Advertisement

ಅವಕಾಶ ನೀಡಿದ್ರೆ ವರುಣಾದಿಂದ ಸ್ಪರ್ಧೆ

01:19 PM Apr 03, 2018 | Team Udayavani |

ಮೈಸೂರು: ಕ್ಷೇತ್ರದ ಕಾರ್ಯಕರ್ತರ ಅಪೇಕ್ಷೆಯಂತೆ, ಪಕ್ಷದ ನಾಯಕರು ಅವಕಾಶ ನೀಡಿದರೆ ವರುಣಾ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ತಿಳಿಸಿದರು.

Advertisement

ವಿಧಾನಸಭೆ ಚುನಾವಣೆಯಲ್ಲಿ ವರುಣಾ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ವಿ.ವೈ.ವಿಜಯೇಂದ್ರ ಸ್ಪರ್ಧಿಸಲಿದ್ದಾರೆಂಬ ಚರ್ಚೆ ಆರಂಭವಾಗಿರುವ ಬೆನ್ನಲ್ಲೆ ಸೋಮವಾರ ನಗರಕ್ಕಾಗಮಿಸಿ, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಯಂತೆ ಕ್ಷೇತ್ರದ ಪದಾಧಿಕಾರಿಗಳು, ಟಿಕೆಟ್‌ ಆಕಾಂಕ್ಷಿಗಳು ವರುಣಾ ಕ್ಷೇತ್ರದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ಎದುರಿಸಲು ಸಮರ್ಥ ಅಭ್ಯರ್ಥಿಬೇಕೆಂಬ ಕಾರಣಕ್ಕೆ ತಮ್ಮನ್ನು ಅಭ್ಯರ್ಥಿಯಾಗಿ ಮಾಡಬೇಕೆಂದು ರಾಷ್ಟ್ರೀಯ ಹಾಗೂ ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದಾರೆ. 

ಆದ್ದರಿಂದ ಸ್ವಾಭಾವಿಕವಾಗಿ ವರುಣಾ ಕ್ಷೇತ್ರದ ಸ್ಪರ್ಧಿಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ತಾವು ವರುಣಾ ಕ್ಷೇತ್ರಕ್ಕೆ ಭೇಟಿ ನೀಡಿ, ಕ್ಷೇತ್ರದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ. ಆದರೆ, ವರುಣಾದಿಂದ ಯಾರು ಅಭ್ಯರ್ಥಿಯಾಗಬೇಕು ಎಂಬುದನ್ನು ರಾಷ್ಟ್ರ ಹಾಗೂ ರಾಜ್ಯದ ನಾಯಕರು ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಿದ್ದಾರೆ. ಒಂದೊಮ್ಮೆ ಕ್ಷೇತ್ರದ ಕಾರ್ಯಕರ್ತರ ಅಪೇಕ್ಷೆಯಂತೆ, ಪಕ್ಷದ ವರಿಷ್ಠರು ಅವಕಾಶ ನೀಡಿದರೆ ವರುಣಾ ಕ್ಷೇತ್ರವನ್ನು ಪ್ರತಿನಿಧಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಗೆಲುವು ನಿಶ್ಚಿತ: ವರುಣಾ ಕ್ಷೇತ್ರದ ಸ್ಪರ್ಧಿಸುವುದು ಕಷ್ಟ-ಸುಲಭ ಎಂಬುದಕ್ಕಿಂತ, ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ರೀತಿಯಲ್ಲಿ ಮೈಸೂರು ಹಾಗೂ ವರುಣಾ ಕ್ಷೇತ್ರದ ಮತದಾರರೂ ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಸಮಾಧಾನ ಹೊಂದಿದ್ದಾರೆ.

Advertisement

ಆದ್ದರಿಂದ ಕಷ್ಟ ಎಂಬುದಕ್ಕಿಂತ ಈ ಬಾರಿ ಯಾವುದೇ ಕಾರಣಕ್ಕೂ ಅವಕಾಶ ಕಳೆದುಕೊಳ್ಳಬಾರದೆಂದು ಪಕ್ಷದ ಕಾರ್ಯಕರ್ತರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ತೀರ್ಮಾನಿಸಿದ್ದಾರೆ. ಹೀಗಾಗಿ ವರುಣಾ ಕ್ಷೇತ್ರದಿಂದ ಯಾರೇ ಬಿಜೆಪಿ ಅಭ್ಯರ್ಥಿಯಾದರೂ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು, ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ ಎಂದು ಹೇಳಿದರು.

ವರುಣಾ ಕ್ಷೇತ್ರದ ಬಗ್ಗೆ ಮಾಹಿತಿ ಇಲ್ಲದಿದ್ದರೂ, ಪಕ್ಷದ ಕಾರ್ಯಕರ್ತರ ಮೇಲೆ ವಿಶ್ವಾಸವನ್ನಿಟ್ಟು ಬಿಜೆಪಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ ಎಂದ ಅವರು, ವರುಣಾ ಅಥವಾ ಮೈಸೂರು ಯಡಿಯೂರಪ್ಪಗೆ ಹೊಸದೇನಲ್ಲ. ಆದ್ದರಿಂದ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಿನಿಂದ, ಸಂಘಟನೆಯ ಮೂಲಕ ಚುನಾವಣೆ ಎದುರಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಎಚ್‌.ವಿ.ರಾಜೀವ್‌, ಕಾ.ಪು. ಸಿದ್ದಲಿಂಗಸ್ವಾಮಿ, ಆರ್‌.ರಘು ಕೌಟಿಲ್ಯ ಹಾಜರಿದ್ದರು.

ತಂದೆ ಹಾಗೂ ಅಣ್ಣನಂತೆ ಸಕ್ರಿಯ ರಾಜಕಾರಣದಲ್ಲಿ ಕಾಣಿಸಿಕೊಳ್ಳದಿದ್ದರೂ, ಕಳೆದ 10 ವರ್ಷಗಳಿಂದ ತಂದೆಯವರೊಂದಿಗೆ ಬೆರೆತು ರಾಜಕೀಯವನ್ನು ನೋಡಿದ್ದೇನೆ. ತಮಗೆ ಚುನಾವಣಾ ರಾಜಕೀಯ ಹೊಸದಾಗಿದ್ದರೂ, ಅನೇಕ ಚುನಾವಣೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಹೀಗಾಗಿ ಚುನಾವಣಾ ರಾಜಕಾರಣ ನನಗೆ ಹೊಸದೆಂದು ಅನಿಸುವುದಿಲ್ಲ.
-ಬಿ.ವೈ.ವಿಜಯೇಂದ್ರ, ಬಿ.ಎಸ್‌.ಯಡಿಯೂರಪ್ಪ ಪುತ್ರ.

ಸಿಎಂ ತವರಿನಲ್ಲಿ ವಿಜಯೇಂದ್ರ ಸಂಚಾರ: ಈ ಬಾರಿಯ ಚುನಾವಣೆಯಲ್ಲಿ ಹಾಲಿ ಹಾಗೂ ಮಾಜಿ ಮುಖ್ಯಮಂತ್ರಿಗಳಿಗೆ ಪ್ರತಿಷ್ಠೆಯ ಕಣವಾಗಿರುವ ವರುಣಾ ವಿಧಾನಸಬಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಯಾರು? ಎಂಬ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಇದರ ಬೆನ್ನಲ್ಲೆ ಬಿಜೆಪಿ ಸಂಬಾವ್ಯ ಅಭ್ಯರ್ಥಿಯೆಂದೇ ಬಿಂಬಿಸುತ್ತಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಸೋಮವಾರ ಮಿಂಚಿನ ಸಂಚಾರ ನಡೆಸಿದರು.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರನ ಬೆಟ್ಟಕ್ಕೆ ತೆರಳಿ, ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮೈಸೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ, ಮೈಸೂರು ಜಿಲ್ಲೆಯ ತಿ.ನರಸೀಪುರ ತಾಲೂಕು ಹಾಗೂ ವರುಣಾ ಕ್ಷೇತ್ರ ವ್ಯಾಪ್ತಿಯ ಗ್ರಾಮಗಳ ಮೂಲಕ ನಗರಕ್ಕಾಗಮಿಸಿದರು. ಮೊದಲಿಗೆ ಮಧ್ಯಾಹ್ನ 12.30ಕ್ಕೆ ನಗರದ ಚಾಮುಂಡಿಬೆಟ್ಟಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ ಬಿಎಸ್‌ವೈ ಪುತ್ರ, ನಾಡದೇವತೆ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಧ್ಯಾಹ್ನ 1 ಗಂಟೆ ವೇಳೆಗೆ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ತೆರಳಿದರು.

ಶ್ರೀಗಳೊಂದಿಗೆ ಕೆಲಕಾಲ ಮಾತುಕತೆ ನಡೆಸಿ, ಶ್ರೀಗಳ ಆಶಿರ್ವಾದ ಪಡೆದರಲ್ಲದೆ, ಮಧ್ಯಾಹ್ನದ ಊಟವನ್ನು ಮಠದಲ್ಲೇ ಮುಗಿಸಿದರು. ಇದಾದ ನಂತರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ನಗರದ ಜಯಲಕ್ಷ್ಮೀಪುರಂನಲ್ಲಿರುವ ಬಿಜೆಪಿ ಮುಖಂಡ ವಿ.ಶ್ರೀನಿವಾಸ್‌ ಪ್ರಸಾದ್‌ ನಿವಾಸಕ್ಕೆ ಭೇಟಿ ನೀಡಿ ಅವರೊಂದಿಗೆ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಸಂಜೆ ವೇಳೆಗೆ ವರುಣಾ ಕ್ಷೇತ್ರಕ್ಕೆ ತೆರಳಿದ ವಿಜಯೇಂದ್ರ, ಸ್ಥಳೀಯ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next