ನವದೆಹಲಿ: ಕಾಂಗ್ರೆಸ್ ಪಕ್ಷ 2019ರ ಲೋಕಸಭಾ ಚುನಾವಣೆಗಿಂತ ಈ ಬಾರಿ ಹೆಚ್ಚು ಸ್ಥಾನ ಪಡೆಯಲಿದ್ದು, ಇಂಡಿಯಾ ಮೈತ್ರಿಕೂಟ ತಮಿಳುನಾಡು ಮತ್ತು ಕೇರಳದಲ್ಲೂ ಭರ್ಜರಿ ಜಯಗಳಿಸಲಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪಿ.ಚಿದಂಬರಂ ಭವಿಷ್ಯ ನುಡಿದಿದ್ದಾರೆ.
ಇದನ್ನೂ ಓದಿ:ಸೌದಿಯಲ್ಲಿ ಮರಣದಂಡನೆಗೆ ಒಳಗಾದ ಕೇರಳದ ವ್ಯಕ್ತಿಗಾಗಿ 34 ಕೋಟಿ ರೂ ಸಂಗ್ರಹ: ಏನಿದು ಸ್ಟೋರಿ?
ಪಿಟಿಐ ನ್ಯೂಸ್ ಏಜೆನ್ಸಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಚಿದಂಬರಂ, ಹಿಂದೂ ಧರ್ಮವಾಗಲಿ ಅಥವಾ ಹಿಂದೂಗಳಾಗಲಿ ಯಾವುದೇ ಬೆದರಿಕೆಗೆ ಒಳಗಾಗಿಲ್ಲ. ಪ್ರಧಾನಿ ಮೋದಿ ಅವರನ್ನು ಹಿಂದೂಗಳ ಸಂರಕ್ಷಕ ಎಂದು ಬಿಂಬಿಸಲು ವಿಪಕ್ಷಗಳನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿರುವುದು ಬಿಜೆಪಿಯ ಲೆಕ್ಕಾಚಾರದ ತಂತ್ರಗಾರಿಕೆಯಾಗಿದೆ ಎಂದು ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮಬಂಗಾಳ ಮುಖ್ಯಮಂತ್ರಿ, ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಪ್ರಮುಖ ಪ್ಲೇಯರ್ ಆಗಿದ್ದಾರೆ ಎಂದು ಚಿದಂಬರಂ ಬಣ್ಣಿಸಿದ್ದು, ಅವರ ಸಾಮರ್ಥ್ಯ ಇಂಡಿಯಾ ಮೈತ್ರಿಕೂಟವನ್ನು ಬಲಪಡಿಸಲಿದೆ ಎಂದು ತಿಳಿಸಿದ್ದಾರೆ.
ನಾನು ಎಲ್ಲಾ ರಾಜ್ಯಗಳ ಬಗ್ಗೆ ಮಾತನಾಡುವುದಿಲ್ಲ, ಆದರೆ ತಮಿಳುನಾಡಿನಲ್ಲಿ ಇಂಡಿಯಾ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಲಿದೆ. ಕೇರಳದಲ್ಲಿ ಯುಡಿಎಫ್ ಮತ್ತು ಎಲ್ ಡಿಎಫ್ 20 ಸ್ಥಾನಗಳನ್ನು ಹಂಚಿಕೊಂಡಿದೆ. ಇಲ್ಲಿ ಬಿಜೆಪಿಗೆ ಯಾವುದೇ ಅವಕಾಶ ಇಲ್ಲ. ಕರ್ನಾಟಕ ಮತ್ತು ತೆಲಂಗಾಣದಲ್ಲಿ ಜನಪ್ರಿಯ ಕಾಂಗ್ರೆಸ್ ಸರ್ಕಾರವಿದ್ದು, 2019ಕ್ಕಿಂತ ಹೆಚ್ಚಿನ ಸ್ಥಾನ ಗಳಿಸಲಿದೆ ಎಂದು ಚಿದಂಬರಂ ಪಿಟಿಐ ಸಂದರ್ಶನದಲ್ಲಿ ವಿಶ್ವಾಸವ್ಯಕ್ತಪಡಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳಲ್ಲಿ ಜಯಗಳಿಸಿತ್ತು. ಈ ಬಾರಿ ಹರ್ಯಾಣ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಮತ್ತು ದೆಹಲಿಯಲ್ಲಿ ಹೆಚ್ಚಿನ ಗೆಲುವು ಸಾಧಿಸುವ ಗುರಿಯನ್ನು ಇಂಡಿಯಾ ಮೈತ್ರಿಕೂಟ ಹೊಂದಿದೆ.
ಕಚ್ಚಾತೀವು ಮುಗಿದ ಅಧ್ಯಾಯವಾಗಿದೆ. ಅದು 50 ವರ್ಷಗಳ ಹಿಂದಿನ ಒಪ್ಪಂದವಾಗಿದೆ. 2014ರಿಂದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿದ್ದಾರೆ, ಕಳೆದ 10 ವರ್ಷಗಳಲ್ಲಿ ಮೋದಿ ಯಾಕೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ ಎಂದು ಚಿದಂಬರಂ ಪ್ರಶ್ನಿಸಿದ್ದಾರೆ.