ಬೆಂಗಳೂರು: ಅಧಿಕಾರಕ್ಕಾಗಿ ಯಾವ ಮಟ್ಟಕ್ಕಾದರೂ ಇಳಿಯುವ ಕಾಂಗ್ರೆಸ್ ಪಕ್ಷ ಕೋಮುವಾದಿ, ಭಯೋತ್ಪಾದಕರೊಂದಿಗೆ ನಂಟು ಹೊಂದಿರುವವರ ಜತೆ ಕೈಜೋಡಿಸಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕಾಗಿ ರಾಷ್ಟ್ರೀಯ ಹಿತಾಸಕ್ತಿ ಸೇರಿ ಯಾವುದೇ ವಿಷಯದಲ್ಲಿ ರಾಜಿಗೂ ಹಿಂಜರಿಯುವುದಿಲ್ಲ. ಭಯೋತ್ಪಾದಕ ನಂಟು ಹೊಂದಿದ ಎಸ್‌ಡಿಪಿಐ ಹಾಗೂ ಪಿಎಫ್ಐ ಕಾರ್ಯಕರ್ತರ ಮೇಲೆ ರಾಷ್ಟ್ರೀಯ ತನಿಖಾ ದಳ ಪ್ರಕರಣ ದಾಖಲಿಸಿ ಹಲವರನ್ನು ವಶಕ್ಕೆ ಪಡೆದಿತ್ತು.
ಇಷ್ಟಾದರೂ ಅಲ್ಪಸಂಖ್ಯಾತರ ಓಲೈಕೆಗಾಗಿ ಇಂತಹ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುವ ಕೆಲಸ ಮಾಡುತ್ತಿದೆ. ಇವರ ಮೈತ್ರಿ ಎಷ್ಟರ ಮಟ್ಟಿಗಿದೆ ಎಂದರೆ ಚುನಾವಣೆಯಲ್ಲಿ ಎಸ್‌ಟಿಪಿಐ ಅಭ್ಯರ್ಥಿಗಳು ನಾಮಪತ್ರ ಹಿಂಪಡೆದಿದ್ದಾರೆ. ಇದನ್ನೆಲ್ಲಾ ಜನ ಗಮನಿಸುತ್ತಿದ್ದು, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಬಿಬಿಎಂಪಿಯಲ್ಲಿ ಲೂಟಿ: ಜೆಡಿಎಸ್‌ನೊಂದಿಗೆ ಕಾಂಗ್ರೆಸ್ ಪಕ್ಷ ಮೈತ್ರಿ ಮಾಡಿಕೊಂಡಿದೆ. ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿದ್ದರೂ ಅಧಿಕಾರಕ್ಕಾಗಿ ಕಾಂಗ್ರೆಸ್, ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದೆ. ಎರಡೂ ಪಕ್ಷಗಳು ಸೇರಿ ಲೂಟಿ ಮಾಡುತ್ತಿವೆ. ವಸ್ತುಸ್ಥಿತಿ ಹೀಗಿದ್ದರೂ ಅಲ್ಪಸಂಖ್ಯಾತರ ಮತ ಧ್ರುವೀಕರಣಕ್ಕಾಗಿ ಬಿಜೆಪಿ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಇನ್ನು 2- 3 ದಿನದಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗಲಿದೆ. ಪೂರ್ವ ನಿಗದಿಯಂತೆ ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸ ಕಾರ್ಯಕ್ರಮಗಳು ನಡೆಯಲಿವೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.