ಬೀದರ: ಪಡಿತರ ಅಕ್ಕಿ ಅಕ್ರಮ ಅಡ್ಡೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ವಾರದಿಂದ ಜಿಲ್ಲಾದ್ಯಂತ ನಡೆಸುತ್ತಿರುವ ದಾಳಿ ಶನಿವಾರವೂ ಮುಂದುವರಿದಿದೆ. ನಗರದಲ್ಲಿ ಅಪಾರ ಪ್ರಮಾಣದ ಅಕ್ಕಿ ಮೂಟೆಗಳು ಪತ್ತೆಯಾಗಿವೆ. ಈ ವೇಳೆ ಡೈರಿಯೊಂದು ಪತ್ತೆಯಾಗಿದ್ದು, ಪ್ರಭಾವಿ ರಾಜಕಾರಣಿಗಳ ಹೆಸರು ಉಲ್ಲೇಖವಿದೆ ಎಂದು ತಿಳಿದು ಬಂದಿದೆ.
ನಗರದ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಗೋದಾಮುಗಳಲ್ಲಿ ಅಕ್ರಮ ಪಡಿತರ ಧಾನ್ಯ ಸಂಗ್ರಹ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಧಿಕಾರಿ ಡಾ. ಎಚ್.ಆರ್. ಮಹಾದೇವ ಮಾರ್ಗದರ್ಶನದಲ್ಲಿ, ಎಸ್‌ಪಿ ಟಿ.ಶ್ರೀಧರ್ ಹಾಗೂ ಆಹಾರ ಇಲಾಖೆ ಉಪನಿರ್ದೇಶಕ ಅರುಣಕುಮಾರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಗೋದಾಮಿನಲ್ಲಿನ ಅಕ್ಕಿ, ಕ್ಷೀರಭಾಗ್ಯ ಹಾಲಿನ ಪುಡಿ, ತೊಗರಿ ಬೇಳೆ ಪತ್ತೆಯಾಗಿವೆ. ಶನಿವಾರ ಬೆಳಗ್ಗೆಯಿಂದ ಅ ಧಿಕಾರಿಗಳು ಪರಿಶಿಲನೆ ನಡೆಸಿ ಸರ್ಕಾರಿ ಅಕ್ಕಿ ಎಂದು ಖಚಿತ ಪಡಿಸಿಕೊಂಡು ಗೋದಾಮಿನಲ್ಲಿದ್ದ ದಾಸ್ತಾನು ಲಾರಿಯಲ್ಲಿ ತುಂಬಿಸಿದ್ದಾರೆ. ಶನಿವಾರ ಸಂಜೆವರೆಗೂ ಕೂಡ ಎಷ್ಟು ಪ್ರಮಾಣದ ದಾಸ್ತಾನು ಎಂಬುದು ತಿಳಿದುಬಂದಿಲ್ಲ. ಆದರೆ, ನೂರಾರು ಕ್ವಿಂಟಲ್ ಅಕ್ಕಿ ಇರುವ ಬಗ್ಗೆ ಅಧಿ ಕಾರಿಗಳು ತಿಳಿಸಿದ್ದಾರೆ.
“ಉದಯವಾಣಿ’ ಪ್ರಕಟಿಸಿದ ಸುದ್ದಿಯಿಂದ ಎಚ್ಚೆತ್ತುಕೊಂಡು ಅಧಿ ಕಾರಿಗಳು ಜಿಲ್ಲೆಯ ವಿವಿಧೆಡೆ ದಾಳಿ ನಡೆಸಿದ್ದಾರೆ. ಅಕ್ರಮ ಪಡಿತರ ಅಕ್ಕಿಗೆ ಕನ್ನ ಹಾಕುತ್ತಿರುವ ಜಾಲ ಪತ್ತೆಗೆ ಜಿಲ್ಲಾ ಧಿಕಾರಿ ಡಾ. ಎಚ್.ಆರ್. ಮಹಾದೇವ ಆಹಾರ ಇಲಾಖೆ ಅ ಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.
ಡೈರಿಯಲ್ಲೇನಿದೆ?
ಗೋದಾಮಿನ ಮೇಲೆ ದಾಳಿ ನಡೆಸಿದಾಗ ಡೈರಿವೊಂದು ಪತ್ತೆಯಾಗಿದೆ. ಡೈರಿಯಲ್ಲಿ ದಾಸ್ತಾನು ಎಲ್ಲಿಂದ ತರಿಸಲಾಗಿದೆ, ಎಷ್ಟು ಪ್ರಮಾಣದಲ್ಲಿ ಬಂದಿದೆ, ಯಾರಿಗೆ ನೀಡಲಾಗಿದೆ ಹಾಗೂ ಯಾರಿಗೆ ಎಷ್ಟು ಪ್ರಮಾಣದ ಹಣ ನೀಡಲಾಗಿದೆ ಎಂಬ ಕುರಿತು ಕೋಡ್ ವರ್ಡ್‌ನಲ್ಲಿ ಬರೆಯಲಾಗಿದೆ. ಜೊತೆಗೆ, ಡೈರಿಯಲ್ಲಿ ಪ್ರಭಾವಿ ರಾಜಕಾರಣಿಗಳ ಹೆಸರು ಇದೆ ಎಂದು ಅಧಿಕಾರಿಗಳು ತಿಳಿಸಿದ್ದು, ಈ ಬಗ್ಗೆ ಖಚಿತ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.