Advertisement

ಸಂವಿಧಾನ ಶಿಲ್ಪಿಗೆ ಕಾಂಗ್ರೆಸ್‌ನಿಂದ ಅಪಮಾನ: ಶಾಸಕ ಎನ್.ಮಹೇಶ್

03:41 PM Mar 29, 2023 | Team Udayavani |

ಪಿರಿಯಾಪಟ್ಟಣ: ಕಾಂಗ್ರೆಸ್ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನ ಮರೆಯಲು ಸಾಧ್ಯವಿಲ್ಲ ಎಂದು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ತಿಳಿಸಿದರು.

Advertisement

ತಾಲೂಕಿನ ಬೆಟ್ಟದಪುರದಲ್ಲಿ ಏರ್ಪಡಿಸಿದ್ದ ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ರೈತ ಮೋರ್ಚಾ ಸಮಾವೇಶದಲ್ಲಿ ಮಾತನಾಡಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಸಾವನಪ್ಪಿದಾಗ ಅವರ ಶವ ಸಂಸ್ಕಾರ ಮಾಡಲು ದೆಹಲಿಯಲ್ಲಿ ಅಂದಿನ ಪ್ರಧಾನಿ ನೆಹರೂರವರು ಅವಕಾಶ ಮಾಡಿಕೊಡಲಿಲ್ಲ. ಆನಂತರದಲ್ಲಿ ಸಮುದ್ರ ದಂಡೆಯಲ್ಲಿ ಶವಸಂಸ್ಕಾರ ಮಾಡಲಾಯಿತು. ಇದರಿಂದ ತಿಳಿಯುತ್ತದೆ ಕಾಂಗ್ರೆಸ್ ದಲಿತ ವಿರೋಧಿ ಎಂದು, ಈ ಕಾರಣಕ್ಕಾಗಿ ತಾಲೂಕಿನಲ್ಲಿರುವ 40 ಸಾವಿರ ಎಸ್ಟಿ, ಎಸ್ಸಿ ಸಮುದಾಯದವರು ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬಾರದು. ಕಾಂಗ್ರೆಸ್ ಪಕ್ಷ ನೈತಿಕತೆ ಇಲ್ಲದ ಪಕ್ಷವಾಗಿದ್ದು ನಾನು ಕೂಡ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಮತ್ತು ಮತ ಹಾಕುವಂತೆ ದಲಿತರಿಗೆ ಒತ್ತಾಯ ಮಾಡುವುದಿಲ್ಲ ಎಂದರು.

ನರೇಂದ್ರ ಮೋದಿ ಯವರ ನೇತೃತ್ವದ ಕೇಂದ್ರ ಸರ್ಕಾರ ದೆಹಲಿಯಲ್ಲಿ 200 ಕೋಟಿ ವೆಚ್ಚದಲ್ಲಿ ಬಾಬಾ ಸಾಹೇಬರ ಮಹಾಪರಿನಿರ್ವಾಣ ಸ್ಥಳವನ್ನು ನಿರ್ಮಿಸಿದ್ದು, ಬಿಜೆಪಿಯವರು ದಲಿತರಿಗೆ ಕೊಡುವ ಗೌರವವನ್ನು ನೋಡಿ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಇನ್ನು ಮುಂದೆಯೂ ಕೂಡ ನನ್ನ ಬೆಂಬಲ ಸದಾ ಬಿಜೆಪಿಗೆ ಆಗಿರುತ್ತದೆ ಎಂದರು.

ಪಿರಿಯಾ ಪಟ್ಟಣ ತಾಲೂಕಿನಲ್ಲಿಯೂ ಕೂಡ ಬದಲಾವಣೆಯ ಪರ್ವದ ಗಾಳಿಯು ಬೀಸುತ್ತಿದ್ದು, ಮುಂದಿನ ಚುನಾವಣೆಯಲ್ಲಿ ತಾಲೂಕಿನಲ್ಲಿ ಬಿಜೆಪಿ ಜಯಭೇರಿ ಬಾರಿಸುವುದು ಸತ್ಯ ಎಂದರು.

Advertisement

ರಾಜ್ಯ ಸರ್ಕಾರ ಮೀಸಲಾತಿ ವಿಚಾರದಲ್ಲಿ ಯಾವುದೇ ವರ್ಗಗಳಿಗೂ ಅನ್ಯಾಯವಾಗದಂತೆ ತೀರ್ಮಾನ ಮಾಡಿದ್ದಾರೆ. ಇಷ್ಟು ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಏಕೆ ಮೀಸಲಾತಿಯನ್ನು ಜಾರಿಗೊಳಿಸಲಿಲ್ಲ. ಇಷ್ಟು ಸೂಕ್ಷ್ಮವಾಗಿ ಜಾತಿ ವರ್ಗೀಕರಣ ಮಾಡಿ, ಮೀಸಲಾತಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಸಾಧ್ಯವಿಲ್ಲ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ ಮುಂದಿನ ದಿನಗಳಲ್ಲಿ ಅನಧಿಕೃತ ಬೆಳಗಾರರಿಗೆ ಲೈಸೆನ್ಸ್ ನೀಡಲು ಕ್ರಮ ಕೈಗೊಳ್ಳಲಾಗುವುದು, ಈ ವರ್ಷ ಪನಾಲ್ಟಿ ಇಲ್ಲದೆ ತಂಬಾಕು ಮಾರಾಟ ಮಾಡಲು ಅವಕಾಶ ಕಲ್ಪಿಸಿದ್ದು ನಮ್ಮ ಬಿಜೆಪಿ ಇದನ್ನು ತಾಲೂಕಿನ ಜನತೆ ಮರೆಯಬಾರದು ಎಂದರು.

ನರೇಗಾ ಯೋಜನೆ ಸದ್ಬಳಕೆಯಾಗುತ್ತಿರುವುದು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ, ತಾಲೂಕಿನ 34 ಪಂಚಾಯತಿಗಳನ್ನು ಆದರ್ಶ ಗ್ರಾಮವನ್ನಾಗಿ ಸೇರ್ಪಡೆಸಿದ್ದು, ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗಿದೆ ಎಂದರು.

ರಾಜ್ಯ ಸರ್ಕಾರ ಒಕ್ಕಲಿಗ ಜನಾಂಗಕ್ಕೆ ಮೀಸಲಾತಿಯನ್ನು ಹೆಚ್ಚಿಗೆ ಮಾಡಿದ್ದು, ನಮ್ಮ ಸರ್ಕಾರದ ಐತಿಹಾಸಿಕ ಸಾಧನೆ ಎಂದರು. ಮುಂದಿನ ದಿನಗಳಲ್ಲಿ ಪಿರಿಯಾಪಟ್ಟಣಕ್ಕೆ ಬಿಜೆಪಿ ಶಾಸಕ ಬಂದರೆ ಬೆಟ್ಟದಪುರಕ್ಕೆ ಸುಸಜ್ಜಿತವಾದ ಸಂತೆ ಮಾರುಕಟ್ಟೆಯನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರು.

ಪಕ್ಷ ಸೇರ್ಪಡೆ :
ಇದೇ ಸಂದರ್ಭದಲ್ಲಿ ಮಹಿಳೆಯರು ಸೇರಿದಂತೆ ಅನೇಕ ಕಾರ್ಯಕರ್ತರು ವಿವಿಧ ಪಕ್ಷಗಳನ್ನು ತೊರೆದು ಕೊಳ್ಳೇಗಾಲ ಶಾಸಕ ಎನ್ ಮಹೇಶ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳ ಸೋಮಶೇಖರ್, ಉಪಾಧ್ಯಕ್ಷ ಲೋಕೇಶ್, ಪ್ರಧಾನ ಕಾರ್ಯದರ್ಶಿ ಯೋಗಾನಂದ, ಎಸ್ಟಿ ಮೋರ್ಚಾ ಅಧ್ಯಕ್ಷ ಅಣ್ಣಯ್ಯನಾಯಕ್, ಮಾಜಿ ಶಾಸಕರಾದ ಎಚ್.ಸಿ.ಬಸವರಾಜು, ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್, ತಾಲೂಕು ಅಧ್ಯಕ್ಷ ರಾಜೇಗೌಡ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಸಿ.ವೀರಭಧ್ರ, ಬೆಮ್ಮತ್ತಿ ಚಂದ್ರು, ಮುಖಂಡರಾದ ಮೈ.ವಿ.ರವಿಶಂಕರ್, ಆರ್.ಟಿ.ಸತೀಶ್, ಮೈಲಾರಿ, ಬೆಕ್ಕರೆ ಮಹದೇವ್, ಅರುಣ್ ರಾಜೇ ಅರಸ್, ಹೆಚ್.ಜೆಪ್ರವೀಣ್, ಸುನಿಲ್, ಸೇರಿದಂತೆ ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದಲ್ಲಿ ಏರ್ಪಡಿಸಿದ್ದ ಬಿಜೆಪಿ ಎಸ್ಸಿ, ಎಸ್ಟಿ ಹಾಗೂ ರೈತ ಮೋರ್ಚಾ ಸಮಾವೇಶವನ್ನು ಪ್ರತಾಪ್ ಸಿಂಹ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ನೇತೃತ್ವದಲ್ಲಿ ಹಲವು ಮುಖಂಡರು ಬಿಜೆಪಿ ಸೇರ್ಪಡೆಗೊಂಡರು.

Advertisement

Udayavani is now on Telegram. Click here to join our channel and stay updated with the latest news.

Next