Advertisement

ಕುಡಿದು ಬಂದ ವರನ ಜತೆಗೆ ಮದುವೆಗೆ ಒಪ್ಪದ ಬಿಹಾರಿ ವಧು; ಮದುವೆ ರದ್ದು

05:42 AM Jan 19, 2019 | udayavani editorial |

ಭಾಗಲ್ಪುರ : ತನ್ನನ್ನು ಮದುವೆಯಾಗಲಿದ್ದ ವರ ಮಹಾಶಯ ಕಂಠಪೂರ್ತಿ ಕುಡಿದು ಮದುವೆ ಮಂಟಪಕ್ಕೆ ಬಂದಿದ್ದಾನೆ ಎಂಬುದನ್ನು ಅರಿತ ಬಿಹಾರದ ವಧು “ತಾನು ಎಷ್ಟು ಮಾತ್ರಕ್ಕೂ ಈ ಮದುವೆ ಮಾಡಿಕೊಳ್ಳುವುದಿಲ್ಲ’ ಎಂದು ದೃಢ ನಿರ್ಧಾರ ಪ್ರಕಟಿಸಿದ ಕಾರಣ ಮದುವೆಯೇ ರದ್ದಾದ ಘಟನೆ ನಡೆದಿದೆ. 

Advertisement

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಬಿಹಾರದಲ್ಲಿ ಕುಡಿತಕ್ಕೆ ಸಂಪೂರ್ಣ ನಿಷೇಧವಿದೆ. ಮದುವೆಗೆ ನಿರಾಕರಿಸಿದ ವಧುವಿನ ನಿರ್ಧಾರವನ್ನು ಆಕೆಯ ತಂದೆ, ತಾಯಿ, ಮನೆಯವರು, ಕುಟುಂಬದವರು ಮತ್ತು ಗ್ರಾಮಸ್ಥರು ಪ್ರಶಂಸಿಸಿದ್ದಾರೆ.

ವೃತ್ತಿಯಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದು  ಕಂಠಪೂರ್ತಿ ಕುಡಿದು ಬಂದು ಹುಡುಗಿಯ ಕಡೆಯವರೊಂದಿಗೆ ಜಗಳ ಮಾಡಿ, ಹಲ್ಲೆ ನಡೆಸಿದ ವರನನ್ನು ಪೊಲೀಸರು ಬಂಧಿಸಿದ್ದಾರೆ.

ನಲಂದಾ ಜಿಲ್ಲೆಯಲ್ಲಿ  ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದ ತಿಲಕ್‌ಪುರ ಗ್ರಾಮದ ನಿವಾಸಿ ಉದಯ್‌ ರಜಕ ಎಂಬ ವರನು ತಾನು ವರಿಸಲಿದ್ದ ಅಕ್‌ಬರ್‌ಪುರ ಗ್ರಾಮದ ನಿವಾಸಿ ಯೋಗೇಂದ್ರ ರಜಕ ಅವರ ಮಗಳೊಂದಿಗೆ ವಿಧ್ಯುಕ್ತವಾಗಿ ಹೂಮಾಲೆಯನ್ನು ವಿನಿಮಯಿಸಿಕೊಳ್ಳಲು ಮೊನ್ನೆ ಗುರುವಾರ ರಾತ್ರಿ ಅವರ ಮನೆಗೆ ಹೋಗಿದ್ದಾಗ ಆತ ಕಂಠಪೂರ್ತಿ ಕುಡಿದು ಬಂದಿರುವುದು ಗೊತ್ತಾಯಿತು. 

ವರ ಮಾತ್ರವಲ್ಲದೆ ಆತನೊಂದಿಗೆ ದಿಬ್ಬಣದಲ್ಲಿ ಬಂದಿದ್ದ ಆತನ ಸಂಬಂಧಿಕರು ಕೂಡ ಕುಡಿದ ಅಮಲಿನಲ್ಲಿದ್ದರು. ಪರಿಣಾಮವಾಗಿ ವಧುವಿನ ತಾಯಿಯ ಅಣ್ಣ  ಪ್ರಸೂನ್‌ ಕುಮಾರ್‌ ರಜಕ್‌ ಅವರು ಈ ಬಗ್ಗೆ ತೀವ್ರ ಆಕ್ಷೇಪ ಎತ್ತಿದಾಗ ಎರಡೂ ಕಡೆಯವರಲ್ಲಿ ಅದು ಜಗಳಕ್ಕೆ ಕಾರಣವಾಯಿತು. ಹುಡುಗನ ಕಡೆಯವರು ಹುಡುಗಿಯ ಮಾವನ ಮೇಲೆ ಹಲ್ಲೆ ನಡೆಸಿದರು ಎಂದು ಪ್ರಕರಣ ದಾಖಲಿಸಕೊಂಡು ತನಿಖೆ ನಡೆಸುತ್ತಿರುವ ಕಹಲ್‌ಗಾಂವ್‌  ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ದಿಲ್‌ನವಾಜ್‌ ಅಹ್ಮದ್‌ ತಿಳಿಸಿದರು. 

Advertisement

ವರ ಮತ್ತು ಆತನ ಕಡೆಯವರು ಕಂಠಪೂರ್ತಿ ಕುಡಿದು ಬಂದು ಗಲಾಟೆ ಮಾಡಿದುದನ್ನು ಅರಿತ ವಧು ಗಟ್ಟಿ ಮನಸ್ಸು ಮಾಡಿ ತಾನು ಮದುವೆ ಮಾಡಿಕೊಳ್ಳುವುದಿಲ್ಲ ಎಂದು ಖಡಕ್‌ ಆಗಿ ಹೇಳಿದಳು. 

ಗದ್ದಲ, ಹಲ್ಲೆಯ ಘಟನೆಯನ್ನು ಅನುಸರಿಸಿ ಪೊಲೀಸರು ವರನನ್ನು ಬಂಧಿಸಿದರು. ಅಬಕಾರಿ ಕಾಯಿದೆ ಪ್ರಕಾರ ಆತನ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು ತನಿಖೆಗೆ ಮುಂದಾದರು. 

ಪೊಲೀಸರು ಹುಡುಗನ ತಂದೆಯನ್ನಾಗಲೀ, ದಿಬ್ಬಣದಲ್ಲಿದ್ದವರನ್ನಾಗಲೀ ಬಂಧಿಸಿಲ್ಲ.  

Advertisement

Udayavani is now on Telegram. Click here to join our channel and stay updated with the latest news.

Next