Advertisement

ನೆಲೆ ನೀಡಿದ ಊರಿಗೆ ಕೊಡುಗೆ ನೀಡಿ

12:36 PM Nov 04, 2018 | Team Udayavani |

ಮೈಸೂರು: ಬಂಟ ಸಮುದಾಯದ ಯುವ ಜನಾಂಗ ದುಡಿಮೆ, ಸಂಪಾದನೆಗಾಗಿ ಎಲ್ಲಿಗೇ ಹೋದರೂ ಅಲ್ಲಿನ ಜನಜೀವನದ ಜೊತೆಗೆ ಹೊಂದಿಕೊಂಡು ನ್ಯಾಯಯುತ ಸಂಪಾದನೆ ಮಾಡಿ, ನೆಲೆ ಕಂಡುಕೊಂಡಲ್ಲಿಗೆ ನಿಮ್ಮ ಕೊಡುಗೆ ನೀಡಿ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಿವಿಮಾತು ಹೇಳಿದರು.

Advertisement

ಬಂಟರ ಸಂಘ ಮೈಸೂರು ಹಾಗೂ ಬಂಟರ ಸಂಘ ಮೈಸೂರು ಚಾರಿಟಬಲ್‌ ಟ್ರಸ್ಟ್‌ವತಿಯಿಂದ ಮೈಸೂರಿನ ವಿಜಯ ನಗರ 3ನೇ ಹಂತದಲ್ಲಿ ನಿರ್ಮಿಸಿರುವ ಆಶಾ ಪ್ರಕಾಶ್‌ ಶೆಟ್ಟಿ ಬಂಟ್ಸ್‌ ಕನ್ವೆನ್‌ಷನ್‌ ಹಾಲ್‌ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಂಟರು ಶ್ರಮಜೀವಿಗಳು: ರಾಷ್ಟ್ರದ ಯಾವ ಮೂಲೆಗೆ ಹೋದರೂ ಅಲ್ಲೊಂದು ಬಂಟರ ಸಂಘ, ಬಂಟರ ಭವನ ಕಾಣಬಹುದು. ಶ್ರಮಜೀವಿಗಳಾದ ಬಂಟರು ತಮಿಳುನಾಡಿಗೆ ತಮಿಳರಾಗಿ, ಆಂಧ್ರಕ್ಕೆ ಹೋದರೆ ತೆಲುಗರಾಗಿ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ಬಿ.ಆರ್‌.ಶೆಟ್ಟಿ ಅಬುಧಾಬಿಯವರೇ ಆಗಿಬಿಟ್ಟಿದ್ದಾರೆ.

ಪ್ರಕಾಶ್‌ಶೆಟ್ಟಿಯವರು ಸಣ್ಣ ಉದ್ಯಮ ಆರಂಭಿಸಿ ಇಂದು ದೊಡ್ಡ ಉದ್ಯಮಿಯಾಗಿದ್ದಾರೆ. ಬಂಟರು ಶ್ರಮಜೀವಿಗಳು ಎಲ್ಲಾ ಜನರೊಂದಿಗೆ ಬೆರೆಯುವ ಗುಣದಿಂದಾಗಿಯೇ ಬಂಟರು ಎಲ್ಲಿ ಹೋದರು ಉಳಿದು-ಬೆಳೆಯಬಲ್ಲರು ಎಂಬ ಮಾತಿದೆ, ಇದನ್ನು ಯುವ ಜನಾಂಗ ಮನಗಾಣಬೇಕು ಎಂದರು.

ನಿಸ್ವಾರ್ಥ ದಾನ: ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೇ ವಾಪಸ್‌ ಕೊಡಬೇಕು. ಎರಡು ಕೈಗಳಿಂದ ಸಂಪಾದನೆ ಮಾಡಿದ್ದನ್ನು ಹತ್ತು ಕೈಗಳಿಂದ ದಾನಮಾಡಿ, ದಾನ-ಧರ್ಮ-ಪರೋಪಕಾರ ಮಾಡಿದವರ ಪುಣ್ಯವೃದ್ಧಿಯಾಗುತ್ತದೆ. ದಾನದಲ್ಲಿ ಸ್ವಾರ್ಥಪರತೆ ಇರದೆ, ನಾನು ಸುಖವಾಗಿದ್ದು ನನ್ನ ಸುತ್ತಮುತ್ತಲಿನ ಸಮಾಜವೂ ಸುಖವಾಗಿರಲಿ ಎಂದು ಆಶಿಸಿ ದಾನ ಮಾಡಬೇಕು ಎಂದು ಹೇಳಿದರು.

Advertisement

ಬಂಟರ ಭವನ ಸಂಕೀರ್ಣ ಉದ್ಘಾಟಿಸಿದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ಬಂಟ ಸಮುದಾಯದ ಜನ ಕಡಿಮೆ ಸಂಖ್ಯೆಯಲ್ಲಿದ್ದರೂ ಪ್ರಪಂಚದಾದ್ಯಂತ ಹರಡಿದ್ದು, ತಮ್ಮ ಪ್ರತಿಭೆಯಿಂದ ಶಿಕ್ಷಣ, ಉದ್ಯಮ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಮಾಜಿ ಸಚಿವ ಬಿ.ರಮಾನಾಥ ರೈ, ಮಾಜಿ ಶಾಸಕ ವಾಸು, ಅಬುಧಾಬಿಯ ಎನ್‌ಎಂಸಿ ಹೆಲ್ತ್‌ಕೇರ್‌ನ ಅಧ್ಯಕ್ಷ ಡಾ.ಬಿ.ಆರ್‌.ಶೆಟ್ಟಿ, ಮಂಗಳೂರಿನ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಬೆಂಗಳೂರಿನ ಎಂಆರ್‌ಜಿ ಸಮೂಹ ಸಂಸ್ಥೆ ಅಧ್ಯಕ್ಷ ಕೆ.ಪ್ರಕಾಶ್‌ ಶೆಟ್ಟಿ, ಎಫ್ಕೆಸಿಸಿಐ ಅಧ್ಯಕ್ಷ ಸುಧಾಕರ ಎಸ್‌.ಶೆಟ್ಟಿ, ಟ್ರಸ್ಟಿಗಳಾದ ಕೆ.ಗಣೇಶ್‌ ನಾರಾಯಣ ಹೆಗ್ಡೆ, ಎಂ.ನಂದ್ಯಪ್ಪಶೆಟ್ಟಿ ಇತರರು ಉಪಸ್ಥಿತರಿದ್ದರು. ಮೈಸೂರು ಬಂಟರ ಸಂಘದ ಅಧ್ಯಕ್ಷ ಟಿ.ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮೈಸೂರಿಗೆ ಬಂದರೆ ರೋಮಾಂಚನ: ತನಗೆ ಬಾಲ್ಯದಿಂದಲೂ ಮೈಸೂರು ನಗರ ಬಹಳ ಪ್ರಿಯವಾದ ಊರು. ಇಲ್ಲಿಗೆ ಬಂದಾಗ ಅರಮನೆ, ಸುತ್ತಮುತ್ತಲಿನ ಪ್ರಾಚೀನ ಕಟ್ಟಡಗಳನ್ನು ನೋಡಿದಾಗ ಸಂತೋಷವಾಗುತ್ತಿತ್ತು.

ರಾಜರ ಆಳ್ವಿಕೆಯಿಂದಾಗಿ ಮೈಸೂರು ರಾಜ್ಯವಾಗಿದ್ದಾಗಿನಿಂದಲೂ ಇಲ್ಲಿನ ಜನರ ಆಚಾರ-ವಿಚಾರ, ನಡೆ-ನುಡಿಗಳು ವಿಭಿನ್ನ. ದಸರಾ, ದೀಪಾವಳಿ ಹಬ್ಬಗಳ ಆಚರಣೆ ಇಲ್ಲಿನ ಜನರಿಗೆ ಸಂಸ್ಕಾರ ಕಲಿಸಿದೆ. ಹೀಗಾಗಿ ಮೈಸೂರಿಗೆ ಬಂದಾಗ ನನಗೆ ರೋಮಾಂಚನವಾಗುತ್ತಿತ್ತು ಎಂದು ಡಾ.ಡಿ.ವೀರೇಂದ್ರಹೆಗ್ಗಡೆ ಸ್ಮರಿಸಿದರು.

ಇತ್ತೀಚಿನ ವರ್ಷಗಳಲ್ಲಿ ಮೈಸೂರು ನಗರಕ್ಕೂ ಹೂಡಿಕೆ ಹೆಚ್ಚುತ್ತಿದೆ. ಆದರೂ ಬೆಂಗಳೂರಿನಂತೆ ದೈತ್ಯಾಕಾರವಾಗಿ ಬೆಳೆಯದೆ ಸಾಂಸ್ಕೃತಿಕ ನಗರಿಯಾಗೇ ಉಳಿದಿದೆ ಎಂದ ಅವರು, ಮೈಸೂರಿನಲ್ಲಿ ಬದುಕುಕಟ್ಟಿಕೊಂಡವರು ಈ ನಗರಕ್ಕೆ ಕೊಡುಗೆ ನೀಡಬೇಕಿದೆ. ಅನೇಕ ಜನರ ತ್ಯಾಗದಿಂದ ಇಂತಹದೊಂದು ಭವ್ಯ ಭವನ ನಿರ್ಮಾಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next