ಕುಷ್ಟಗಿ:’ಪಾಕಿಸ್ಥಾನವನ್ನು ದೂಷಿಸುವವರು, ಪಾಕಿಸ್ಥಾನಕ್ಕೆ ಊಟಕ್ಕೆ ಹೋಗಿ ಬಿರಿಯಾನಿ ತಿಂದವರು ಕಾಂಗ್ರೆಸ್ಸಿನವರಾ? ಕಳೆದ 60 ವರ್ಷಗಳಲ್ಲಿ ನಮ್ಮ ಕಾಂಗ್ರೆಸ್ ಪ್ರಧಾನ ಮಂತ್ರಿಗಳು ಯಾರೂ ಪಾಕಿಸ್ಥಾನಕ್ಕೆ ಹೋಗಿಲ್ಲ. ಇದೆಲ್ಲಾ ಬಿಜೆಪಿಯವರ ನಾಟಕ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.
ಕುಷ್ಟಗಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ಥಾನಕ್ಕೆ ಹೋಗಿ ಬಂದಿರುವ ಬಗ್ಗೆ ಟೀಕಿಸಿದರು. ಕಾಂಗ್ರೆಸ್ಸಿನವರು ದೇಶ ಭಕ್ತಿ ಬಿಜೆಪಿಯವರಿಂದ ಕಲಿಯುವ ಅಗತ್ಯವಿಲ್ಲ. ಸ್ವಾತಂತ್ರ್ಯಕ್ಕಾಗಿ ದೇಶದ ಹೋರಾಟದ ಮಾಡಿದ ಪಕ್ಷ ನಮ್ಮದು ಎಂದರು.
ಪಾಕಿಸ್ಥಾನಕ್ಕೆ ಜೈಕಾರ ನಾವು ಹಾಕಲು ಸಾಧ್ಯವಿಲ್ಲ ನಮಗೆ ಹಿಂದೂಗಳು, ಮುಸ್ಲಿಮರು ಬೇಕು. ಪ್ರಜಾಪ್ರಭುತ್ವದ ದೇಶವಾಗಿದ್ದು ಎಲ್ಲರನ್ನು ಪ್ರೀತಿಸುವ ದೇಶ. ಎಲ್ಲಾ ಜಾತಿ ಧರ್ಮದವರನ್ನು ಪ್ರೀತಿಸುವ ಧರ್ಮವೆಂದರೆ ಅದು ಹಿಂದೂ ಧರ್ಮ, ಅದಕ್ಕೆ ತನ್ನದೇ ಆದ ಗೌರವವಿದೆ. ರಾಜಕೀಯ ಮಾಡುವುದಾದರೆ ಧರ್ಮಕ್ಕಿಂತ ಅಭಿವೃಧ್ಧಿಯ ಬಗ್ಗೆ ಮಾಡಬೇಕಿದೆ ಎಂದರು.
ರಾಮೇಶ್ವರ ಕೆಫೆಯಲ್ಲಿ ಬಾಂಬ್ ಪ್ರಕರಣಕ್ಕೆ ಸಂಬಂಧಿಸಿದಂತೆ ದುಷ್ಟ ಶಕ್ತಿಗಳು ಎಲ್ಲಾ ಕಾಲಕ್ಕೆ ಇರುವವರೇ, ಬಿಜೆಪಿ ಅಧಿಕಾರದಲ್ಲಿ ಮಂಗಳೂರಲ್ಲಿ ಬಾಂಬ್ ಬ್ಲಾಸ್ಟ್ ಆಗಿತ್ತು. ದುಷ್ಟರ ಮಟ್ಟ ಹಾಕುವ ಕೆಲಸ ಮಾಡಲು ನಮ್ಮ ಸಿಎಂ, ಸರ್ಕಾರ, ಪೊಲೀಸ್ ಗಟ್ಟಿಯಾಗಿದ್ದಾರೆ. ಪಾಕಿಸ್ಥಾನ ಜಿಂದಾಬಾದ್ ಎನ್ನುವುದು ಎಂದೆಂದಿಗೂ ಸಹಿಸುವುದಿಲ್ಲ. ಭೂಮಿಯ ಒಳಗೆ ಅಡಗಿದ್ದರೂ ಸಹ ಭೂಮಿಯೊಳಗೆ ಇಳಿದು ಎಳೆದು ಜೈಲಿಗೆ ಅಟ್ಟುತ್ತೇವೆ ಎಂದರು.
ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ ಆ ಚರ್ಚೆ ಇದೀಗ ಅಪ್ರಸ್ತುತವಾಗಿದೆ. ಕಳೆದ ವಿಧಾನಸಭೆಯಲ್ಲಿ 136 ಸ್ಥಾನ ಗೆದ್ದಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ 18ರಿಂದ 20 ಸ್ಥಾನ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದು 136 ಸ್ಥಾನ ಗೆದ್ದಿರುವ ನಾವು ಕಲ್ಲುಬಂಡೆಯಾಗಿ ಗಟ್ಟಿಯಾಗಿದ್ದು ಕಾಂಗ್ರೆಸ್ಸಿಗೆ ಭಯ ಎನ್ನುವ ಪ್ರಶ್ನೆ ಇಲ್ಲ. ಭಯ ಇರುವುದು ಬಿಜೆಪಿಗೆ ಇದೆ. 25 ಬಿಜೆಪಿ ಲೋಕಸಭಾ ಸದಸ್ಯರಿರುವ ಇರುವ ನಮ್ಮ ರಾಜ್ಯದಲ್ಲಿ ಈಗಾಗಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಬಹುದಾಗಿತ್ತು ಯಾಕೆ ಪ್ರಕಟಿಸಿಲ್ಲ ಎಂದು ಪ್ರಶ್ನಿಸಿದರು.
ಯಾರೂ ಗ್ಯಾರಂಟಿಗೆ ವಿರೋಧ ಮಾಡಿರುವವರೇ ಇದೀಗ ಬಿಜೆಪಿಯವರು ತಾವೇ ಗ್ಯಾರಂಟಿ ಪದ ಬಳಸಲಾರಂಭಿಸಿದ್ದಾರೆ. ಗ್ಯಾರಂಟಿಯಿಂದ ಜನರು ಖುಷಿಯಿಂದ ಇದ್ದು ವಿರೋಧ ಪಕ್ಷದವರಿಗೆ ಖುಷಿ ಇಲ್ಲ ಎಂದು ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡರು.