ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಶಾಹಿಗಳ ವರ್ಗಾವಣೆ ಮತ್ತು ಪೋಸ್ಟಿಂಗ್ ಮಾಡುವ ಅಧಿಕಾರವನ್ನು ಲೆಫ್ಟಿನೆಂಟ್ ಗವರ್ನರ್‌ಗೆ ವಿಸ್ತರಿಸುವ ಕೇಂದ್ರ ಸರಕಾರವು ಹೊರಡಿಸಿದ ಸುಗ್ರೀವಾಜ್ಞೆಗೆ ವಿರೋಧ ಪಕ್ಷಗಳ ಬೆಂಬಲವನ್ನು ಪಡೆಯುತ್ತಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸಿಎಂ ಕೇಜ್ರಿವಾಲ್‌ಗೆ ಬೆಂಬಲ ನೀಡಿದ ಒಂದು ದಿನದ ನಂತರ ಕಾಂಗ್ರೆಸ್ ಪಕ್ಷವು ಆಮ್ ಆದ್ಮಿ ಪಕ್ಷಕ್ಕೆ ತನ್ನ ಬೆಂಬಲವನ್ನು ಘೋಷಿಸಿದೆ.
ದೆಹಲಿ ಸಿಎಂ ನಿತೀಶ್ ಅವರನ್ನು ಭೇಟಿ ಮಾಡಿದ ನಂತರ ಸುಗ್ರೀವಾಜ್ಞೆಯನ್ನು “ಸಂವಿಧಾನದ ವಿರುದ್ಧ” ಎಂದು ಹೇಳಿದ್ದರು. “ಚುನಾಯಿತ ಸರ್ಕಾರಕ್ಕೆ ನೀಡಿರುವ ಅಧಿಕಾರವನ್ನು ಹೇಗೆ ಕಸಿದುಕೊಳ್ಳಬಹುದು? ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ನಾವು ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ನಿಲ್ಲುತ್ತೇವೆ. ನಾವು ದೇಶದ ಎಲ್ಲಾ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಬಿಹಾರ ಸಿಎಂ ನಿನ್ನೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದ್ದರು.
ಸುಗ್ರೀವಾಜ್ಞೆ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಮತ್ತು ದೆಹಲಿ ಸರ್ಕಾರದ ನಡುವಿನ ರಾಜಕೀಯ ಹಗ್ಗಜಗ್ಗಾಟದ ನಡುವೆ, ಮೇ 31 ರ ಮೊದಲು ದೊಡ್ಡ ಪ್ರತಿಪಕ್ಷ ಸಭೆ ನಡೆಯುವ ಸಾಧ್ಯತೆಯಿದೆ. ಏತನ್ಮಧ್ಯೆ, ಕೇಂದ್ರ ಸರಕಾರದ ಕರಾಳ ಸುಗ್ರೀವಾಜ್ಞೆ ವಿರುದ್ಧ ಜೂನ್ 11 ರಂದು ಮಹಾರ್‍ಯಾಲಿ ಆಯೋಜಿಸುವುದಾಗಿ ಆಮ್ ಆದ್ಮಿ ಪಕ್ಷ ಸೋಮವಾರ ಹೇಳಿದೆ.