ಚಾಮರಾಜನಗರ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಹೇಳಿಕೆ ಖಂಡಿಸಿ ಜಿಲ್ಲಾ ಕಾಂಗ್ರೆಸ್ ಎಸ್‌ಸಿ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಧಿಕ್ಕಾರ ಕೂಗಿ, ಭುವನೇಶ್ವರಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಅನಂತಕುಮಾರ್ ಹೆಗಡೆ ಭಾವಚಿತ್ರ ಸುಟ್ಟು ಅಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಎಸ್ಸಿ ಮೋರ್ಚಾ ಅಧ್ಯಕ್ಷ ನಾಗರಾಜು, ಜಾತ್ಯತೀತ ವ್ಯವಸ್ಥೆಯುಳ್ಳ ಭಾರತದಲ್ಲಿದ್ದು, ಡಾ.ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದಡಿ ಸಚಿವರಾಗಿ ಕೆಲಸ ಮಾಡುತ್ತಿರುವ ಅನಂತಕುಮಾರ್ ಹೆಗಡೆ, ಸಂವಿಧಾನವನ್ನು ಬದಲಾಯಿಸಲು ತಾವು ಅಧಿಕಾರಕ್ಕೆ ಬಂದಿರುವುದು ಎಂಬ ಹೇಳಿಕೆ ನೀಡಿರುವುದು ಖಂಡನೀಯ. ಅಲ್ಲದೇ ಜಾತ್ಯತೀತರಿಗೆ ತಂದೆ ತಾಯಿಗೊತ್ತಿಲ್ಲ ಎಂದಿರುವುದು ಅಪಮಾನಕರ ಸಂಗತಿ ಎಂದರು.
ಅವಮಾನ: ಇಂತಹವರು ಸಚಿವರಾಗಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ, ದೇಶದಲ್ಲಿ ಗಲಭೆಗೆ ಕಾರಣವಾಗುವ ಇಂತಹ ಹೇಳಿಕೆಗಳನ್ನು ನೀಡುವವರ ಕಠಿಣ ಕ್ರಮಕೈಗೊಳ್ಳಬೇಕು, ಬಿಜೆಪಿ ಸಂವಿಧಾನ ವಿರೋಧಿ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಇಂತಹವರು ಮತ್ತೆ ಚುನಾವಣೆಯಲ್ಲಿ ಮತ್ತೆ ಆಯ್ಕೆಯಾಗದಂತೆ ಮತದಾರರು ಜಾಗೃತರಾಗಬೇಕು ಎಂದು ಹೇಳಿದರು.
ಅನಂತ್‌ಕುಮಾರ್ ಹೆಗಡೆ ಅವರಿಗೆ ಬುದ್ಧಿ ಭ್ರಮಣೆಯಾಗಿದೆ. ಇಂತಹ ಹೇಳಿಕೆ ನೀಡಿದ್ದರೂ ನರೇಂದ್ರ ಮೋದಿ ಅವರು ಸಚಿವ ಸಂಪುಟದಲ್ಲಿ ಇಟ್ಟುಕೊಂಡಿರುವುದು ಅವರಿಗೆ ಶೋಭೆ ತರುವುದಿಲ್ಲ. ಆದ್ದರಿಂದ ಇವರನ್ನು ಸಚಿವ ಸಂಪುಟದಿಂದ ತೆಗೆದು ಹಾಕಬೇಕು. ಇಲ್ಲದೇ, ಹೋದರೆ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಜನತೆ ರಾಷ್ಟ್ರದಿಂದಲೇ ತೆಗೆದುಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಪಾಧ್ಯಕ್ಷ ಸೋಮಹಳ್ಳಿ ರವಿ, ಪ್ರಧಾನ ಕಾರ್ಯದರ್ಶಿ ಮಂಗಲ ಉಮೇಶ್, ಗೋವಿಂದು ಹನೂರು, ಜಿಲ್ಲಾ ಬ್ಲಾಕ್ ಕಾಂಗ್ರೆಸ್‌ನ ಎಸ್ಸಿ ಘಟಕದ ಅದ್ಯಕ್ಷ ಸಿ.ಕೆ.ಮಂಜುನಾಥ್, ಸಿ.ಕೆ.ರವಿಕುಮಾರ್, ಸಿದ್ದಪ್ಪ, ಬಸವರಾಜು, ಕಿರಣ್ ದಲಿತ್, ತಾಪಂ ಸದಸ್ಯರಾದ ಕುಮಾರ್ ನಾಯಕ್, ಮಾಜಿ ಸದಸ್ಯ ರಾಜು, ಉಲ್ಲಾಸ್, ನಾಗೇಶ್, ಕೆಂಪರಾಜು, ಉಮೇಶ್, ನಾಗರಾಜ್, ಮುಖಂಡರಾದ ಕಾಗಲವಾಡಿ ಚಂದ್ರು, ಬಸವಣ್ಣ, ಚನ್ನಪ್ಪ, ರಂಗಸ್ವಾಮಿ, ಮೂರ್ತಿ, ಸ್ವಾಮಿ ಮತ್ತಿತರರು ಪಾಲ್ಗೊಂಡಿದ್ದರು.