ಕುಳಗೇರಿ ಕ್ರಾಸ್: ಚಿಮ್ಮನಕಟ್ಟಿ ಗ್ರಾಮದ ಕುಡಿಯುವ ನಲ್ಲಿ ನೀರಲ್ಲಿ ಕಲುಷಿತ ನೀರು ಪೂರೈಕೆಯಾಗಿ ವಾಂತಿ ಭೇದಿ ಉಲ್ಬಣಿಸಿ ಸುಮಾರು 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇನ್ನು ಕೆಲವರಿಗೆ ಗ್ರಾಮದಲ್ಲಿ ಚಿಕಿತ್ಸೆ ಸಿಗದೆ ತಾಲೂಕು ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳಿ ಹೆಚ್ಚಿನ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಗ್ರಾಮ ಪಂಚಾಯತಗೆ ಸಂಬಂದಿಸಿದ ಕೊಳವೆ ಭಾವಿಯಿಂದ ಗ್ರಾಮದ ಎತ್ತರ ಪ್ರದೇಶದಲ್ಲಿನ ನೀರಿನ ಟ್ಯಾಂಕ್‌ಗೆ ನೀರು ಸಂಗ್ರಹಿಸಿ ಮನೆಗಳಿಗೆ ನಲ್ಲಿ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ ನೀರು ಸಂಗ್ರಹ ಮಾಡಿದ ಟ್ಯಾಂಕ್ ಸುಮಾರು ವರ್ಷಗಳಿಂದ ಸ್ವಚ್ಛಗೊಳಿಸದ ಕಾರಣ ಗ್ರಾಮದಲ್ಲಿನ ನಲ್ಲಿಯಲ್ಲಿ ಕೊಳಚೆ ನೀರು ಪೂರೈಕೆಯಾಗುತ್ತಿದೆ.
ಗ್ರಾಮದ ಜನ ಸುಮಾರು ದಿನಗಳಿಂದ ಕಲುಷಿತ ನೀರು ಸೇವನೆ ಮಾಡುತ್ತಿದ್ದು ಸದ್ಯ ಗ್ರಾಮಸ್ಥರ ಆರೋಗ್ಯ ಹದಗೆಟ್ಟು ಹೋಗಿದೆ. ಜನ ವಾಂತಿ-ಭೇಧಿ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ಸದ್ಯ ಕುಳಗೇರಿ ಕ್ರಾಸ್ ಕ್ಲಿನಿ ಕ್ ಗಳಲ್ಲಿ ನಾಲ್ಕೈದು ಜನ ದಾಖಲಾಗಿದ್ದಾರೆ. ಈ ವಾಂತಿಭೇದಿಗೆ ಕಲುಷಿತ ನೀರೇ ಕಾರಣ ಎಂದು ಸ್ಥಳಿಯ ವೈದ್ಯರು ಸಹ ಹೇಳುತ್ತಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯೇ ಪಿಡಿಒ ಅವರನ್ನ ಗ್ರಾಮಕ್ಕೆ ಕರೆಸಲಾಗಿತು, ಕಲುಷಿತ ನೀರು ಪೂರೈಕೆಯಾಗುತ್ತಿರುವ ಕುರಿತು ಪ್ರತ್ಯಕ್ಷವಾಗಿ ತೋರಿಸಲಾಗಿತ್ತು ಎಂದು ಗ್ರಾಮದ ಮೂದಿನ್ ನರಗುಂದ ಪತ್ರಿಕೆಗೆ ತಿಳಿಸಿದರು. ರೋಗ ಹರಡುವ ಮುನ್ನ ಶುದ್ಧ ನೀರು ಪೂರೈಸುವಂತೆ ಗ್ರಾಮಸ್ಥರು ಮನವಿ ಸಹ ಮಾಡಿಕೊಂಡಿದ್ದರಂತೆ. ಗ್ರಾಮಸ್ಥರ ಮಾತಿಗೆ ತಲೆ ಅಲ್ಲಾಡಿಸಿ ಬರವಸೆ ಕೊಟ್ಟು ಹೋದ ಪಿಡಿಒ ಮತ್ತೆ ಈ ಕಡೆ ತಲೆ ಹಾಕಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಭೇಟ್ಟಿ ಕೊಡದ ಆರೋಗ್ಯ ಸಿಬ್ಬಂದಿ ಸುಮಾರು ದಿನಗಳಿಂದ ಚಿಮ್ಮನಕಟ್ಟಿ ಗ್ರಾಮದಲ್ಲಿ ಜನ ಕಲುಷಿತ ನೀರು ಸೇವಿಸಿ ವಾಂತಿ-ಭೇಧಿಯಿಂದ ಬಳಲುತ್ತಿದ್ದಾರೆ. ಈ ಗ್ರಾಮಕ್ಕೆ ಸಂಬಂದಿಸಿದ ಸರಕಾರಿ ಆಸ್ಪತ್ರೆ ಮೂರು ಕೀ.ಮೀ ಹತ್ತಿರದಲ್ಲಿದ್ದರೂ ಜನರಿಗೆ ಚಿಕಿತ್ಸೆ ಮಾತ್ರ ದೊರೆಯುತ್ತಿಲ್ಲವಂತೆ.
ಇಲ್ಲಿ ವೈದ್ಯಾಧಿಕಾರಿ ಸೇರಿದಂತೆ ಸುಮಾರು ಜನ ಸಿಬ್ಬಂದಿಯೂ ಸಹ ಕಾರ್ಯನಿರ್ವಹಿಸುತ್ತಾರೆ. ಚಿಮ್ಮನಕಟ್ಟಿ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಜನ ಅಸ್ವಸ್ತಗೊಂಡರೂ ಸಂಬಂದಿಸಿದ ಆರೊಗ್ಯ ಸಿಬ್ಬಂದಿ ಮಾತ್ರ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಹೆಸರಿಗೆ ಮಾತ್ರ ಸರಕಾರಿ ಆಸ್ಪತ್ರೆ ಎಂಬಂತೆ ಚಿಕಿತ್ಸೆ ಕೊಡದೆ ಜನರಿಂದ ದೂರ ಉಳಿದಿದೆ.
ಕಲುಷಿತಗೊಂಡ ನೀರು ಪೂರೈಕೆಯಾಗುತ್ತಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಸಂಬಂದಿಸಿದ ಪಿಡಿಒ ಮೂಲಕ ಮಾಹಿತಿ ಪಡೆದು ಗ್ರಾಮಸ್ಥರಿಗೆ ಶುದ್ಧ ನೀರು ಪೂರೈಕೆ ಮಾಡುತ್ತೆವೆ. ಇನ್ನು ಮುಂದೆ ಗ್ರಾಮಸ್ಥರಿಗೆ ತೊಂದರೆಯಾಗದ ಹಾಗೆ ಕ್ರಮ ಕೈಗೊಳ್ಳುತ್ತೆನೆ.
ಮಲ್ಲಿಕಾರ್ಜುನ ಕಲಾದಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ.