Advertisement

Hariprasad ಹೇಳಿಕೆ ಸಿದ್ದು ಪದಚ್ಯುತಿಗೆ ಒಳಸಂಚು: ರೇಣುಕಾಚಾರ್ಯ

06:38 PM Jan 05, 2024 | Team Udayavani |

ದಾವಣಗೆರೆ: ಮತ್ತೊಂದು ಗೋದ್ರಾ ಘಟನೆ ಸಂಭವಿಸಬಹುದು ಎನ್ನುವ ವಿಧಾನಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಹೇಳಿಕೆ ಗಮನಿಸಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅ ಧಿಕಾರದಿಂದ ಕೆಳಗಿಳಿಸುವ ಒಳಸಂಚಿನಂತೆ ಕಾಣಿಸುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಟೀಕಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀರೇಂದ್ರ ಪಾಟೀಲ್‌ ಮುಖ್ಯಮಂತ್ರಿಯಾಗಿದ್ದಾಗ ಕೋಮುಗಲಭೆ ಹುಟ್ಟು ಹಾಕಿ ಅವರನ್ನು ಅಧಿಕಾರದಿಂದ ಕೆಳಗಿಳಿಸಲಾಗಿತ್ತು. ಈಗ ಹರಿಪ್ರಸಾದ್‌ ಹೇಳಿಕೆ ಗಮನಿಸಿದರೆ ಹಾಗೆಯೇ ಅನ್ನಿಸುತ್ತದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಬಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರಿಗೆ ಕ್ರೆಡಿಟ್‌ ಬರಬಹುದು ಎಂದು ಮುಖ್ಯಮಂತ್ರಿಯವರೇ ಈ ರೀತಿಯ ಪಿತೂರಿ ಮಾಡುತ್ತಿರಬಹುದು.

ಮುಖ್ಯಮಂತ್ರಿ ಸಿದ್ದರಾಮಯ್ಯ ದೇಶಭಕ್ತರ ಪರವೋ, ಕುಕ್ಕರ್‌, ಬಾಂಬ್‌ ಬ್ಲಾಸ್ಟ್‌ ಮಾಡಿದವರು ಹಾಗೂ ಭಯೋತ್ಪಾದಕರ ಪರವೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

31 ವರ್ಷದ ಹಿಂದೆ ನಡೆದ ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಕರಸೇವಕರೊಬ್ಬರನ್ನು ಬಂಧಿಸಲಾಗಿದೆ. ಆ ಮೂಲಕ ಹಿಂದೂ ಸಮಾಜದ ಮುಖಂಡರು, ಕರಸೇವಕರಲ್ಲಿ ಭಯ ಹುಟ್ಟಿಸುವಂತಹ ಪ್ರಯತ್ನ ನಡೆಸಲಾಗುತ್ತಿದೆ. ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ನನ್ನನ್ನೂ ಒಳಗೊಂಡಂತೆ ಎಲ್ಲ ಕರಸೇವಕರನ್ನು ಬಂ ಧಿಸಬೇಕು. ಅದೆಷ್ಟು ಜೈಲು ಕಟ್ಟಿಸುತ್ತಿರೋ ಕಟ್ಟಿಸಿ ಎಂದು ಸವಾಲೆಸೆದರು.

Advertisement

ಮಾಜಿ ಶಾಸಕ ಡಾ| ಯತೀಂದ್ರ ಸಿದ್ದರಾಮಯ್ಯ ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನ ಆಗುತ್ತದೆ ಎಂದು ಹೇಳಿದ್ದಾರೆ. ಭಾರತ ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನ ಆಗೋಲ್ಲ. ಅಖಂಡ ಭಾರತವಾಗುತ್ತದೆ. ಅದರಲ್ಲೂ ಯತೀಂದ್ರ ಭಾಗವಾಗಿರುತ್ತಾರೆ. ಸಿದ್ದರಾಮಯ್ಯ, ಆಂಜನೇಯ ಅವರಿಗೆ ಅವರ ತಂದೆ-ತಾಯಂದಿರು ಒಳ್ಳೆಯ ಹೆಸರು ಇಟ್ಟಿದ್ದಾರೆ. ಆದರೆ ಹೆಸರಿಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಹಿಂದೂಗಳ ಮತ ದೊರೆಯುವುದಿಲ್ಲ ಎಂದು ಅಲ್ಪಸಂಖ್ಯಾತರ ಮತಗಳಿಗಾಗಿ ನಡೆಸುತ್ತಿರುವ ತುಷ್ಟೀಕರಣ ನಿಲ್ಲಿಸಬೇಕು ಎಂದು ತಾಕೀತು ಮಾಡಿದರು.

ಹಿಂದೂ ವಿರೋಧಿ  ಸರ್ಕಾರದ ವಿರುದ್ಧ ನಮ್ಮ ಹೋರಾಟ ಜಾರಿಯಲ್ಲಿರುತ್ತದೆ. ಜ. 22ರಂದು ರಾಮಮಂದಿರ ಲೋಕಾರ್ಪಣೆಯಾಗಲಿದೆ. ದೇಶ ಮಾತ್ರವಲ್ಲ, ಇಡೀ ವಿಶ್ವದ ಜನರು ಉತ್ಸಾಹದಿಂದ ಇರುವಂತಹ ಸಂದರ್ಭದಲ್ಲಿ ಕರಸೇವಕರ ಬಂಧನ ಖಂಡನೀಯ ಎಂದು ದೂರಿದರು.

ಮಾಜಿ ಮೇಯರ್‌ ಬಿ.ಜಿ. ಅಜಯ್‌ಕುಮಾರ್‌, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ್‌, ಡಾ| ಟಿ.ಜಿ. ರವಿಕುಮಾರ್‌, ಕೆ.ಪಿ. ಕಲ್ಲಿಂಗಪ್ಪ, ರಾಜು ವೀರಣ್ಣ, ಆರ್‌. ಪ್ರತಾಪ್‌ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ಜ. 6ರಂದು ಹೊನ್ನಾಳಿ ಠಾಣೆಗೆ ಮುತ್ತಿಗೆ
ಹಿಂದೂಗಳು ಮತ್ತು ಕರಸೇವಕರ ಬಗೆಗಿನ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಜ. 6ರಂದು ಹೊನ್ನಾಳಿಯಲ್ಲಿ ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕಲಾಗುವುದು. ಶನಿವಾರ ಬೆಳಗ್ಗೆ 10:30ಕ್ಕೆ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಠಾಣೆಗೆ ತೆರಳಿ ಹೋರಾಟ ನಡೆಸಲಾಗುವುದು ಮತ್ತು ಮುತ್ತಿಗೆ ಹಾಕಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next