Advertisement

ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣಕ್ಕೆ ಅಸ್ತು

01:15 AM Sep 19, 2019 | Team Udayavani |

ಬೆಂಗಳೂರು: ನಗರದ ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ 65.5 ಕಿ.ಮೀ. ಉದ್ದದ ಪೆರಿಫೆರಲ್‌ ವರ್ತುಲ ರಸ್ತೆಯನ್ನು 11,950 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.

Advertisement

ಬಿಡಿಎ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ (ಕೆಯುಐಡಿಎಫ್ಸಿ) ಸಹಯೋಗದಲ್ಲಿ ವಿಶೇಷ ಉದ್ದೇಶ ವಾಹಕ (ಎಸ್‌ಪಿವಿ) ಸ್ಥಾಪಿಸಿ ಜಾರಿಗೊಳಿಸಲು ತೀರ್ಮಾನಿಸಲಾಗಿದೆ. ಯೋಜನೆಯಡಿ 1810 ಎಕರೆ ಖಾಸಗಿ ಭೂಮಿ ಅಗತ್ಯವಿದ್ದು, ಭೂಸ್ವಾಧೀನಕ್ಕೆ 8,100 ಕೋಟಿ ರೂ. ವೆಚ್ಚವಾಗಲಿದೆ. ರಸ್ತೆ ನಿರ್ಮಾಣಕ್ಕೆ ತಗಲುವ ವೆಚ್ಚ 3850 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಭೂಸ್ವಾಧೀನಕ್ಕೆ ತಗಲುವ ವೆಚ್ಚಕ್ಕೆ ರಾಜ್ಯ ಸರ್ಕಾರವು ಸಾಲ ಒದಗಿಸಿದರೆ ರಸ್ತೆ ನಿರ್ಮಾಣಕ್ಕೆ “ಜೈಕಾ’ ಸಂಸ್ಥೆಯಿಂದ ಸಾಲ ಪಡೆಯಲು ತೀರ್ಮಾನಿಸಲಾಗಿದೆ. ಪೆರಿಫೆರಲ್‌ ವರ್ತುಲ ರಸ್ತೆಯ ಮಾರ್ಗದಲ್ಲಿ ಲಭ್ಯವಿರುವ ಸರ್ಕಾರಿ ಭೂಮಿಯನ್ನು ಉಚಿತವಾಗಿ ಹಂಚಿಕೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಯೋಜನೆ ಪೂರ್ಣಗೊಂಡ ನಂತರ ರಸ್ತೆ ಬಳಕೆಗೆ ಟೋಲ್‌ ಸಂಗ್ರಹ ವ್ಯವಸ್ಥೆ ಜಾರಿಗೆ ಬರಲಿದೆ.

ಸಂಪುಟ ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಪೆರಿಫೆರಲ್‌ ವರ್ತುಲ ರಸ್ತೆ ನಿರ್ಮಾಣ ಯೋಜನೆಗೆ ಈ ಹಿಂದೆ ಹಣಕಾಸಿನ ಜತೆಗೆ ಭೂಸ್ವಾಧೀನ ಸಮಸ್ಯೆ ಕೂಡ ಇದ್ದಂತಿತ್ತು. ಇದೀಗ ಬಿಡಿಎ ಹಾಗೂ ಕೆಯುಐಡಿಎಫ್ಸಿ ವತಿಯಿಂದ ವಿಶೇಷ ಉದ್ದೇಶ ವಾಹಕ ಸ್ಥಾಪಕ ಸ್ಥಾಪಿಸಿ ಕಾರ್ಯಗತಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಯೋಜನೆಯಡಿ 100 ಮೀಟರ್‌ ಅಗಲದ ರಸ್ತೆ ನಿರ್ಮಾಣವಾಗಿದೆ. ಭೂಸ್ವಾಧೀನಕ್ಕೆ 8,100 ಕೋಟಿ ರೂ. ವೆಚ್ಚವಾಗುವ ಅಂದಾಜು ಇದೆ. ಎರಡು ಎಕರೆಗಿಂತ ಕಡಿಮೆ ವಿಸ್ತೀರ್ಣದ ಭೂಮಿ ಸ್ವಾಧೀನಕ್ಕೆ 2013ರ ಭೂಸ್ವಾಧೀನ ಕಾಯ್ದೆ ಮಾರ್ಗಸೂಚಿಯನ್ವಯ ಪರಿಹಾರ. ಎರಡು ಎಕರೆಗಿಂತ ಹೆಚ್ಚು ಭೂಮಿ ಸ್ವಾಧೀನಕ್ಕೆ ಶೇ.50ರಷ್ಟು ನಗದು ಪರಿಹಾರ ಹಾಗೂ ಶೇ.50ರಷ್ಟು ಟಿಡಿಆರ್‌ ನೀಡಲಾಗುವುದು. ಟಿಡಿಆರ್‌ ಒಪ್ಪದಿದ್ದವರಿಗೆ ಶೇ.100ರಷ್ಟು ನಗದು ಪರಿಹಾರ ಒದಗಿಸಲಾಗುವುದು ಎಂದು ತಿಳಿಸಿದರು.

Advertisement

ಈ ಹಿಂದೆ 75 ಮೀಟರ್‌ ಅಗಲದ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಭವಿಷ್ಯದ ಬೆಳವಣಿಗೆ ಗಮನದಲ್ಲಿಟ್ಟುಕೊಂಡು 100 ಮೀಟರ್‌ ಅಗಲದ ರಸ್ತೆ ನಿರ್ಮಾಣಕ್ಕೆ ತೀರ್ಮಾನಿಸಲಾಗಿದ್ದು, ವೆಚ್ಚ ತುಸು ಹೆಚ್ಚಾಗಿದೆ. ಸೈಕಲ್‌ ಪಥ, ಸರ್ವಿಸ್‌ ರಸ್ತೆ ಸೇರಿದಂತೆ ಸುಸಜ್ಜಿತ ರಸ್ತೆ ನಿರ್ಮಾಣವಾಗಲಿದೆ. ಒಂದು ವರ್ಷದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ನಂತರದ ಮೂರು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಮುಖ್ಯಮಂತ್ರಿ ನವ ನಗರೋತ್ಥಾನ: ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಗೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆ ಎಂದು ಮರುನಾಮಕರಣ ಮಾಡುವುದು. ಯೋಜನೆಯಡಿ 8,015 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಜತೆಗೆ 328 ಕೋಟಿ ರೂ. ಹೆಚ್ಚುವರಿ ಮೊತ್ತಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಈ ಬಗ್ಗೆ ಮಾಹಿತಿ ನೀಡಿದ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಕಳೆದ ಫೆಬ್ರುವರಿಯಲ್ಲಿ ಮುಖ್ಯಮಂತ್ರಿಗಳ ನವ ಬೆಂಗಳೂರು ಯೋಜನೆಯಡಿ ಕ್ರಿಯಾ ಯೋಜನೆಗೆ ನೀಡಿದ್ದ ಅನುಮೋದನೆ ರದ್ದುಪಡಿಸಲಾಗಿದೆ. ಹೊಸ ಕ್ರಿಯಾ ಯೋಜನೆಯಡಿ 8,015 ಕೋಟಿ ರೂ. ಮೊತ್ತದ ಜತೆಗೆ 328 ಕೋಟಿ ರೂ. ಹೆಚ್ಚುವರಿಯಾಗಿ ಸೇರ್ಪಡೆ ಮಾಡಿ ಅನುಮೋದನೆ ಪಡೆಯಲಾಗಿದೆ ಎಂದು ಹೇಳಿದರು.

ಐಟಿಪಿಎಲ್‌ನ ಸುತ್ತಮುತ್ತ 15 ರಸ್ತೆಗಳ ಪರ್ಯಾಯ ಅಭಿವೃದ್ಧಿಗೆ 250 ಕೋಟಿ ರೂ., ಕಡಿಮೆ ವೆಚ್ಚದಲ್ಲಿ ವೈಟ್‌ ಟಾಪಿಂಗ್‌ ಕಾಮಗಾರಿಯನ್ನು ಪ್ರಾಯೋಗಿಕವಾಗಿ ಕೈಗೊಳ್ಳಲು 50 ಕೋಟಿ ರೂ., ಯಾಂತ್ರೀಕೃತ ಸ್ವತ್ಛತಾ (ಮೆಕಾನಿಕಲ್‌ ಸ್ವೀಪಿಂಗ್‌) ಸಾಧನ ಖರೀದಿಗೆ 25 ಕೋಟಿ ರೂ. ಹಾಗೂ ಒಣ ತ್ಯಾಜ್ಯ ಸಂಗ್ರಹ ಘಟಕಗಳಿಗೆ 3.25 ಕೋಟಿ ರೂ. ವೆಚ್ಚದ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next