ಉಡುಪಿ: ಕುಂಜಿಬೆಟ್ಟುವಿನಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದ ಆರೋಪಿಗಳನ್ನು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಧೀಶರು ಹಾಗು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯಕ್ಕೆ ಪೊಲೀಸರು ಶುಕ್ರವಾರ ಹಾಜರುಪಡಿಸಿದರು. ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.
ಬಂಧಿತರಾಗಿರುವ ಆರು ಮಂದಿ ಆರೋಪಿಗಳ ಪೈಕಿ ಅಲ್ಫಾಝ, ಮಜಿದ್, ರಾಕಿಬ್ , ಶರೀಫ್ ನನ್ನು ಬಾಡಿ ವಾರಂಟ್ ಮೂಲಕ ತನಿಖೆಗೆ ಪಡೆಯಲಾಗಿದ್ದು, ತನಿಖೆ ಪೂರ್ಣಗೊಂಡ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಆರೋಪಿಗಳ ಮಹಜರು ಪ್ರಕ್ರಿಯೆಯನ್ನು ನಡೆಸಿದ್ದು, ತನಿಖೆಯಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ 2 ಡ್ರ್ಯಾಗರ್ ಮತ್ತು 1 ತಲವಾರನ್ನು ವಶಪಡಿಸಿಕೊಳ್ಳಲಾಗಿದೆ.
ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತು ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. ಈಗಾಗಲೇ ಎಲ್ಲ ಅಂಗಡಿಗಳನ್ನು ರಾತ್ರಿ 10ಗಂಟೆಯೊಳಗೆ ಮುಚ್ಚುವಂತೆ ಸೂಚನೆ ನೀಡಲಾಗುತ್ತಿದ್ದರೂ ಕೆಲವು ಹೊಟೇಲ್, ಬಾರ್, ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೂ ವ್ಯವಹಾರ ನಡೆಸಿಕೊಂಡಿರುವುದು ಸಾರ್ವಜನಿಕರ ಆಕ್ಷೇಪಣೆಗೆ ಕಾರಣವಾಗಿದೆ.
ಬಾರ್ ಹಾಗೂ ಪಬ್‌ಗಳಿಗೂ ಈ ಬಗ್ಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಜತೆಗೆ 80 ಬಡಗಬೆಟ್ಟು, ಪೆರಂಪಳ್ಳಿ, ಈಶ್ವರನಗರ, ಅಲೆವೂರು, ಮಂಚಿ, ಮಣಿಪಾಲ ಭಾಗಗಳಲ್ಲಿ ಗಾಂಜಾ ಸಹಿತ ಮಾದಕ ವ್ಯಸನದ ಹಾವಳಿಯೂ ಅಧಿಕವಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಪೊಲೀಸರು ಈ ನಿಟ್ಟಿನಲ್ಲಿಯೂ ಕಾರ್ಯಾಚರಣೆ ನಡೆಸುವ ಅಗತ್ಯವಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.