ತಿಪಟೂರು: ನಗರಕ್ಕೆ ನೀರು ಸರಬರಾಜು ಮಾಡುವ ಈಚನೂರು ಕೆರೆಯಲ್ಲಿ ಸಾಕಷ್ಟು ನೀರಿದ್ದರೂ, ನಗರದಾದ್ಯಂತ ಕುಡಿವ ನೀರಿಗೆ ಹಾಹಾಕಾರ ಉಂಟಾಗಿದೆ. ಒಂದೆಡೆ ಅಪರೂಪಕ್ಕೆ ಬಿಡುತ್ತಿರುವ ಹೇಮೆ ನೀರು ಕಲುಷಿತ ಹಾಗೂ ಗಬ್ಬುವಾಸನೆ ಬೀರುತ್ತಿದ್ದು ಬಳಸಲು ಯೋಗ್ಯವಿಲ್ಲದಂತಾಗಿದೆ.
ನಗರಕ್ಕೆ 24/7 ಕುಡಿವ ನೀರು ಈಚನೂರು ಕೆರೆಯಿಂದ ಸರಬರಾಜಾಗುತ್ತಿದೆ. ಈ ನೀರು ನಗರದ ಗಾಂಧಿನಗರದಲ್ಲಿರುವ ನೀರು ಸಂಸ್ಕರಣಾ ಘಟಕಕ್ಕೆ ಬಂದು ಸಂಸ್ಕರಣೆಗೊಂಡು ನಂತರ ಮನೆಗಳಿಗೆ ಬರಬೇಕು. ಆದರೆ ಈಗ ಬಿಡುತ್ತಿರುವ ನೀರನ್ನು ಸಂಸ್ಕರಣೆಗೊಳಿಸದೇ ಬಿಡುತ್ತಿರುವುದರಿಂದ ನೀರಿನಲ್ಲಿ ಕೂದಲು, ಹುಳುಗಳು, ಕಣ್ಣಿಗೆ ಕಾಣಿಸುವಂತ ಸಣ್ಣಪುಟ್ಟ ಕ್ರಿಮಿ,ಕೀಟಗಳು ಬರುತ್ತಿದ್ದು ಬಾಯಿಗೆ ಬಿಟ್ಟುಕೊಂಡರೆ ಸತ್ತ ಮೀನುಗಳ ವಾಸನೆ ಬರುತ್ತಿದೆ. ಜನರಿಗೆ ಶುದ್ಧ ಕುಡಿವ ನೀರು ಒದಗಿಸಲು ಸರ್ಕಾರ ಕೋಟ್ಯಂತರ ಹಣ ವೆಚ್ಚ ಮಾಡಿದ್ದರೂ ಜನಪ್ರತಿ ನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ, ನಿರ್ಲಕ್ಷ್ಯದಿಂದ ಮಕ್ಕಳು, ಜನರು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುವಂತಾಗಿದೆ.
ಮೊದಲೇ ಕೋವಿಡ್ ಭಯದಲ್ಲಿ ಜನರು ತಣ್ಣೀರು ಮುಟ್ಟಲೂ ಭಯಪಡುತ್ತಿರುವ ಈ ವೇಳೆ ನೂರಾರು ರೋಗಗಳನ್ನೇ ಹೊತ್ತು ತರುತ್ತಿರುವ ಈ ಗಬ್ಬು ನೀರಿನಿಂದ ಜನರಿಗೆ ನೆಗಡಿ, ಕೆಮ್ಮು, ಶೀತಯುಕ್ತ ಸಾಂಕ್ರಾಮಿಕ ರೋಗಗಳಿಗೆ ಆಸ್ಪತ್ರೆಗೆ ಹೋಗಲೂ ಸಾಧ್ಯ ವಿಲ್ಲ. ಈ ಬಗ್ಗೆ ಶಾಸಕರಾದಿಯಾಗಿ ಯಾರೂ ಗಮನ ಹರಿಸುತ್ತಿಲ್ಲ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನಹರಿಸಿ ಶುದ್ಧ ಕುಡಿವ ನೀರು ಸರಬರಾಜು ಮಾಡಲು ಸೂಚಿಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಈ ಬಗ್ಗೆ ನಗರದ ಹಲವು ಬಡಾವಣೆ ಗಳ ನಿವಾಸಿಗಳಿಂದ ದೂರು ಬಂದಿದ್ದು, ಶೀಘ್ರವಾಗಿ ಪರೀಕ್ಷಿಸಿ ಶುದ್ಧ ಕುಡಿವ ನೀರನ್ನು ನೀಡಲಾಗುವುದು.
– ಉಮಾಕಾಂತ್, ನಗರಸಭೆ ಪೌರಾಯುಕ್ತರು
–ಬಿ.ರಂಗಸ್ವಾಮಿ, ತಿಪಟೂರು