Advertisement

ಕಂಟೈನರ್‌ ಲಾರಿ ತಡೆದು ಲಕ್ಷಾಂತರ ರೂ. ದರೋಡೆ

11:32 AM Apr 07, 2017 | |

ಉಪ್ಪಿನಂಗಡಿ: ಮೀನು ಸಾಗಾಟದ ಕಂಟೈನರ್‌ ಲಾರಿಯೊಂದನ್ನು ಅಡ್ಡಗಟ್ಟಿದ ದರೋಡೆಕೋರರ ತಂಡವೊಂದು ಲಾರಿಯಲ್ಲಿದ್ದವರನ್ನು ಬೆದರಿಸಿ ಅವರಿಂದ ಮೊಬೈಲ್‌ ಹಾಗೂ ಲಕ್ಷಾಂತರ ರೂಪಾಯಿ ದರೋಡೆಗೈದು ಪರಾರಿಯಾದ ಘಟನೆ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗಡಿ ಬಳಿ ಗುರುವಾರ ನಸುಕಿನಲ್ಲಿ ನಡೆದಿದೆ.

Advertisement

ಲಾರಿ ಚಲಾಯಿಸುತ್ತಲೇ ದರೋಡೆಗೈದರು
ಗಂಗೊಳ್ಳಿಯಿಂದ ಚೆನ್ನೈಗೆ ಮೀನು ತೆಗೆದುಕೊಂಡು ಹೋಗಿದ್ದ ಕಂಟೈನರ್‌ ಲಾರಿಯೊಂದು ಮೀನನ್ನು ಇಳಿಸಿ ಗಂಗೊಳ್ಳಿಗೆ ವಾಪಸಾಗುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ. ಶಿರಾಡಿ ಘಾಟಿಯಿಂದಲೇ ಕಪ್ಪು ಇನ್ನೋವಾ ವಾಹನವೊಂದು ಇವರ ಲಾರಿಯನ್ನು ಬೆನ್ನತ್ತಿ ಬಂದಿದ್ದು, ನಸುಕಿನ ಜಾವ ಸುಮಾರು 2ರಿಂದ 2:30ರ ಸುಮಾರಿಗೆ ಶಿರಾಡಿ ಗಡಿಯಿಂದ  ಸುಮಾರು ಮೂರು ಕಿ.ಮೀ. ನಿರ್ಜನ ಪ್ರದೇಶದಲ್ಲಿ ಲಾರಿಗೆ ಅಡ್ಡವಾಗಿ ನಿಂತುಕೊಂಡಿದೆ. ಕೂಡಲೇ ಇನ್ನೋವಾದಿಂದ ಚಾಕು ಹಾಗೂ ಪಿಸ್ತೂಲ್‌ ಹಿಡಿದ ಮೂವರು ಕೆಳಗಿಳಿದು ಲಾರಿಗೆ ಹತ್ತಿದ್ದು, ಅವರಲ್ಲಿ ಒಬ್ಟಾತ ಚಾಲಕ ವಿಘ್ನೇಶ್‌ನನ್ನು ಎಳೆದು ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತುಕೊಂಡಿದ್ದಾನೆ. ಇನ್ನಿಬ್ಬರು ಚಾಕು ಹಾಗೂ ಪಿಸ್ತೂಲ್‌ ಹಿಡಿದು ಲಾರಿಯಲ್ಲಿದ್ದ ಚಾಲಕ ವಿಘ್ನೇಶ್‌, ಕ್ಲೀನರ್‌ ತಬ್ರಾಝ್, ಲೈನರ್‌ಗಳಾದ ಚೇತನ್‌, ಅರುಣ್‌ ಅವರನ್ನು ಬೆದರಿಸಿ, ಹಣಕ್ಕಾಗಿ ಪೀಡಿಸತೊಡಗಿದ್ದಾರೆ. ಆ ಸಂದರ್ಭ ಲಾರಿ ಚಾಲಕ ವಿಘ್ನೇಶ್‌ ತನ್ನ ಕಿಸೆಯಲ್ಲಿದ್ದ 15 ಸಾವಿರ ರೂಪಾಯಿಯನ್ನು ಅವರಿಗೆ ನೀಡಿದ್ದು, ಇನ್ನು ನಮ್ಮ ಬಳಿ ಹಣವಿಲ್ಲವೆಂದು ತಿಳಿಸಿದ್ದಾರೆ. ಆದರೆ ಅದನ್ನೊಪ್ಪದ ದರೋಡೆಕೋರರು ಇವರನ್ನು ಕೊಲ್ಲುವುದಾಗಿ ಬೆದರಿಸಿ, ಇನ್ನಷ್ಟು ಹಣಕ್ಕೆ ಪೀಡಿಸಿದ್ದು, ಆಗ  ಲಾರಿಯ ಡ್ಯಾಷ್‌ ಬೋರ್ಡ್‌ ನಲ್ಲಿಡಲಾಗಿದ್ದ ಮೀನು ವ್ಯವಹಾರದ ಹಣವಾದ ಸುಮಾರು 5 ರಿಂದ 6ಲಕ್ಷ ರೂಪಾಯಿಯ ಹಣದ ಕಟ್ಟನ್ನು ಲಾರಿಯಲ್ಲಿದ್ದವರು ನೀಡಿದ್ದು, ಅದನ್ನು ತೆಗೆದುಕೊಂಡ ದರೋಡೆಕೋರರು ಲಾರಿಯಲ್ಲಿದ್ದ ವರ ನಾಲ್ಕು ಮೊಬೈಲ್‌ಗ‌ಳನ್ನು ಕಿತ್ತುಕೊಂಡಿದ್ದಾರೆ. ಶಿರಾಡಿ ಗಡಿ ಹಾಗೂ ಗುಂಡ್ಯದ ನಡುವೆ ಸುಮಾರು ಅರ್ಧ ಗಂಟೆ ತನಕ ದರೋಡೆ ಕೋರರೇ ಲಾರಿ ಚಲಾಯಿಸಿದ್ದು, ಹಣ, ಸೊತ್ತು ಸಿಕ್ಕಿದ ಬಳಿಕವಷ್ಟೇ ಲಾರಿ ಹಿಂಬದಿ ಬರುತ್ತಿದ್ದ ಇನ್ನೋವಾ ಕಾರಿನಲ್ಲಿ ಹತ್ತಿ ಪರಾರಿಯಾಗಿದ್ದಾರೆ. ದರೋಡೆಕೋರರು ಬೆಂಗಳೂರು ಕನ್ನಡ, ತುಳು ಹಾಗೂ ಮುಸ್ಲಿಂ ಭಾಷೆ ಮಾತನಾಡುತ್ತಿದ್ದರೆನ್ನಲಾಗಿದೆ. ದರೋಡೆಕೋರರಿದ್ದ ಇನ್ನೋವಾ ವಾಹನದ ನಂಬರನ್ನು ಲಾರಿಯಲ್ಲಿ ದ್ದವರು ದಾಖಲಿಸಿ ಕೊಂಡಿದ್ದು, ಅದನ್ನು ಪೊಲೀಸರಿಗೆ ನೀಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.

ವಿಳಂಬವಾಗಿ ಪೊಲೀಸರಿಗೆ ಮಾಹಿತಿ
ಘಟನೆ ನಸುಕಿನ ಜಾವ 2ರಿಂದ 2:30ರ ಅವಧಿಯಲ್ಲಿ ನಡೆದಿದ್ದರೂ ಪೊಲೀಸರಿಗೆ ಮಾತ್ರ ಈ ವಿಷಯ ಗೊತ್ತಾಗುವಾಗ ಬೆಳಗ್ಗಿನ ಜಾವ ಸುಮಾರು 4 ಗಂಟೆ ಯಾಗಿತ್ತು. ದರೋಡೆ ನಡೆದ ಸ್ಥಳ ನಿರ್ಜನ ಪ್ರದೇಶವಾಗಿದ್ದರೂ ಬಳಿಕ ಸಿಗುವ ಗುಂಡ್ಯದಲ್ಲಿ ಚೆಕ್‌ಪೋಸ್ಟ್‌, ಅಂಗಡಿ, ಹೊಟೇಲ್‌ಗ‌ಳಿವೆ. ಆದರೆ ದರೋಡೆ ನಡೆದ ಬಳಿಕ ಗೊಂದಲಕ್ಕೀಡಾದ ಲಾರಿಯವರು ಲಾರಿಯನ್ನು ಎಲ್ಲಿಯೂ ನಿಲ್ಲಿಸದೇ ಪೆರಿಯಶಾಂತಿಯ ಮೂಲಕ ಕೊಕ್ಕಡಕ್ಕೆ ತೆರಳಿ, ಅಲ್ಲಿಂದ ಧರ್ಮಸ್ಥಳಕ್ಕೆ ತೆರಳಿ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದರೋಡೆ ನಡೆದ ವಿಷಯ ತಿಳಿಸಿದ್ದಾರೆ. ದರೋಡೆ ಬಗ್ಗೆ ಬಳಿಕ ಮಾಹಿತಿ ಪಡೆದ ಪೊಲೀಸರು ತತ್‌ಕ್ಷಣವೇ ಉಪ್ಪಿನಂಗಡಿ ಠಾಣೆಗೆ ಮಾಹಿತಿ ನೀಡಿದ್ದು, ಅದು ದರೋಡೆ ನಡೆದ ಸ್ಥಳ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯಾಗಿರುವುದರಿಂದ ದರೋಡೆಗೊಳಗಾದವರನ್ನು ಲಾರಿ ಸಮೇತ ಉಪ್ಪಿನಂಗಡಿ ಪೊಲೀಸ್‌ ಠಾಣೆಗೆ ಕಳುಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next