ಹರಿಹರ: ಪರಿಶಿಷ್ಟ ಪಂಗಡದ ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ ರಾಜನಹಳ್ಳಿಯಿಂದ ಬೆಂಗಳೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ತಾಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಭಾನುವಾರ ವಾಲ್ಮೀಕಿ ಪ್ರಸನ್ನಾನಂದ ಶ್ರೀಗಳು ಚಾಲನೆ ನೀಡಿದರು.
ಮಠದ ಆವರಣದಲ್ಲಿರುವ ಲಿಂ| ಪುಣ್ಯಾನಂದಪುರಿ ಶ್ರೀಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿದ ನಂತರ ಪಾದಯಾತ್ರೆಗೆ ಚಾಲನೆ ನೀಡಿದ ಅವರು, “ಜನಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ಪಂಗಡಕ್ಕೆ ಅಗತ್ಯ ಮೀಸಲಾತಿ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಕೂಡಲೇ ಎಸ್ಟಿ ವರ್ಗದ ಮೀಸಲಾತಿಯನ್ನು ಶೇ.3 ರಿಂದ ಶೇ 7.5ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.
ಎಸ್ಟಿ ಪಂಗಡಕ್ಕೆ ಮೀಸಲಾತಿ ಹೆಚ್ಚಿಸುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ್ದರೂ ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶ್ರೀಗಳು, ಹೋರಾಟಕ್ಕೆ ಸರ್ಕಾರ ಸ್ಪಂದಿಸದಿದ್ದರೆ ನಿರಂತರ ಧರಣಿ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ವಾಲ್ಮೀಕಿ ಜನಾಂಗಕ್ಕೆ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂಬುದನ್ನು ಹಿಂದಿನಿಂದಲೂ ಎಲ್ಲಾ ಸರ್ಕಾರಗಳಿಗೆ ಮನವರಿಕೆ ಮಾಡುತ್ತಲೇ ಬಂದಿದ್ದೇವೆ. ಹಿಂದಿನ ಹಾಗೂ ಇಂದಿನ ಸರ್ಕಾರಕ್ಕೂ ಹಲವು ಸಲ ಮನವಿ ಮಾಡಿದೇªವೆ. ಆದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದರು.
ಶಾಸಕ ಬಿ. ಶ್ರೀರಾಮುಲು ಮಾತನಾಡಿ, ವಾಲ್ಮೀಕಿ ಶ್ರೀಗಳ ಮೀಸಲಾತಿ ಹೋರಾಟವನ್ನು ಸಮಾಜದ ಶಾಸಕರೆಲ್ಲ ಪಕ್ಷಾತೀತವಾಗಿ ಬೆಂಬಲಿಸುತ್ತೇವೆ. ಶ್ರೀಗಳ ಪಾದಯಾತ್ರೆಯಲ್ಲಿ ಸ್ವತಃ ನಾನು ಭಾಗಿಯಾಗುವುದಲ್ಲದೆ ಬೇಡಿಕೆ ಈಡೇರುವವರೆಗೂ ಶ್ರೀಗಳ ಬೆನ್ನಿಗೆ ನಿಲ್ಲುವುದಾಗಿ ತಿಳಿಸಿದರು.
ಪಂಚಮಸಾಲಿ ಪೀಠದ ವಚನಾನಂದ ಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದ ಶ್ರೀ, ಹೊಸಹಳ್ಳಿ ವೇಮನ ಮಠದ ಬಸವಕುಮಾರ ಶ್ರೀ, ಬಸವಪ್ರಭು ಕೇತಾರ ಶ್ರೀ, ದಯಾನಂದ ಶ್ರೀ, ಶಾಸಕರಾದ ಎಸ್.ರಾಮಪ್ಪ, ಎಸ್.ವಿ.ರಾಮಚಂದ್ರಪ್ಪ, ರೇಣುಕಾಚಾರ್ಯ, ಗಣೇಶ್, ಬಳ್ಳಾರಿ ಸಂಸದ ದೇವೇಂದ್ರಪ್ಪ ಸೇರಿ ಹಲವರಿದ್ದರು.