Advertisement

ಸಂಪರ್ಕ ರಸ್ತೆ ಡಾಮರು ಕಾಮಗಾರಿಗೆ ಆಗ್ರಹ

07:20 AM Apr 12, 2018 | Team Udayavani |

ಅಜೆಕಾರು: ಕಡ್ತಲ ಗ್ರಾ.ಪಂ. ವ್ಯಾಪ್ತಿಯ ಎಳ್ಳಾರೆಯಿಂದ ಹೊಗೆಜಡ್ಡು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಡಾಮರೀಕರಣಕ್ಕೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ  ರಸ್ತೆಯು ಮಣ್ಣಿನ ರಸ್ತೆಯಾಗಿದ್ದು ಮಳೆಗಾಲದಲ್ಲಿ ಸಂಚಾರಕ್ಕೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ರಿಪೇರಿಗೆ ಆಗ್ರಹಿಸಲಾಗಿದೆ. 
 
50 ಮನೆಗಳಿಗೆ ಸಂಪರ್ಕ 
ಈ ಪ್ರದೇಶದಲ್ಲಿ ಪರಿಶಿಷ್ಟ ಪಂಗಡದ ಜನರೇ ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಹೊಗೆಜಡ್ಡು ಹಾಗೂ ಕಡಂಬಳ್ಳಿಪ್ರದೇಶದಲ್ಲಿ ಸುಮಾರು 50 ಮನೆಗಳು ಇದ್ದು ನಿತ್ಯ ಸಂಪರ್ಕಕ್ಕೆ ಇದೇ ರಸ್ತೆ ಪ್ರಮುಖವಾದ್ದಾಗಿದೆ.  2014-15ನೇ ಸಾಲಿನಲ್ಲಿ ಈ ರಸ್ತೆಯ ಒಂದು ಭಾಗದಲ್ಲಿ 100 ಮೀ.ನಷ್ಟು  ಕಾಂಕ್ರೀಟ್‌ ಅಳವಡಿಸಲಾಗಿದ್ದು ಕಳೆದ ಆರ್ಥಿಕ ವರ್ಷದಲ್ಲಿ ಕಡ್ತಲ ಗ್ರಾಮ ಪಂಚಾಯತ್‌ ವತಿಯಿಂದ ಗ್ರಾಮವಿಕಾಸ ಯೋಜನೆಯಡಿ ಹೊಗೆಜಡ್ಡು ಪ್ರದೇಶದಲ್ಲಿ ಸುಮಾರು 120 ಮೀ.ನಷ್ಟು ಭಾಗಕ್ಕೆ ಕಾಂಕ್ರೀಟ್‌ ಹಾಕಲಾಗಿದೆ. ರಸ್ತೆಯ ಪ್ರಾರಂಭ ಹಾಗೂ ಅಂತ್ಯದಲ್ಲಿ ಕಾಂಕ್ರೀಟ್‌ ಅಳವಡಿಸಲಾಗಿದ್ದರೂ ಸಹ ನಡುನ ಸುಮಾರು 1.50ಕಿ. ಮೀ.ಯಷ್ಟು ರಸ್ತೆ ಕಚ್ಛಾರಸ್ತೆಯಾಗಿದ್ದು ಹೊಂಡ ಗುಂಡಿಗಳಿಂದ ಕೂಡಿದೆ. 

Advertisement

ಸಂಪರ್ಕಕ್ಕೆ ಪ್ರಯೋಜನ 
ಕಡಂಬಳ್ಳಿ ಬಾಬೆÂಬೆಟ್ಟು ಪ್ರದೇಶದಲ್ಲಿ ಪ್ರಸಕ್ತ ಸಾಲಿನಲ್ಲಿ  ಸೇತುವೆ ನಿರ್ಮಾಣವಾಗಿದ್ದು ಈ ಸೇತುವೆಯ ಮೂಲಕ ಖಜಾನೆ, ಶಿವಪುರ ಗ್ರಾಮಗಳನ್ನು ಸಂಪರ್ಕಿಸಲು ಬಹಳ ಸಹಕಾರಿಯಾಗಿದೆ. ಆದರೆ ಇಲ್ಲಿನ  ಸೇತುವೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೇ ಎಳ್ಳಾರೆ ಹೊಗೆಜಡ್ಡು ರಸ್ತೆಯಾಗಿದ್ದು ಈ ರಸ್ತೆ ಅಭಿವೃದ್ದಿಯಾದರೆ ಮಾತ್ರ ಜನರಿಗೆ ಅನುಕೂಲಕರವಾಗಲಿದೆ.  

ನಿತ್ಯ ಓಡಾಟಕ್ಕೆ ಸಮಸ್ಯೆ 
ಬೇಸಗೆಯಲ್ಲಿ ಹೊಂಡ ಗುಂಡಿಗಳೊಂದಿಗೆ ಧೂಳಿನಿಂದಾಗಿ ಇಲ್ಲಿ ಸಾಗಲು ಸಮಸ್ಯೆಯಾಗುತ್ತದೆ. ಹಾಗೂ ನಿತ್ಯ ಉದ್ಯೋಗಿಗಳು, ಇತರ ಕೆಲಸಕ್ಕೆ ತೆರಳುವವರಿಗೆ ಈ ರಸ್ತೆಯಲ್ಲಿ ಸಾಗುವುದು ಅಸಹನೀಯವಾಗಿದೆ. ಮಳೆಗಾಲದಲ್ಲಂತೂ ವಾಹನಗಳು ಸಂಚರಿಸಲು ಸಮಸ್ಯೆಯಾಗುವುದರಿಂದ ಈ ಕಡೆಗೆ ಯಾರೂ ಬರುವುದೂ ಇಲ್ಲ. ಆದ್ದರಿಂದ ಕೂಡಲೇ ರಸ್ತೆ ಅಭಿವೃದ್ಧಿಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. 

ಸಂಪರ್ಕ ರಸ್ತೆ
ಸ್ಥಳೀಯ ಸಂಪರ್ಕಕ್ಕೆ ಬಹು ಅಗತ್ಯವಾದ ಈ ರಸ್ತೆ ಬಗ್ಗೆ ಕಳೆದ ನಾಲ್ಕೈದು ವರ್ಷಗಳಲ್ಲಿ ಅಲ್ಪಸ್ವಲ್ಪ ಕೆಲಸವಾಗಿದೆ. ಆದರೆ ಪೂರ್ಣವಾಗಿ ರಸ್ತೆ ನಿರ್ಮಾಣವಾಗಿ ಉಪಯೋಗಕ್ಕೆ ಸಿಕ್ಕರೆ ಸಾಕಷ್ಟು ಪ್ರಯೋಜನವಾಗುತ್ತದೆ. 
– ಪ್ರಕಾಶ್‌ ಪ್ರಭು, 
ಸ್ಥಳೀಯರು ಹೊಗೆಜಡ್ಡು 

Advertisement

Udayavani is now on Telegram. Click here to join our channel and stay updated with the latest news.

Next