Advertisement

ಅತೃಪ್ತರ ಹಿಡಿದಿಟ್ಟುಕೊಳ್ಳಲು ಮುಂದುವರಿದ ಕಸರತ್ತು

06:15 AM Sep 24, 2018 | Team Udayavani |

ಬೆಂಗಳೂರು: ಅತೃಪ್ತ ಕಾಂಗ್ರೆಸ್‌ ಶಾಸಕರ ಮನವೊಲಿಕೆ ಹಾಗೂ ಹಿಡಿದಿಟ್ಟುಕೊಳ್ಳುವ ಕಸರತ್ತು ಭಾನುವಾರವೂ ಮುಂದುವರಿದಿದ್ದು, ಚೆನ್ನೈಗೆ ಹೋಗಿದ್ದ ಮೂವರು ಶಾಸಕರು ನಗರಕ್ಕೆ ವಾಪಸ್‌ ಆಗಿದ್ದಾರೆ.

Advertisement

ಎಂ.ಟಿ.ಬಿ.ನಾಗರಾಜ್‌ ಜತೆ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌, ಸುಧಾಕರ್‌ ಜತೆ ಸಿದ್ದರಾಮಯ್ಯ ಮಾತನಾಡಿ ಆತುರದ ತೀರ್ಮಾನ ಕೈಗೊಳ್ಳದಂತೆ ಮನವೊಲಿಕೆ ಪ್ರಯತ್ನ ಮಾಡಿದ್ದಾರೆ.

ಮತ್ತೂಂದೆಡೆ ಹಿರೆಕೆರೂರು ಶಾಸಕ ಬಿ.ಸಿ.ಪಾಟೀಲ್‌ ಜತೆಗೂ ಸಿದ್ದರಾಮಯ್ಯ ಮಾತನಾಡಿ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಅವಕಾಶ ಕಲ್ಪಿಸುವ ಭರವಸೆಯನ್ನೂ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ಚೆನ್ನೈನತ್ತ ಹೊರಟಿದ್ದ ಮೂವರು ಶಾಸಕರನ್ನು ಶನಿವಾರ ರಾತ್ರಿಯೇ ಸಂಪರ್ಕಿಸಿದ್ದ ಸಿದ್ದರಾಮಯ್ಯ ವಾಪಸ್‌ ಬರುವಂತೆ ತಿಳಿಸಿದ್ದರು. ದೇವಾಲಯಕ್ಕೆ ಹೋಗಿರುವುದಾಗಿ ಸಮಜಾಯಿಷಿ ನೀಡಿದ್ದ ಅವರು ಭಾನುವಾರ ಮುಂಜಾನೆ ಬೆಂಗಳೂರಿಗೆ ವಾಪಸ್ಸಾದರು.

ನಂತರ ಸಚಿವರಾದ ಡಿ.ಕೆ.ಶಿವಕುಮಾರ್‌, ಕೃಷ್ಣ ಬೈರೇಗೌಡ, ಜಮೀರ್‌ ಅಹಮದ್‌ ಅವರು ಎಂ.ಟಿ.ಬಿ.ನಾಗರಾಜ್‌ ಅವರ ನಿವಾಸಕ್ಕೇ ಹೋಗಿ ಸಂಧಾನ ಮಾತುಕತೆ ನಡೆಸಿದರು. ಮತ್ತೂಂದೆಡೆ ಸುಧಾಕರ್‌ ನಿವಾಸಕ್ಕೆ ಜಮೀರ್‌ ಅಹಮದ್‌ ಭೇಟಿ ನೀಡಿ ಚರ್ಚಿಸಿದರು. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಅಥವಾ ಬಿಜೆಪಿ ಸೇರುವ ನಿರ್ಧಾರ ಕೈಗೊಳ್ಳಬೇಡಿ ಎಂದು ಮನವೊಲಿಸಿದರು.

Advertisement

ನಂತರ ಎಂ.ಟಿ.ಬಿ.ನಾಗರಾಜ್‌ ಅವರನ್ನು ಕುಮಾರಕೃಪ ಅತಿಥಿಗೃಹಕ್ಕೆ ಕರೆಸಿ ಕೆ.ಸಿ.ವೇಣುಗೋಪಾಲ್‌ ಜತೆ ಮಾತನಾಡಿಸಿದರು. ದಿನೇಶ್‌ಗುಂಡೂರಾವ್‌ ಸಹ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವೇಣುಗೋಪಾಲ್‌ ಅವರು ನಾಗರಾಜ್‌ ಅವರಿಗೆ ಸೂಕ್ತ ಅವಕಾಶದ ಭರವಸೆ ನೀಡಿದರು. ಮತ್ತೂಂದೆಡೆ ಸುಧಾಕರ್‌, ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಸುಧಾಕರ್‌ ನಡೆ ಬಗ್ಗೆ ಸಿದ್ದರಾಮಯ್ಯ ಅತೃಪ್ತಿ ವ್ಯಕ್ತಪಡಿಸಿದರು. ನೀನು ನನ್ನ ಜತೆ ಗುರುತಿಸಿಕೊಂಡು ಈ ರೀತಿ ಮಾಡಿದರೆ ಹೇಗೆ? ಸಮ್ಮಿಶ್ರ ಸರ್ಕಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವ ಹೊಣೆ ನನಗೆ ಪಕ್ಷ ಕೊಟ್ಟಿದೆ. ನಿನ್ನ ಸಮಸ್ಯೆ ಇದ್ದರೆ ಬಗೆಹರಿಸಲಾಗುವುದು. ಪಕ್ಷದ ಜತೆ ಇರಬೇಕೆಂದು ಕಿವಿಮಾತು ಹೇಳಿದರು ಎಂದು ತಿಳಿದು ಬಂದಿದೆ.

ಕಾರ್ಯತಂತ್ರ: ಈ ಮಧ್ಯೆ, ವಿಧಾನಪರಿಷತ್‌ ಚುನಾವಣೆಯಲ್ಲಿ ಗೆಲ್ಲಲು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 8 ಶಾಸಕರನ್ನು ಸೆಳೆಯುವ ಬಿಜೆಪಿ ತಂತ್ರ ವಿಫ‌ಲಗೊಳಿಸುವ ಬಗ್ಗೆಯೂ ಕೆ.ಸಿ.ವೇಣುಗೋಪಾಲ್‌, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌, ಜಮೀರ್‌ ಅಹಮದ್‌, ದಿನೇಶ್‌ ಗುಂಡೂರಾವ್‌ ಚರ್ಚಿಸಿದರು.

ಬಿಜೆಪಿ ನಾಯಕರು ಯಾರನ್ನು ಸಂಪರ್ಕಿಸಿದ್ದಾರೋ ಅವರ ಮೇಲೆ ನಿಗಾ ಇಡುವುದು. ಜತೆಗೆ ಬಿಜೆಪಿಗೆ ಅಡ್ಡ ಮತದಾನ ಮಾಡದಂತೆ ಮನವೊಲಿಸಲು ತೀರ್ಮಾನಿಸಲಾಯಿತು. ಪರಿಷತ್‌ ಚುನಾವಣೆ ಸಮ್ಮಿಶ್ರ ಸರ್ಕಾರಕ್ಕೆ ಪ್ರತಿಷ್ಠೆಯಾಗಿದ್ದು ಯಾವುದೇ ಕಾರಣಕ್ಕೂ ಹಿನ್ನಡೆಯುಂಟಾಗಬಾರದು. ಅಲ್ಲಿ ಹಿನ್ನೆಡೆಯಾದರೆ ಅದು ನಂತರ ಸಮ್ಮಿಶ್ರ ಸರ್ಕಾರಕ್ಕೂ ಕಂಟಕವಾಗಬಹುದೆಂಬ ಅಭಿಪ್ರಾಯ ವೇಣುಗೋಪಾಲ್‌ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ಅವರಿಗೆ ಹೊಣೆಗಾರಿಕೆ ನೀಡಲಾಗಿದೆ ಎಂದು ಹೇಳಲಾಗಿದೆ.

ಪಕ್ಷದ ಮುಂಚೂಣಿ ಘಟಕಗಳ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿದ್ದ ಕೆ.ಸಿ.ವೇಣುಗೋಪಾಲ್‌ ಅವರು ಡಾ.ಜಿ.ಪರಮೇಶ್ವರ್‌ ಹಾಗೂ ದಿನೇಶ್‌ಗುಂಡೂರಾವ್‌ ಅವರ ಜತೆಯೂ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚಿಸಿ ಎಲ್ಲರೂ ಜತೆಯಾಗಿ ಬಿಜೆಪಿ ಎದುರಿಸಿ ಯಾವುದೇ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡಬೇಡಿ ಎಂದು ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಅಧಿಕಾರ ಬೇಡ ಎನ್ನಲು ನಾನು ಸನ್ಯಾಸಿಯಲ್ಲ. ಕೆಲವೊಂದು ಸಮಸ್ಯೆಗಳ ಬಗ್ಗೆ ವೇಣುಗೋಪಾಲ್‌ ಅವರ ಬಳಿ ಚರ್ಚಿಸಿದ್ದೇನೆ. ಭರವಸೆ ದೊರೆತಿದೆ. ಸಿದ್ದರಾಮಯ್ಯ ಅವರು ಮೊದಲಿನಿಂದಲೂ ನನಗೆ ಆತ್ಮೀಯ ಸ್ನೇಹಿತರು. ಸೋಮವಾರ ಅವರನ್ನೂ ಭೇಟಿ ಮಾಡಿ ಮಾತನಾಡಲಿದ್ದೇನೆ.
– ಎಂ.ಟಿ.ಬಿ.ನಾಗರಾಜ್‌,  ಶಾಸಕ

ರಾಹುಲ್‌ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ನಮ್ಮ ನಾಯಕರು. ನಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಳ್ಳುತ್ತೇವೆ. ನನಗೆ ಬ್ಲಾಕ್‌ವೆುàಲ್‌ ಗೊತ್ತಿಲ್ಲ, ನನಗೆ ಗೊತ್ತಿರುವುದು  ಈ ಮೇಲ್‌ ಮಾತ್ರ.
– ಸುಧಾಕರ್‌,  ಶಾಸಕ

ಎಂ.ಟಿ.ಬಿ.ನಾಗರಾಜ್‌ ಅವರು ನಿಷ್ಠಾವಂತ ಕಾಂಗ್ರೆಸ್‌ನ ಮುಖಂಡರು. ಹಿರಿಯ ಶಾಸಕರು, ಮೂರು ಬಾರಿ ಗೆದ್ದಿದ್ದಾರೆ. ಹೊಸಕೋಟೆಯಲ್ಲಿ ಮೂರು ಬಾರಿ ಗೆಲ್ಲುವುದು ಸಾಮಾನ್ಯ ವಿಷಯವಲ್ಲ. ಸಚಿವ ಸ್ಥಾನ ಕೇಳುವುದು ಸಹಜ. ಅವರಿಗೆ ಪಕ್ಷದಲ್ಲಿ ಉತ್ತಮ ಭವಿಷ್ಯವಿದೆ. ಅವರು ನಮ್ಮೊಂದಿಗೆ ಇರುತ್ತಾರೆ.
– ಡಿ.ಕೆ.ಶಿವಕುಮಾರ್‌, ಸಚಿವ

Advertisement

Udayavani is now on Telegram. Click here to join our channel and stay updated with the latest news.

Next