Advertisement
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 36 ಪರಿಶಿಷ್ಟ ಜಾತಿ ಹಾಗೂ 15 ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಒಟ್ಟು 51 ಕ್ಷೇತ್ರಗಳಿವೆ. ಈ ಮೀಸಲು ಕ್ಷೇತ್ರಗಳಲ್ಲಿ ಸಿಂಹಪಾಲು ಪಡೆದರೆ “ಮ್ಯಾಜಿಕ್ ನಂಬರ್’ ಸುಲಭವಾಗಿ ದಾಟಬಹುದು ಎಂಬುದು ಕಾಂಗ್ರೆಸ್ ವರಿಷ್ಠರ ಲೆಕ್ಕಾಚಾರ. ಹೀಗಾಗಿ ಈ ಸಲ ಮೀಸಲು ಕ್ಷೇತ್ರಗಳ ಟಿಕೆಟ್ ಹಂಚಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಕ್ಷೇತ್ರ ಸಂಪರ್ಕ, ಪಕ್ಷ ಸಂಘಟನೆ, ಪಕ್ಷ ನಿಷ್ಠೆ ಜತೆಗೆ ಶಾಸಕರು ಹಾಗೂ ಟಿಕೆಟ್ ಆಕಾಂಕ್ಷಿಗಳ ಬಗ್ಗೆ ಮತದಾರರು ಹೊಂದಿರುವ ಅಭಿಪ್ರಾಯ ಏನೆಂಬುದರ ಬಗ್ಗೆ ಆಂತರೀಕ್ಷ ಸಮೀಕ್ಷೆ ನಡೆಸಿ ಗೆಲುವಿನ ಮಾನದಂಡವನ್ನೇ ಮುಂದಿಟ್ಟುಕೊಂಡು ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ.
Related Articles
Advertisement
10 ಕಡೆ ಏಕೈಕ ಹೆಸರುಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸ್ಕ್ರೀನಿಂಗ್ ಕಮಿಟಿಯಲ್ಲಿ ಹಾಲಿ ಶಾಸಕರು ಪ್ರತಿನಿಧಿಸುತ್ತಿರುವ 10 ಕಡೆಗೆ ಮಾತ್ರ ಅವರವರ ಹೆಸರು ಅಂತಿಮಗೊಳಿಸಲಾಗಿದೆ. ಸತೀಶ್ ಜಾರಕಿಹೊಳಿ, ಪ್ರಿಯಾಂಕ ಖರ್ಗೆ, ಬಸನಗೌಡ ತಿರುವಿಹಾಳ, ಪ್ರಸಾದ್ ಅಬ್ಬಯ್ಯ, ಬಿ.ನಾಗೇಂದ್ರ, ಇ.ತುಕರಾಂ, ಟಿ.ರಘುಮೂರ್ತಿ, ಎಸ್.ಎನ್.ನಾರಾಯಣಸ್ವಾಮಿ, ಬಿ.ಶಿವಣ್ಣ ಹಾಗೂ ಅನಿಲ್ ಚಿಕ್ಕಮಾದು ಅವರು ಪಟ್ಟಿಯಲ್ಲಿ ಏಕೈಕ ಹೆಸರಿರುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜತೆಗೆ ಸುರಪುರಕ್ಕೆ ಮಾಜಿ ಶಾಸಕ ರಾಜವೆಂಕಟಪ್ಪ ನಾಯಕ್, ಕನಕಗಿರಿಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಅವರ ಹೆಸರುಗಳಿವೆ. ಶಾಸಕ ಅಖಂಡ ಶ್ರೀನಿವಾಸಮೂರ್ತಿ ಪ್ರತಿನಿಧಿಸುತ್ತಿರುವ ಪುಲಿಕೇಶಿನಗರಕ್ಕೆ ಅಖಂಡ ಜತೆಗೆ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಪ್ರಸನ್ನಕುಮಾರ್ ಅವರ ಹೆಸರು ಪಟ್ಟಿಯಲ್ಲಿ ಸೇರ್ಪಡೆಯಾಗಿರುವುದು ಅಖಂಡ ಅವರ ನೆಮ್ಮದಿ ಕೆಡಿಸಿದೆ. ಮಾಜಿ ಸಂಸದ ಬಿ.ವಿ.ನಾಯಕ್ ಅವರು ರಾಯಚೂರು ಗ್ರಾಮಾಂತರ, ಮಾನ್ವಿ, ದೇವದುರ್ಗ ಈ ರೀತಿ 3 ಕಡೆಯಿಂದಲೂ ಟಿಕೆಟ್ ಬಯಸಿದ್ದರೆ, ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಹೆಸರು ಮುಳಬಾಗಿಲು ಕ್ಷೇತ್ರದ ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಅವರು ಬಯಸಿದರೆ ದೇವನಹಳ್ಳಿಯಿಂದ ಟಿಕೆಟ್ ಸಿಗಬಹುದು. ಇನ್ನೊಂದಡೆದೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರು ಮತ್ತೆ ರಾಜ್ಯ ರಾಜಕಾರಣಕ್ಕೆ ಒಲವು ತೋರಿ ನಂಜನಗೂಡಿನಿಂದ ಟಿಕೆಟ್ ಕೇಳಿದ್ದಾರೆ. ಇದೇ ಕ್ಷೇತ್ರದಿಂದ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೂಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮಹದೇವಪ್ಪ ಅವರು ತಮ್ಮ ಹಿಂದಿನ ಕ್ಷೇತ್ರ ಟಿ.ನರಸೀಪುರದಿಂದ ಪುತ್ರ ಸುನಿಲ್ ಬೋಸ್‌ಗೆ ಟಿಕೆಟ್ ಕೊಡಿಸಲು ಶತಪ್ರಯತ್ನ ನಡೆಸಿದ್ದಾರೆ. ಹೊಸ ಪ್ರಯೋಗ?
ಆದರೆ ಶಾಸಕ ವೆಂಕಟರಮಣಪ್ಪ ಪ್ರತಿನಿಧಿಸುತ್ತಿರುವ ಪಾವಗಡಕ್ಕೆ ವೆಂಕಟರಮಣಪ್ಪ, ಅವರ ಪುತ್ರ ಎಚ್.ವಿ.ವೆಂಕಟೇಶ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಜಿಲ್ಲಾಧ್ಯಕ್ಷ ಎಚ್.ಕೆಂಚಮಾರಯ್ಯ ಹಾಗೂ ನರಸಪ್ಪ ಅವರ ಹೆಸರು ಸಂಭವನೀಯರ ಪಟ್ಟಿಯಲ್ಲಿವೆ. 1989ರಿಂದ ಸತತವಾಗಿ 2ನೇ ಬಾರಿ ಯಾರೊಬ್ಬರು ಇದುವರೆಗೂ ಗೆದ್ದ ಉದಾಹರಣೆ ಈ ಕ್ಷೇತ್ರದಲ್ಲಿ ಇಲ್ಲ. ಹೀಗಾಗಿ ಗೆಲುವು ಆ ಕಡೆ- ಈ ಕಡೆ ಆಗುತ್ತಿರುವುದರಿಂದ ಹೊಸ ಪ್ರಯೋಗಕ್ಕೆ ಕಾಂಗ್ರೆಸ್ ಮುಂದಾಗಿದೆ. ಮೊದಲಿಗೆ ಅಭ್ಯರ್ಥಿ ಬದಲಾವಣೆ ಜತೆಗೆ ಹೊಸ ಮುಖಗಳಿಗೆ ಅವಕಾಶ ನೀಡಿದರೆ ಬದಲಾವಣೆ ಸಾಧ್ಯ ಎಂಬುದು ಕಾಂಗ್ರೆಸ್‌ನ ತಂತ್ರಗಾರಿಕೆ. ಜೆಡಿಎಸ್, ಬಿಜೆಪಿಯಿಂದ ಈ ಸಲ ಎಡಗೈ ಸಮುದಾಯಕ್ಕೆ ಸೇರಿದವರೇ ಅಭ್ಯರ್ಥಿಗಳಾಗಲಿರುವುದರಿಂದ ಕಾಂಗ್ರೆಸ್‌ನಿಂದಲೂ ಎಡಗೈಗೆ ಸೇರಿದ ಮಾಜಿ ಸಂಸದ ಎಂ.ಚಂದ್ರಪ್ಪ ಅವರನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆದಿದೆ. ಶೇ. 48ರಷ್ಟು ಮತದಾರರು ಎಡಗೈನವರೇ ಆಗಿರುವುದು ಜತೆಗೆ ಶೇ.38ರಷ್ಟು ಗೊಲ್ಲ ಸಮುದಾಯದ ಮತದಾರರು ಕಾಂಗ್ರೆಸ್ ಕಡೆ ನಿಂತಿರುವುದು ಈ ಹೊಸ ಪ್ರಯೋಗ ಯಶಸ್ವಿಯಾಗಬಹುದು ಎಂಬುದು ಕೈಪಡೆ ಲೆಕ್ಕಾಚಾರ. ರೂಪಕಲಾಗೂ ಪೈಪೋಟಿ
ಇಷ್ಟೇ ಅಲ್ಲದೆ ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಅವರ ಪುತ್ರಿ ರೂಪಕಲಾ ಅವರು ಸದ್ಯ ಕೆಜಿಎಫ್ ಕ್ಷೇತ್ರ ಪ್ರತಿನಿಧಿಸುತ್ತಿದ್ದರೂ ಅವರ ಒಂದೇ ಹೆಸರು ಶಿಫಾರಸು ಆಗಿಲ್ಲ. ರೂಪಕಲಾ ಜತೆಗೆ ಕೆಪಿಸಿಸಿ ಮಾಜಿ ಕಾರ್ಯದರ್ಶಿ ಸಿ.ಬಿ.ಬಾಲಕೃಷ್ಣ ಕೂಡ ಟಿಕೆಟ್ ಆಕಾಂಕ್ಷಿಯಾಗಿರುವುದು ಕುತೂಹಲ ಕೆರಳಿಸಿದೆ. ಈ ಮಧ್ಯೆ ಮುಳಬಾಗಿಲು ಕ್ಷೇತ್ರಕ್ಕೆ ಕೆ.ಎಚ್.ಮುನಿಯಪ್ಪ ಸ್ಪರ್ಧಿಸಬೇಕೆಂದು ಹಲವರು ಶಿಫಾರಸು ಮಾಡಿದ್ದಾರೆ. ಈ ಕ್ಷೇತ್ರಕ್ಕೆ ಒಂದು ವೇಳೆ ಜಾತಿ ಪ್ರಮಾಣ ಪತ್ರದ ಕೋರ್ಟ್ ಪ್ರಕರಣ ಇತ್ಯರ್ಥಗೊಂಡರೆ ಜಿ.ಮಂಜುನಾಥ್ ಜತೆಗೆ ಡಾ.ಬಿ.ಸಿ.ಮುದ್ದುಗಂಗಾಧರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಪ್ಪಾ ಅಮರ್‌ನಾಥ್ ಹೆಸರುಗಳಿವೆ. ಮಹದೇವಪುರಕ್ಕೂ ಪುಷ್ಪಾ ಅಮರ್‌ನಾಥ್ ಟಿಕೆಟ್ ಕೇಳಿದ್ದಾರೆ. ಆದರೆ ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡ ಟಿ.ನಾಗೇಶ್ ಕಾಂಗ್ರೆಸ್ ಆಭ್ಯರ್ಥಿಯೆಂದು ಘೋಷಿಸಿಕೊಂಡು ತೀವ್ರ ಪ್ರಚಾರದಲ್ಲಿದ್ದಾರೆ. ಮೂಡಿಗೆರೆಗೆ ಯಾರು?
ಮೂಡಿಗೆರೆ ಕ್ಷೇತ್ರದಲ್ಲಿ ಕೊನೆಯದಾಗಿ 1999ರಲ್ಲಿ ಮೋಟಮ್ಮ ಗೆದ್ದ ನಂತರ ಅಲ್ಲಿ ಇದುವರೆಗೂ ಕಾಂಗ್ರೆಸ್ ಗೆದ್ದಿಲ್ಲ. ಈ ಕ್ಷೇತ್ರ ಮತ್ತೆ ಕಾಂಗ್ರೆಸ್ ಪಾಲಿಗೆ ಬರಬೇಕು ಎಂಬುದು ವರಿಷ್ಠರ ಲೆಕ್ಕಾಚಾರ. ಹೀಗಾಗಿ ಅಲ್ಲಿ ಮೋಟಮ್ಮ ಪುತ್ರಿ ನಯನ, ನಿವೃತ್ತ ಐಎಎಸ್ ಅಧಿಕಾರಿ ಎಂ.ಕೆ. ಶ್ರೀರಂಗಯ್ಯ, ಜಿಪಂ ಮಾಜಿ ಸದಸ್ಯ ಎಂ.ಸಿ.ಹೂವಪ್ಪ ಅವರ ಹೆಸರುಗಳು ಪಟ್ಟಿಯಲ್ಲಿವೆ. ಜತೆಗೆ ಮೋಟಮ್ಮ ಇಲ್ಲವೇ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರನ್ನು ಕಣಕ್ಕಿಳಿಸಿದರೆ ಸೂಕ್ತವೆಂದು ಹಿರಿಯಲು ಸಲಹೆ ನೀಡಿದ್ದಾರೆ. ಇಲ್ಲಿಂದ ಯಾರನ್ನು ಆಯ್ಕೆ ಮಾಡಬೇಕೆಂಬುದು ವರಿಷ್ಠರಿಗೆ ತಲೆನೋವಾಗಿದೆ. ಹ್ಯಾಟ್ರಿಕ್ ಸೋಲಿನ ಕ್ಷೇತ್ರ
ನೆಲಮಂಗಲದಲ್ಲಿ ಕಾಂಗ್ರೆಸ್ ಸತತವಾಗಿ 3 ಸಲ ಸೋತಿದೆ. 2008ರಲ್ಲಿ ಬಿಜೆಪಿ, 2013 ಹಾಗೂ 2018ರಲ್ಲಿ ಜೆಡಿಎಸ್ ಗೆದ್ದಿದೆ. 2004ರಲ್ಲಿ ಅಂಜನಮೂರ್ತಿ ಗೆಲುವೇ ಕೊನೆಯದು. ಹೀಗಾಗಿ ಈ ಸಲ ಇಲ್ಲಿ ಕಾಂಗ್ರೆಸ್ ಖಾತೆ ತೆರೆಯಬೇಕೆಂಬ ಪ್ರಯತ್ನಗಳು ನಡೆದಿವೆ. ಮಾಜಿ ಸಚಿವ ಆಂಜನಮೂರ್ತಿ, ಕೆಸಿಡಿಸಿ ಮಾಜಿ ಉಪಾಧ್ಯಕ್ಷ ಎಂ. ವೆಂಕಟೇಶ್, ಶ್ರೀನಿವಾಸಯ್ಯ, ಡಾ.ಬಿ.ಜಿ.ಚಂದ್ರಶೇಖರ್, ಡಾ.ಎಲ್.ಕೃಷ್ಣಮೂರ್ತಿ, ಎಚ್.ಪಿ.ಚಲುವರಾಜು ಸೇರಿ 10 ಮಂದಿ ಆಕಾಂಕ್ಷಿಗಳಿದ್ದಾರೆ. . ಬೆಂಗಳೂರು ಸಮೀಪದಲ್ಲಿರುವ ನೆಲಮಂಗಲಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳೇ ದೌಡಾಯಿಸಿದ್ದಾರೆ. ಇಲ್ಲಿ ಯಾರು ಗೆಲುವು ತಂದುಕೊಡಬಲ್ಲರು ಎಂಬ ಶೋಧ ನಡೆದಿದೆ. – ಎಂ.ಎನ್.ಗುರುಮೂರ್ತಿ