ಚಿಂಚೋಳಿ: ಡಾ.ಉಮೇಶ ಜಾಧವ್ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ವಿಚಾರಕ್ಕೆ ಪುಷ್ಟಿ ದೊರಕುತ್ತಿದ್ದಂತೆ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಂಜಾರಾ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ರೇವು ನಾಯಕ ಬೆಳಮಗಿ ಹಾಗೂ ಬಾಬುರಾವ್ ಚವ್ಹಾಣ ಅವರನ್ನು ಕಾಂಗ್ರೆಸ್‌ಗೆ ಸೆಳೆಯಲು ತೆರೆಮರೆ ಕಸರತ್ತು ಜೋರಾಗಿದೆ. ಬಾಬುರಾವ್ ಚವ್ಹಾಣ ಮೂಲ ಕಾಂಗ್ರೆಸ್ ನವರಾಗಿದ್ದು, ಈಗ ಬಿಜೆಪಿಯಲ್ಲಿದ್ದಾರೆ.
ಡಾ.ಮಲ್ಲಿಕಾರ್ಜುನ ಖರ್ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಬಂಜಾರಾ ಸಮಾಜದ ಮತಗಳನ್ನು ಸೆಳೆಯಲು ಈ ತಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಮಾಜಿ ಸಚಿವ ರೇವುನಾಯಕ ಬೆಳಮಗಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಎಸ್.ಬಂಗಾರಪ್ಪ , ಎಂ. ವೀರಪ್ಪ ಮೊಯ್ಲಿ ಸಚಿವ ಸಂಪುಟದಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಬಾಬುರಾವ್ ಚವ್ಹಾಣ ಒಟ್ಟಿಗೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಈ ಸಲುಗೆಯೇ ಚವ್ಹಾಣ ಕಾಂಗ್ರೆಸ್‌ಗೆ ಮತ್ತೆ ಮರಳಲು ಕಾರಣವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಸಿಎಂ ಸಿದ್ದರಾಮಯ್ಯ ಕರೆದ ಶಾಸಕಾಂಗ ಸಭೆಗೆ ಭಾಗವಹಿಸದೇ, ಅವರು ನೀಡಿದ ನೋಟಿಸ್‌ಗೆ ಉತ್ತರಿಸದೆ ಕೇವಲ ಬಜೆಟ್ ಅನುಮೋದನೆಗೆ ಮಾತ್ರ ಶಾಸಕ ಉಮೇಶ ಜಾಧವ್ ಹಾಜರಾಗಿದ್ದರು. ನಂತರ ಬಜೆಟ್‌ನಲ್ಲಿ ಚಿಂಚೋಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ವಿಷಯ ಪ್ರಸ್ತಾಪವಾಗಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಕೆಪಿಸಿಸಿ ಅಧ್ಯಕ್ಷ ದಿನೇಶ ಗುಂಡೂರಾವ್, ಮಾಜಿ ಸಿಎಂ ಸಿದ್ದರಾಮಯ್ಯ, ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಸಚಿವ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಉಮೇಶ ಜಾಧವ್ ಅವರ ಮನವೊಲಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ. ಬಿಜೆಪಿ ಸೇರಲು ಸಿದಟಛಿತೆ: ಸಂತ ಸೇವಾಲಾಲ ಮಹಾರಾಜ ಜಯಂತ್ಯುತ್ಸವ ವೇಳೆ ವಾಡಿ, ಶಹಾಬಾದ, ಚಿತ್ತಾಪುರ, ಕಲಬುರಗಿ ನಗರದಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಂಜಾರಾ ಸಮಾಜದವರ ಗಮನ ಸೆಳೆಯಲು ಜಾಧವ್ ಯತ್ನಿಸಿದ್ದಾರೆ. ಅಲ್ಲದೇ ಮೋದಿ ಅವರು ಕಲಬುರಗಿಗೆ ಭೇಟಿ ನೀಡಿದ ವೇಳೆ ಬಿಜೆಪಿ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಾಮರಾವ್ ಚಿಂಚೋಳಿ