ಕೊಲ್ಕತ್ತಾ: ಪಶ್ಚಿಮ ಬಂಗಾಳದ ಭವಾನಿಪುರ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ.
ಬುಧವಾರ (ಸೆ.08) ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಟಿಎಂಸಿ ಅಭ್ಯರ್ಥಿ ಮಮತಾ ವಿರುದ್ಧ ಸ್ಪರ್ಧಿಸದಿರಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಉಪಚುನಾವಣೆಯ ಕಣದಿಂದ ಹಿಂದಕ್ಕೆ ಸರದಿರುವ ಕಾಂಗ್ರೆಸ್ ನಡೆಯ ಹಿಂದೆ ಪ್ರಬಲವಾದ ರಾಜಕೀಯ ಉದ್ದೇಶವಿದೆ. 2024 ರ ಲೋಕಸಭೆ ಚುನಾವಣೆಯಲ್ಲಿ ತೃಣ ಮೂಲ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಉದ್ದೇಶದಿಂದಲೇ ಉಪಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದೆ. ಈ ಮೂಲಕ ಮೈತ್ರಿಯ ಸುಳಿವು ನೀಡಿದೆ ಎನ್ನಲಾಗುತ್ತಿದೆ.
ಇನ್ನು ರಾಜ್ಯ ಸರ್ಕಾರದ ಮನವಿ ಮೇರೆಗೆ ಚುನಾವಣಾ ಆಯೋಗ ಶನಿವಾರವಷ್ಟೇ ಉಪ ಚುನಾವಣೆಯನ್ನು ಘೋಷಿಸಿತ್ತು. ದಕ್ಷಿಣ ಕೋಲ್ಕತ್ತಾದ ಭವಾನಿಪುರದಲ್ಲಿ ಟಿಎಂಸಿ ಈಗಾಗಲೇ ಪ್ರಚಾರವನ್ನು ಆರಂಭಿಸಿದೆ.
ನಂದಿಗ್ರಾಮ ಕ್ಷೇತ್ರದಲ್ಲಿ ಸೋತಿದ್ದ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಮುಂದುವರೆಯಲು ಭವಾನಿಪುರದಲ್ಲಿ ಗೆಲುವು ಅಗತ್ಯವಾಗಿದೆ. ಬಿಜೆಪಿ ಪಕ್ಷವು ಕೆಲವೊಂದು ಸ್ಪರ್ಧಾಕಾಂಕ್ಷಿಗಳ ಹೆಸರುಗಳ ಪಟ್ಟಿಯನ್ನು ಹೈಕಮಾಂಡ್ ಗೆ ಕಳುಹಿಸಿಕೊಟ್ಟಿದೆ.
ಭವಾನಿಪುರದ ಜೊತೆಗೆ ಮುರ್ಷಿದಾಬಾದ್ ನ ಜಂಗೀಪುರ ಹಾಗೂ ಸಮ್ ಸೇರ್ ಗುಂಜ್ ಕ್ಷೇತ್ರಕ್ಕೂ ಸೆಪ್ಟೆಂಬರ್ 30 ರಂದು ಉಪ ಚುನಾವಣೆ ನಡೆಯಲಿದ್ದು, ಅಕ್ಟೋಬರ್ 3 ರಂದು ಮತ ಎಣಿಕೆ ನಡೆಯಲಿದೆ. ಜಂಗೀಪುರಕ್ಕೆ ಜಾಕಿರ್ ಹುಸೇನ್ ಮತ್ತು ಸಮ್ ಸೇರ್ ಗುಂಜ್ ಕ್ಷೇತ್ರಕ್ಕೆ ಅಮಿರುಲ್ ಇಸ್ಲಾಂ ಅವರನ್ನು ಕಣಕ್ಕಿಳಿಸುತ್ತಿರುವುದಾಗಿ ಟಿಎಂಸಿ ಪಕ್ಷ ತಿಳಿಸಿದೆ.