Advertisement

ಸಿಎಂ ಸಿದ್ದುರಿಂದ ಕಾಂಗ್ರೆಸ್‌ ಬೆತ್ತಲು

12:38 PM Apr 09, 2018 | Team Udayavani |

ಮೈಸೂರು: ದುಶ್ಯಾಸನ ದ್ರೌಪದಿಯ ಸೀರೆ ಎಳೆದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ಅನ್ನು ಬೆತ್ತಲು ಮಾಡುತ್ತಿದ್ದರೆ, ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌, ಅಂಬರೀಶ್‌, ಆರ್‌.ವಿ.ದೇಶಪಾಂಡೆ ಅವರು ಸೀರೆಯ ಸೆರಗಿನಡಿ ಕುಳಿತ್ತಿದ್ದಾರೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಜಿ.ಟಿ. ದೇವೇಗೌಡ ಲೇವಡಿ ಮಾಡಿದರು.

Advertisement

ಮೈಸೂರಿನ ರಿಂಗ್‌ ರಸ್ತೆಯ ಶುಭೋದಿನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿ ಸಿದ್ದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಬಿಎಸ್‌ಪಿ ಹಾಗೂ ಜೆಡಿಎಸ್‌ ಮೈತ್ರಿ ಅಭ್ಯರ್ಥಿಯ ಪರಿಚಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬಂದ ಶ್ರೀನಿವಾಸಪ್ರಸಾದ್‌ ಗಂಡುಗಲಿ. ಚುನಾವಣೆಯಲ್ಲಿ ಸೋತರೂ ಅವರು ಜನ ನಾಯಕರೇ ಎಂದು ಗುಣಗಾನ ಮಾಡಿದರು. ಪರಮೇಶ್ವರ್‌ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟ ದಲಿತ ನಾಯಕರ ದನಿಯನ್ನು ಸಿದ್ದರಾಮಯ್ಯ ಅವರ ಸೂಟ್‌ಕೇಸ್‌ ಅಡಗಿಸಿತು. ಕೆಂಪಯ್ಯ ಇವರ ಕೈಕೆಳಗೆ ಕೆಲಸ ಮಾಡಲಾಗಲ್ಲ ಎಂದಿದ್ದಕ್ಕೆ ಪರಮೇಶ್ವರ್‌ರಿಂದ ಗೃಹ ಮಂತ್ರಿ ಸ್ಥಾನವನ್ನೂ ಕಿತ್ತುಕೊಂಡು ಬಿಟ್ಟ ಎಂದು ಏಕ ವಚನದಲ್ಲೇ ವಾಗ್ಧಾಳಿ ನಡೆಸಿದರು.

ಮಂತ್ರಿ ಸ್ಥಾನದಿಂದ ತೆಗೆದಿದ್ದಕ್ಕೆ ಪರಮೇಶ್ವರ್‌ ಪ್ರತಿಭಟಿಸಲೂ ಇಲ್ಲ. ಮಲ್ಲಿಕಾರ್ಜುನ ಖರ್ಗೆ ಯಂಥ ವರು ಪರಮೇಶ್ವರ್‌ ಮಂತ್ರಿಯಾಗಿರಲಿ ಅನ್ನಲಿಲ್ಲ. ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಮುಳುಗುತ್ತಿರುವುದರಿಂದ ಕಾಂಗ್ರೆಸ್‌ ಹೈಕಮಾಂಡ್‌ ಈಗ ಸಿದ್ದರಾಮಯ್ಯನ ಪಾದದಡಿ ಯಲ್ಲಿ ಬಂದು ಕುಳಿತಿದೆ ಎಂದು ಟೀಕಿಸಿದರು.

ಪರಮೇಶ್ವರ್‌ ಮುಖ್ಯಮಂತ್ರಿ ಯಾಗುವುದನ್ನು ತಪ್ಪಿಸಿದ್ದಲ್ಲದೆ, ಮತ್ತೆ ನಾನೇ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿಕೊಳ್ಳುತ್ತಿರುವ ಸಿದ್ದರಾಮಯ್ಯಗೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಉಪ ಮುಖ್ಯಮಂತ್ರಿ ಮಾಡುತ್ತೇನೆ ಎನ್ನುವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುವ ನೈತಿಕತೆ ಇದೆಯೇ ಎಂದು ಪ್ರಶ್ನಿಸಿದರು.

Advertisement

ಮುಖ್ಯಮಂತ್ರಿಯಾದವರು ಮೂರು ತಿಂಗಳ ಮುಂಚೆ ಚಾಮುಂಡೇಶ್ವರಿಯಿಂದ ಸ್ಪ$ರ್ಧೆ ಮಾಡುವುದಾಗಿ ಘೋಷಣೆ ಮಾಡಿಕೊಳ್ಳು ತ್ತಾರೆ. ಕ್ಷೇತ್ರದ ಒಕ್ಕಲಿಗರನ್ನು ಎತ್ತಿಕಟ್ಟಿ ಬೆಂಬಲ ಇದೆ ಎಂದು ಹೇಳಿಸಿಕೊಳ್ಳುತ್ತಾರೆ. ಆದರೆ, ಮುಖ್ಯಮಂತ್ರಿ ಯಾಗಿ ಸಿದ್ದರಾಮಯ್ಯ ಹಳ್ಳಿಗಳಿಗೆ ಹೋದರೂ ಅವರನ್ನು ಸ್ವಾಗತಿಸಲು ಬರಲಿಲ್ಲ. ಆದರೆ, ಡಿ. ಸಾಲುಂಡಿಯ 100 ಜನರು ಯಾವಾಗಲೂ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸುತ್ತಾರೆ. ಅವರನ್ನು ತೋರಿಸಿ ಸಿದ್ದರಾಮಯ್ಯ ನನಗೆ ಜನಬೆಂಬಲ ಇದೆ ಎಂದು ಹೇಳಿಕೊಳ್ಳುತ್ತಾರೆ ಎಂದು ಟೀಕಿಸಿದರು.

ವೀರಶೈವ-ಲಿಂಗಾಯಿತ ಸಮಾಜವನ್ನು ಇಬ್ಭಾಗ ಮಾಡಿದ ಸಿದ್ದರಾಮಯ್ಯ ಅವರನ್ನು ಸೋಲಿಸಲು ವೀರಶೈವರು ಕಾಯುತ್ತಿದ್ದಾರೆ. ಈ ಚುನಾವಣೆಯಲ್ಲಿ ಶಾಶ್ವತವಾಗಿ ಮನೆಗೆ ಕಳುಹಿಸಲು ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್‌-ಬಿಜೆಪಿಯನ್ನು ತುಳಿದು ರಾಜ್ಯದಲ್ಲಿ ಜೆಡಿಎಸ್‌-ಬಿಎಸ್ಪಿಯನ್ನು ಅಧಿಕಾರಕ್ಕೆ ತನ್ನಿ. ಆ ಮೂಲಕ ದೇಶದಲ್ಲಿ ಮಾಯಾವತಿಯವರು ಪ್ರಧಾನಮಂತ್ರಿ, ರಾಜ್ಯದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಸಹಕರಿಸಿ ಎಂದು ಮನವಿ ಮಾಡಿದರು.

ಎಚ್‌.ಡಿ.ಕುಮಾರಸ್ವಾಮಿಯವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಮ್ಮ ಪರ ಪ್ರಚಾರಕ್ಕೆ ಏ.15,16ರಂದು ಬರಲಿದ್ದಾರೆ. ಎರಡು ದಿನಗಳ ಕಾಲ ಕ್ಷೇತ್ರದ ವಿವಿಧ ಭಾಗಗಳಲ್ಲಿ ರೋಡ್‌ ಶೋ ನಡೆಸಲಿದ್ದಾರೆ.
-ಜಿ.ಟಿ.ದೇವೇಗೌಡ, ಜೆಡಿಎಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next