Advertisement

ಪೌರಕಾರ್ಮಿಕರಿಗೆ ಗುತ್ತಿಗೆದಾರರ ಬೆದರಿಕೆ

11:51 AM Aug 29, 2017 | Team Udayavani |

ಬೆಂಗಳೂರು: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿದ್ದರೂ ಸಮರ್ಪಕವಾಗಿ ವಿಲೇವಾರಿ ಮಾಡುವಲ್ಲಿ ಆಡಳಿತ ಪಕ್ಷ ವಿಫ‌ಲವಾಗಿದೆ ಎಂದು ಆರೋಪಿಸಿ ಪಾಲಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.

Advertisement

ಸೋಮವಾರ ಬಿಬಿಎಂಪಿ ಕೇಂದ್ರ ಕಚೇರಿಯ ಕೌನ್ಸಿಲ್‌ ಕಟ್ಟಡ ಮುಂಭಾಗದಲ್ಲಿ ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸದಸ್ಯರು, ತ್ಯಾಜ್ಯ ವಿಲೇವಾರಿಯನ್ನು ಅಧಿಕಾರಿಗಳಾದರೂ ಮಾಡಲಿ ಅಥವಾ ಗುತ್ತಿಗೆದಾರರೇ ಮಾಡಲಿ ಮೊದಲು ತ್ಯಾಜ್ಯ ವಿಲೇವಾರಿ ಮಾಡಿ ಎಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಪದ್ಮನಾಭರೆಡ್ಡಿ, ನಗರದಲ್ಲಿ ಎರಡು ಮೂರು ದಿನಗಳಿಂದ ಸುಮಾರು 5 ರಿಂದ 8 ಸಾವಿರ ಟನ್‌ನಷ್ಟು ತ್ಯಾಜ್ಯ ವಿಲೇವಾರಿಯಾಗದೆ ಉಳಿದಿದೆ. ಪರಿಣಾಮ ನಗರದಲ್ಲಿ ರೋಗಗಳು ಹರಡುವ ಭೀತಿ ಎದುರಾಗಿದ್ದು, ಶೀಘ್ರ ತ್ಯಾಜ್ಯ ವಿಲೇವಾರಿ ನಡೆಸದಿದ್ದರೆ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ.

ಪೌರಕಾರ್ಮಿಕರಿಗೆ ಸಮರ್ಪಕವಾಗಿ ವೇತನ ಬಿಡುಗಡೆಯಾಗುತ್ತಿಲ್ಲ. ಇದು ಹೀಗೆ ಮುಂದುವರಿದರೆ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸುವುದಾಗಿ ಆಗಸ್ಟ್‌ 24ರಂದು ಮೇಯರ್‌ಗೆ ಮನವಿ ನೀಡಿದ್ದಾರೆ. ಆದರೂ ಎಚ್ಚೆತ್ತುಕೊಳ್ಳದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ನಗರದಲ್ಲಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ್ದು, ಎಲ್ಲ ವಾರ್ಡ್‌ಗಳಲ್ಲಿ ರಾಶಿ ರಾಶಿ ತ್ಯಾಜ್ಯ ಬಿದ್ದಿದೆ. ಶೀಘ್ರ ವೇತನ ಬಿಡುಗಡೆಗೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಬಿಬಿಎಂಪಿ ಅಧಿಕಾರಿಗಳು ತ್ಯಾಜ್ಯ ವಿಲೇವಾರಿಗೆ ಟೆಂಡರ್‌ ಕರೆಯದೆ ಅಧಿಕಾರಿಗಳ ಮೂಲಕವಾಗಿ ತ್ಯಾಜ್ಯ ವಿಲೇವಾರಿಗೆ ಮುಂದಾಗಿರುವುದರಿಂದ ಪಾಲಿಕೆಗೆ ಕೋಟ್ಯಂತರ ನಷ್ಟವಾಗಿದೆ. ಟೆಂಡರ್‌ ಕರೆಯದೆ ತ್ಯಾಜ್ಯ ವಿಲೇವಾರಿ ಮಾಡುತ್ತಿರುವುದರಿಂದಾಗಿ ಸುಮಾರು 200 ಕೋಟಿ ರೂ. ಸೇವಾ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್‌ ಬಂದಿದೆ ಎಂದು ದೂರಿದರು.

Advertisement

ಕಾರ್ಮಿಕರು ಬೀದಿಗೆ ಬೀಳ್ತಾರೆ!
ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಹೊಸ ನಿಯಮವನ್ನು ಕೈಬಿಡಬೇಕೆಂದು ಒತ್ತಾಯಿಸಿ ತ್ಯಾಜ್ಯ ವಿಲೇವಾರಿ ಗುತ್ತಿಗೆದಾರರು ಸಹ ಸೋಮವಾರ ಮೌನ ಪ್ರತಿಭಟನೆ ನಡೆಸಿದರು. ಸರ್ಕಾರದ ಹೊಸ ನಿಯಮದಿಂದಾಗಿ ಪೌರಕಾರ್ಮಿಕರ ಸಂಖ್ಯೆ ಕಡಿತವಾಗಲಿದ್ದು, ನೂರಾರು ಕಾರ್ಮಿಕರು ಬೀದಿಗೆ ಬರಲಿರುವುದರಿಂದ ನಿಯಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. 

ಎಲ್ಲ ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಿಗೆ ನೂತನ ನಿಯಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ಅದರಂತೆ ಪ್ರತಿ 700 ಮಂದಿಗೆ ಒಬ್ಬರಂತೆ ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರದ ಚಿಂತನೆ ನಡೆಸಿದೆ. ಇದರಿಂದಾಗಿ ನಗರದಲ್ಲಿನ ಪೌರಕಾರ್ಮಿಕರ ಸಂಖ್ಯೆ ಕುಸಿಯಲಿದೆ. ಸದ್ಯ ಪ್ರತಿ ವಾರ್ಡ್‌ನಲ್ಲಿ 150 ರಿಂದ 160 ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದು, ಹೊಸ ನಿಯಮದಿಂದ ಅವರ ಸಂಖ್ಯೆ 70 -80ಕ್ಕೆ ಇಳಿಯಲಿದೆ ಎಂಬುದು ಗುತ್ತಿಗೆದಾರರ ಆತಂಕವಾಗಿದೆ. 

ಇದರೊಂದಿಗೆ 2004ರಿಂದ 2017ರರ ವರೆಗೆ 200 ಕೋಟಿ ರೂ. ಸೇವಾ ತೆರಿಗೆ ಪಾವತಿಸಬೇಕಿದೆ. ಬಿಬಿಎಂಪಿ ಅಧಿಕಾರಿಗಳು ಕಸ ಸರಬರಾಜು ಡಿಪಾರ್ಟ್‌ಮೆಂಟ್‌ ವರ್ಕ್‌ ಎಂಬ ಕಾರ್ಯಾದೇಶದಿಂದ ಸಮಸ್ಯೆಯಾಗಿದೆ. ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕುರಿತು ಆಯುಕ್ತರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಗುತ್ತಿಗೆದಾರ ಬಾಲಸುಬ್ರಹ್ಮಣ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪೌರಕಾರ್ಮಿಕರಿಗೆ ಗುತ್ತಿಗೆದಾರರಿಂದ ಬೆದರಿಕೆ
ಕೆಲಸ ಮಾಡಲು ಮುಂದಾದ ಪೌರಕಾರ್ಮಿಕರಿಗೆ ಗುತ್ತಿಗೆದಾರರು ಬೆದರಿಕೆ ಹಾಕಿ ತ್ಯಾಜ್ಯ ವಿಲೇವಾರಿ ಸ್ಥಗಿತಗೊಳಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ ಆರೋಪಿಸಿದೆ. 

ಈ ಕುರಿತು ಪ್ರತಿಕ್ರಿಯೆ ನೀಡಿದ ಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಆಂಜನೇಯಲು, ಸೋಮವಾರ ಎಂದಿನಂತೆ ಪೌರ ಕಾರ್ಮಿಕರು ತ್ಯಾಜ್ಯ ವಿಲೇವಾರಿಗೆ ಮುಂದಾಗಿದ್ದಾರೆ. ಆದರೆ, ಗುತ್ತಿಗೆದಾರರು ಅವರನ್ನು ಬೆದರಿಸಿ, ಒತ್ತಡ ಹಾಕಿ ಮನೆಗಳಿಗೆ ವಾಪಸ್‌ ಕಳುಹಿಸಿದ್ದಾರೆ. ಆದರೂ ಕೆಲವೊಂದು ಭಾಗಗಳಲ್ಲಿ ಪೌರಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. 

ವೇತನ ಬಿಡುಗಡೆಯಾಗಿದೆ
ಪೌರಕಾರ್ಮಿಕರಿಗೆ ವೇತನ ಬಿಡುಗಡೆಯಾಗಿಲ್ಲ ಎಂಬ ಆರೋಪಗಳು ಸತ್ಯಕ್ಕೆ ದೂರ ಎಂದು ಪೌರಕಾರ್ಮಿಕರ ಮಹಾಸಂಘದ ಪ್ರಧಾನ ಕಾರ್ಯದರ್ಶಿ ಎನ್‌.ಆಂಜನೇಯಲು ಹೇಳಿದ್ದಾರೆ. ಕೇಂದ್ರ ಕಚೇರಿಯಿಂದ 142 ಕೋಟಿ ರೂ. ಬಿಡುಗಡೆಯಾಗಿದ್ದು, ವಲಯ ಮಟ್ಟದಲ್ಲಿ ಖಾತೆಗೆ ಜಮೆಯಾಗುವುದು ತಡವಾಗಿದೆ ಎಂದಿದ್ದಾರೆ.

ಗುತ್ತಿಗೆದಾರರು ಪೌರಕಾರ್ಮಿಕರಿಗೆ ಎರಡು ಮೂರು ದಿನಗಳ ಕಾಲ ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡಬೇಡಿ ಎಂದು ಸೂಚಿಸಿದ್ದು, ಕೆಲಸಕ್ಕೆ ಬರದಿದ್ದರೂ ಸಂಬಳ ನೀಡುವುದಾಗಿ ತಿಳಿಸಿದ್ದಾರೆ. ಆದರೂ ಕೆಲಸ ಮಾಡಲು ಮುಂದಾದ ಕಾರ್ಮಿಕರಿಗೆ ಬೆದರಿಕೆ ಹಾಕಿದ್ದು, ವಿಷಯವನ್ನು ಆಯುಕ್ತರ ಗಮನಕ್ಕೆ ತಂದಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next