ರಾಯಚೂರು: ಜಿಲ್ಲೆಯ ಆರು ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ದೃಢಪಟ್ಟ ಬೆನ್ನಲ್ಲೇ ಅಧಿಕಾರಿಗಳ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಸೋಂಕಿರುವ ಪ್ರದೇಶಗಳನ್ನು ಕಂಟೇನ್ಮೆಂಟ್ ಹಾಗೂ ಬಫರ್ ಝೋನ್ ಎಂದು ಘೋಷಿಸಿ ಕ್ರಮಕ್ಕೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಭೆ ನಡೆಸಿದ ಅವರು, ಕಂಟೇನ್ಮೆಂಟ್ ಝೋನ್‌ಗಳಲ್ಲಿ ಜನ ಮನೆಯಿಂದ ಹೊರ ಬಾರದಂತೆ ಕಟ್ಟೆಚ್ಚರ ವಹಿಸಬೇಕು. ಕೋವಿಡ್ ಸೋಂಕು ಹರಡಿರುವುದು ದೃಢಪಟ್ಟ ನಂತರ ಆಯಾ ವಾರ್ಡ್‌ಗಳಲ್ಲಿ ಸೀಲ್‌ಡೌನ್ ಮಾಡಬೇಕು. ಸೋಂಕು ಇರುವವರ ಮನೆಯಿಂದ 100 ಮೀಟರ್ ದೂರದಲ್ಲಿ ಅವರೊಂದಿಗೆ ಯಾವುದೇ ರೀತಿಯ ಸಂಪರ್ಕ ಹೊಂದದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಸೀಲ್‌ಡೌನ್ ಪ್ರದೇಶಗಳ ಜನರ ಮನೆ ಬಾಗಿಲಿಗೆ ಅಗತ್ಯ ವಸ್ತು ಪೂರೈಸಲು ಕ್ರಮ ಕೈಗೊಳ್ಳಬೇಕು. ಅನವಶ್ಯಕ ಓಡಾಟಕ್ಕೆ ಬ್ರೇಕ್ ಹಾಕಬೇಕು. ಇನ್ನೂ ಬಫರ್ ಝೋನ್ ಗಳಲ್ಲಿ ನಗರ ಪ್ರದೇಶದಲ್ಲಿ 5 ಕಿಮೀ ಮತ್ತು ಗ್ರಾಮೀಣ ಪ್ರದೇಶದಲ್ಲಿ 7 ಕಿಮೀ ವ್ಯಾಪ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು. ರಾಯಚೂರು ಮತ್ತು ದೇವದುರ್ಗ ತಾಲೂಕಿಗೆ ಮಹಾರಾಷ್ಟ್ರ ರಾಜ್ಯದಿಂದ ಆಗಮಿಸಿರುವ ವಲಸೆ ಕಾರ್ಮಿಕರನ್ನು ಪತ್ತೆಗೆ ತಂಡ ರಚಿಸಲಾಗುತ್ತದೆ. ಈ ತಂಡದಲ್ಲಿ ಸಹಾಯಕ ಆಯುಕ್ತರು, ತಹಶೀಲ್ದಾರರು ಮತ್ತು ಪಿಎಸ್‌ಐ ಇರಲಿದ್ದಾರೆ ಎಂದು ಹೇಳಿದರು.
ಮಹಾರಾಷ್ಟ್ರದಿಂದ ಬಂದವರನ್ನು ಇರಿಸಿದ ಕ್ವಾರಂಟೈನ್‌ಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಆ ಕ್ವಾರಂಟೈನ್ ಕೇಂದ್ರಕ್ಕೆ ಔಷಧ ಸಿಂಪಡಿಸಬೇಕು. ಅದರ ಜತೆಗೆ ಎಲ್ಲ ಕ್ವಾರಂಟೈನ್ ಕೇಂದ್ರಗಳಿಗೂ ನಿತ್ಯ ಅಗ್ನಿ ಶಾಮಕ ದಳದಿಂದ ಔಷಧ ಸಿಂಪಡಿಸಬೇಕು. ಶೌಚಗೃಹಗಳನ್ನು ಸ್ವಚ್ಛಗೊಳಿಸಬೇಕು. ಜಿಲ್ಲೆಯ ಅಂತರ ರಾಜ್ಯಗಳ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಭದ್ರತೆಗೆ ನಿಯೋಜಿಸಿರುವ ಪೊಲೀಸರಿಗೆ ಎನ್-95 ಮಾಸ್ಕ್ ಮತ್ತು ಗ್ಲೌಸ್ ವಿತರಿಸಬೇಕು ಎಂದು ಡಿಎಚ್‌ಒಗೆ ಸೂಚಿಸಿದರು.
ಎಸ್‌ಪಿ ಡಾ| ಸಿ.ಬಿ. ವೇದಮೂರ್ತಿ, ಜಿಪಂ ಸಿಇಒ ಲಕ್ಷ್ಮೀ ಕಾಂತರೆಡ್ಡಿ ಜಿ., ಎಡಿಸಿ ದುರುಗೇಶ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿಬಾಬು, ಸಹಾಯಕ ಆಯುಕ್ತ ಸಂತೋಷ ಕಾಮಗೌಡ, ತಹಶೀಲ್ದಾರ್ ಡಾ| ಹಂಪಣ್ಣ, ಡಾ| ಕೆ. ನಾಗರಾಜ, ಡಾ| ವೈ. ಸುರೇಂದ್ರ ಬಾಬು ಇದ್ದರು.