Advertisement

Railway track ದುಷ್ಕೃತ್ಯಕ್ಕೆ ಸಂಚು: ಉಳ್ಳಾಲ, ರೈಲ್ವೇ ಪೊಲೀಸರಿಂದ ತನಿಖೆ ಚುರುಕು

12:29 AM Oct 21, 2024 | Team Udayavani |

ಉಳ್ಳಾಲ: ತೊಕ್ಕೊಟ್ಟು ಓವರ್‌ ಬ್ರಿಡ್ಜ್ ಗಣೇಶ್‌ ನಗರ ಬಳಿ ರೈಲು ಹಳಿ ಮೇಲೆ ಜಲ್ಲಿಕಲ್ಲು ಇಟ್ಟಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಉಳ್ಳಾಲ ಪೊಲೀಸರು ಮತ್ತು ರೈಲ್ವೇ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಜಲ್ಲಿ ಕಲ್ಲು ಇಟ್ಟಿರುವುದನ್ನು ದೃಢಪಡಿಸಿದ್ದು, ಆರೋಪಿಗಳನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.

Advertisement

ಶನಿವಾರ ತಡರಾತ್ರಿ ಮಂಗಳೂರಿ ನಿಂದ ಕೇರಳ ಮತ್ತು ಕೇರಳದಿಂದ ಮಂಗಳೂರಿಗೆ ಸಂಚರಿಸುವ ರೈಲು ಹಳಿಯಲ್ಲಿ ರೈಲ್ವೇ ಹಳಿಯ ಬದಿಯಲ್ಲಿದ್ದ ಜಲ್ಲಿಕಲ್ಲುಗಳನ್ನು ಕಿಡಿಗೇಡಿಗಳು ರೈಲು ಹಳಿಯ ಮೇಲೆ ಇಟ್ಟು ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ್ದರು. ಒಂದು ರೈಲು ಹಳಿಯಲ್ಲಿ ಕೇರಳಕ್ಕೆ ರೈಲು ಸಂಚಾರ ನಡೆಸಿದಾಗ ಸಣ್ಣ ಸದ್ದು ಕೇಳಿದ್ದು, ಇನ್ನೊಂದು ಹಳಿಯಲ್ಲಿ ಮಂಗಳೂರು ಕಡೆ ರೈಲು ಸಂಚರಿಸಿದಾಗ ದೊಡ್ಡ ಸದ್ದು ಕೇಳಿದ್ದು, ಸ್ಥಳೀಯ ಮನೆಮಂದಿ ಬೆಚ್ಚಿ ಬಿದ್ದಿದ್ದರು. ಘಟನೆಗೆ ಸಂಬಂಧಿಸಿ ಸ್ಥಳೀಯರು ರೈಲ್ವೇ ಅಧಿಕಾರಿಗಳಿಗೆ ಮತ್ತು ಉಳ್ಳಾಲ ಪೊಲೀಸರಿಗೆ ದೂರು ನೀಡಿದರೆ, ರೈಲಿನ ಲೋಕೋಪೈಲಟ್‌ ಹಳಿಯಲ್ಲಿ ಕಲ್ಲುಗಳನ್ನು ಇಟ್ಟ ವಿಚಾರದಲ್ಲಿ ಮಂಗಳೂರು ರೈಲ್ವೇ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರೈಲ್ವೇ ಪೊಲೀಸರು ಮತ್ತು ಉಳ್ಳಾಲ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಸ್ಥಳ ಪರಿಶೀಲನೆ
ರವಿವಾರ ರೈಲ್ವೇ ಪೊಲೀಸರು ಮತ್ತು ಉಳ್ಳಾಲ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ತನಿಖೆ ಆರಂಭಿಸಿದ್ದಾರೆ. ರೈಲ್ವೇ ಅಧಿಕಾರಿಗಳು ಭೇಟಿ ನೀಡಿ ಘಟನೆಗೆ ಸಂಬಂಧಿಸಿ ಸ್ಥಳೀಯರಲ್ಲಿ ವಿಚಾರಣೆ ನಡೆಸಿದ್ದಾರೆ.

ಹಲವು ಬಾರಿ ಕೃತ್ಯ
ರೈಲ್ವೇ ಅಧಿಕಾರಿಯೊಬ್ಬರು ಮಾತನಾಡಿ, ಸಾಮಾನ್ಯವಾಗಿ ಉಳ್ಳಾಲದಿಂದ – ಮಂಗಳೂರು ನಡುವೆ ರೈಲು ಹಳಿ ಮೇಲೆ ಒಂದೆರಡು ಜಲ್ಲಿಕಲ್ಲು ಇಡುವ ಹಲವು ಪ್ರಕರಣಗಳು ನಡೆದಿದ್ದು, ಲೋಕೋ ಪೈಲಟ್‌ಗಳು ರೈಲ್ವೇ ಸ್ಟೇಷನ್‌ನಲ್ಲಿ ವರದಿ ನೀಡುತ್ತಾರೆ. ಹಲವು ಬಾರಿ ಈ ವ್ಯಾಪ್ತಿಯಲ್ಲಿ ದೂರುಗಳು ಬಂದ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ಆರಂಭಿಸಿದ್ದಾರೆ. ಈ ಘಟನೆಯನ್ನು ರೈಲ್ವೇ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳ ಪತ್ತೆ ಕಾರ್ಯ ನಡೆಸಲಾಗುವುದು ಎಂದು ಹೇಳಿದರು.

ರೈಲು ಹಳಿ ಮೇಲೆ ಕಲ್ಲು ಇಟ್ಟಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆ, ರೈಲ್ವೇ ಪೊಲೀಸರು ಮತ್ತು ಉಳ್ಳಾಲ ಪೊಲೀಸರು ಜಂಟಿಯಾಗಿ ತನಿಖೆ ನಡೆಸಬೇಕು. ಘಟನೆ ನಡೆದ ವ್ಯಾಪ್ತಿಯ ಮೊಬೈಲ್‌ ಲೊಕೇಷನ್‌ ಪತ್ತೆ ಮಾಡಿ ಶಂಕಿತರನ್ನು ವಶಕ್ಕೆ ಪಡೆದು ತನಿಖೆಗೆ ಒಳಪಡಿಸಬೇಕು. ಈ ಘಟನೆಗೆ ಸಂಬಂಧಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಮುಂದೆ ಇಂತಹ ಘಟನೆ ನಡೆಯದಂತೆ ಇಲಾಖೆ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಸ್ಥಳೀಯರು ಇದಕ್ಕೆ ಸಹಕಾರ ನೀಡಬೇಕು.
– ಯು.ಟಿ. ಖಾದರ್‌, ವಿಧಾನಸಭಾ ಸ್ಪೀಕರ್‌

Advertisement

ರೈಲು ಹಳಿಗಳ ಮೇಲೆ ಕಲ್ಲಿಟ್ಟಿರುವ ಪ್ರಕರಣವು ತೀವ್ರ ಕಳವಳಕಾರಿಯಾಗಿದ್ದು, ರಾಜ್ಯ ಕಾಂಗ್ರೆಸ್‌ ಸರಕಾರ ಹಾಗೂ ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಕೆಲವು ತಿಂಗಳ ಹಿಂದೆ ನೆರೆಯ ಕಾಸರಗೋಡಿನ ವಿವಿಧೆಡೆಯೂ ಹಳಿ ಮೇಲೆ ಕಲ್ಲು, ಕಬ್ಬಿಣದ ಸರಳು, ಕಾಂಕ್ರೀಟ್‌ ತುಂಡುಗಳನ್ನಿರಿಸಿ ರೈಲು ಹಳಿ ತಪ್ಪಿಸುವ ವಿಧ್ವಂಸಕ ಕೃತ್ಯ ನಡೆಸಲಾಗಿತ್ತು. ಈಗ ಮಂಗಳೂರಿನಲ್ಲೂ ಇಂಥ ಘಟನೆ ನಡೆದಿರುವುದು ತೀರಾ ಆಘಾತಕಾರಿ.
ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next