ್ಲ ಧರ್ಮೀಯರು ಜಾತ್ರೆಯಲ್ಲಿ ಮಳಿಗೆಗಳನ್ನು ಹಾಕುತ್ತಾ ಬಂದಿದ್ದಾರೆ. ಕೋಟೆ ಮಾರಿಕಾಂಬಾ ಜಾತ್ರೆ ಸರ್ವ ಧರ್ಮೀಯರನ್ನು ಒಳಗೊಂಡಿರುವಂತಹದ್ದು. ಯಾರೂ ವದಂತಿಗಳಿಗೆ ಕಿವಿಗೊಡದೆ ಶಾಂತಿಯುತವಾಗಿ ಜಾತ್ರಾ ಮಹೋತ್ಸವಕ್ಕೆ ಅವಕಾಶ ಮಾಡಿಕೊಟ್ಟು ಸಹಕರಿಸಬೇಕು ಎಂದು ಕೋರಿದರು.