ಯಾದಗಿರಿ: ಕೃಷಿ ಹೊಂಡ, ಗೋಕಟ್ಟೆ ನಿರ್ಮಾಣದಂತ ಕಾಮಗಾರಿ ಕೈಗೊಳ್ಳುವುದರಿಂದ ನೀರಿನ ಸಂರಕ್ಷಣೆ ಜತೆಗೆ ಅಂತರ್ಜಲಮಟ್ಟ ಹೆಚ್ಚಲು ಸಹಕಾರಿಯಾಗುತ್ತದೆ ಎಂದು ಯಾದಗಿರಿ ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಪವಾರ ಹೇಳಿದರು. ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ತಿಮ್ಮಯ್ಯನ ಬೆಟ್ಟ ಹಾಗೂ ಸಿದ್ದಯ್ಯನ ಬೆಟ್ಟದ ಹಿಂದಿನ ಸರ್ಕಾರಿ ಜಮೀನಿನಲ್ಲಿ ನರೇಗಾ ಯೋಜನೆಯಡಿ ಹಮ್ಮಿಕೊಂಡ ಸಾಮುದಾಯಿಕ ಕೃಷಿ ಹೊಂಡ ಹಾಗೂ
ಎರಡು ಗೋಕಟ್ಟೆ ಪ್ರಗತಿಯಲ್ಲಿರುವ ಕಾಮಗಾರಿ ವೀಕ್ಷಿಸಿ ಮಾತನಾಡಿದರು.
ಜಲ ಶಕ್ತಿ ಅಭಿಯಾನದಡಿ ಮಳೆ ನೀರು ಸಂರಕ್ಷಿಸಲು ಅಗತ್ಯವಿರುವ ಕೃಷಿಹೊಂಡ, ಬದು ನಿರ್ಮಾಣ, ಕೆರೆ-ಹಳ್ಳ ಹೂಳೆತ್ತುವುದು, ಚೆಕ್ ಡ್ಯಾಂ, ಕಂದಕಗಳ ನಿರ್ಮಾಣ, ಇಂಗುಗುಂಡಿ, ಗೋಕಟ್ಟೆ ನಿರ್ಮಾಣ ಸೇರಿ ಇತರೆ ಕಾಮಗಾರಿ ಕೈಗೊಂಡು ಮಳೆ ನೀರು ಪೋಲಾಗದಂತೆ ತಡೆದು ಭೂಮಿಯಲ್ಲಿ ಇಂಗುವಂತೆ ಮಾಡಲು ಹಾಗೂ ದುಡಿಯೋಣ ಬಾ ಅಭಿಯಾನದ ಮೂಲಕ ಗ್ರಾಮೀಣ ಭಾಗದ ಅಕುಶಲ ಕೃಷಿ ಕೂಲಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಲು ಮನರೇಗಾ ಯೋಜನೆಯಡಿ ಗ್ರಾಪಂ ಮೂಲಕ ಕಾಮಗಾರಿಗಳ ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಗೋಮಾಳಗಳಲ್ಲಿ ಸಾಮುದಾಯಿಕ ಕೃಷಿ ಹೊಂಡ, ಗೋ ಕಟ್ಟೆ ನಿರ್ಮಾಣದಂತ ಕಾಮಗಾರಿ ಕೈಗೊಂಡರೆ ಜಮೀನಿನ ಬದುಗಳ ಮೇಲೆ ವಿವಿಧ ಹಣ್ಣಿನ ಸಸಿ ನಾಟಿ ಮಾಡಿದ ರೈತರಿಗೆ ನೀರಿನ ಸವಲತ್ತು ಪಡೆಯಲು ಅನುಕೂಲವಾಗುತ್ತದೆ. ಗಿಡ-ಮರಗಳ ಬೆಳವಣಿಗೆಯಿಂದ ಸಕಾಲಕ್ಕೆ ಮಳೆಯಾಗಿ ರೈತರು ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು. ಈ ವೇಳೆ ಗ್ರಾಪಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಗೋ ಕಟ್ಟೆ ಹಾಗೂ ಕೃಷಿ ಹೊಂಡ ಕಾಮಗಾರಿಗಳು ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಜನರ ಜೀವನೋಪಾಯಕ್ಕೆ ಸಹಾಯವಾಗುತ್ತದೆ. ಅಲ್ಲದೇ, ಕೃಷಿ ಹೊಂಡ, ಗೋ ಕಟ್ಟೆಯ ನಿರ್ಮಾಣದಿಂದ ಅಕ್ಕಪಕ್ಕದ ಬೆಳೆಗಳಿಗೆ ಅಗತ್ಯವಾದಾಗ ನೀರು ಹರಿಸಬಹುದು. ರೈತರು ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಅವಶ್ಯಕ ನೀರು ಪೂರೈಸಲು, ಸಣ್ಣ ರೈತರು ತೋಟಗಾರಿಕೆ ಬೆಳೆ ಬೆಳೆಯಲು, ಪಶು-ಪಕ್ಷಿಗಳಿಗೆ ಕುಡಿಯಲು ನೀರು ಒದಗಿಸಿದಂತಾಗುತ್ತದೆ.
ಚಂದ್ರಶೇಖರ ಪವಾರ,
ತಾಪಂ ಸಹಾಯಕ ನಿರ್ದೇಶಕ