ಚನ್ನರಾಯಪಟ್ಟಣ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕಾವು ನಾಮಪತ್ರ ಸಲ್ಲಿಕೆ ದಿವಸ ಆಗಮಿಸಿದರು ಏರಿಕೆಯಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡದ ಹೊರತು ಕ್ಷೇತ್ರದಲ್ಲಿ ಚುನಾವಣಾ ಕಾವು ಏರಿಕೆಯಾಗುವುದಿಲ್ಲ. ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಬಿಜೆಪಿಗೆ ಕಾಂಗ್ರೆಸ್ ನಡುವೆ ಹಣಾಹಣಿ ನಡೆಯಲಿದೆ.
ಆದರೆ, ಶ್ರವಣಬೆಳಗೊಳದಲ್ಲಿ ಏನಿದ್ದರು, ಜೆಡಿಎಸ್-ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ, ಇಲ್ಲಿ ಬಿಜೆಪಿ ಅಭ್ಯರ್ಥಿ ನೆಪಕ್ಕ ಮಾತ್ರ ನಾಮಪತ್ರ ಸಲ್ಲಿಸಬೇಕು. ವಿಧಾನಸಭಾ ಚುನಾವಣೆಯಲ್ಲಿ ಈವರೆಗೆ ಹತ್ತು ಸಾವಿರ ಮತವನ್ನು ದಾಟುತ್ತಿಲ್ಲ ದಾಟುವ ಶಕ್ತಿ ಬಿಜೆಪಿ ಪಕ್ಷಕ್ಕಿಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಗಳಾಗಿ ಕಣಕ್ಕೆ ಇಳಿಯಲು ಈಗಾಗಲೆ ಆರು ಮಂದಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ ಯಾರಿಗೆ ಒಲಿಯಲಿದೆ ಆ ಅದೃಷ್ಟ ಎನ್ನುವುದು ಮಾತ್ರ ಇಂದಿಗೂ ನಿಗೂಢವಾಗಿದೆ. ಆದರೂ ಅರ್ಜಿ ಸಲ್ಲಿಸಿದವರೆಲ್ಲಾ ಸುಮ್ಮನೆ ಕುಳಿತಿಲ್ಲ. ತಮ್ಮದೇ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆದರೂ ಹೈಕಮಾಂಡ್ ಮಾತ್ರ ಶ್ರವಣಬೆಳಗೊಳದ ಬಗ್ಗೆ ಗುಟ್ಟು ಬಿಟ್ಟು ಕೊಟ್ಟಿಲ್ಲ.
ಯಾರ್ಯಾರು ಅರ್ಜಿ ಸಲ್ಲಿಸಿದ್ದಾರೆ: ಮಾಜಿ ಎಂಎಲ್‌ಸಿ ಎಂ.ಎ.ಗೋಪಾಲಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ.ಎಂ.ರಾಮಚಂದ್ರ, ಶ್ರೀಕಂಠಯ್ಯ ಕುಟುಂಬದಿಂದ ಸೊಸೆ ರಾಜೇಶ್ವರಿ ವಿಜಯಕುಮಾರ್, ಮೊಮ್ಮಗ ಲಲಿತ ರಾಘವ್ (ದೀಪು), ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಎಂ.ಶಂಕರ್, ಮಾಜಿ ಶಾಸಕ ಪುಟ್ಟೇಗೌಡರ ಪುತ್ರ ಜಿಪಂ ಮಾಜಿ ಸದಸ್ಯ ಎನ್.ಡಿ.ಕಿಶೋರ್ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.
ಮುಖಂಡರ ಮುಂದೆ ಜೈಕಾರ: ರಾಜ್ಯ ಚುನಾವಣೆಯಲ್ಲಿ ಈ ಬಾರಿ ಹಾಸನ ಕೇಂದ್ರೀಕೃತವಾಗಿದೆ ಹಾಗಾಗಿ ಕಾಂಗ್ರೆಸ್ ಪಕ್ಷದ ರಾಜ್ಯ ಮುಖಂ ಡರಾದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕಳೆದ ಒಂದು ತಿಂಗಳಲ್ಲಿ ಎರಡ್ಮೂರು ಬಾರಿ ಜಿಲ್ಲೆಗೆ ಆಗಮಿಸಿ ದ್ದಾರೆ ಈ ವೇಳೆ ಚನ್ನರಾಯಟಪ್ಟಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುವಾಗ ಕ್ಷೇತ್ರದ ಆಕಾಂಕ್ಷಿಗಳು ತಮ್ಮ ಬೆಂಬಲಿಗರೊಂದಿಗೆ ತೆರಳಿ ಜೈಕಾರ ಹಾಕಿಸಿಕೊಂಡು ಒತ್ತಡ ಹಾಕುತ್ತಿದ್ದಾರೆ. ಒಗ್ಗಟ್ಟಾಗಿ ಕೆಲಸ ಮಾಡಿ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ನಿಟ್ಟಿನಲ್ಲಿ ಮುಖಂಡರು ಅಭ್ಯರ್ಥಿ ಆಯ್ಕೆ ಕಸರತ್ತು ಮುಂದುವರೆಸಿದ್ದಾರೆ. ಎಲ್ಲಾ ಆಕಾಂಕ್ಷಿಗಳು, ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ವರಿಷ್ಠರು ಹುಕ್ಕುಂ ಹೊರಡಿಸಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಡಿ.ಕೆ. ಸುರೇಶ್ ಹಾಗೂ ಇತ್ತೀಚೆಗೆ ನಿಧನರಾದ ಧ್ರುವನಾರಾಯಣ್ ಎಲ್ಲಾ ಆಭ್ಯರ್ಥಿಗಳನ್ನು ಒಟ್ಟಿಗೆ ಸೇರಿಸಿ ಸಭೆ ಮಾಡಿ ಕ್ಷೇತ್ರದಲ್ಲಿ ಸಂದೇಶ ರವಾನೆ ಮಾಡಿದ್ದಾರೆ.
ಡಿ.ಕೆ.ಸುರೇಶ್‌ಗೆ ಹೆಚ್ಚು ಜವಾಬ್ದಾರಿ: ಹಾಸನ ಜಿಲ್ಲೆ ಚುನಾವಣಾ ಉಸ್ತುವಾರಿ ಡಿ.ಕೆ.ಸುರೇಶ್ ಈಗಾಗಲೆ ಕಳೆದ ಎಂಟು ತಿಂಗಳಿನಿಂದ ಕ್ಷೇತ್ರದಲ್ಲಿ ಸಾಕಷ್ಟು ಸಭೆ ಮಾಡಿದ್ದಾರೆ. ಇಲ್ಲಿ ಗೆಲ್ಲುವ ಕುದುರೆ ಹುಡುಕಿದ್ದಾರೆ. ಆದರೆ, ಶ್ರೀಕಂಠಯ್ಯ ಸಮಕಾಲಿನರಾದ ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರಧ್ಯಕ್ಷರಾದ ಮೇಲೆ ಸಾಕಷ್ಟು ಬದಲಾವಣೆ ಗಾಳಿ ಬೀಸುತ್ತಿದ್ದು ಟಿಕೆಟ್ ಘೋಷಣೆ ತಡವಾಗುತ್ತಿದೆ. ಸಿಎಂ ಕುರ್ಚಿ ಮೇಲೆ ಡಿಕೆಶಿ ಕೂರಿಸುವ ಮಹದಾಸೆ ಹೊತ್ತಿರುವ ಡಿ.ಕೆ. ಸುರೇಶ್ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಟಕ್ಕರ್ ಕೊಡುವ ಅಭ್ಯರ್ಥಿ ಕಣಕ್ಕೆ ಇಳಿಸಬೇಕು ಎನ್ನುವ ವಾದಗಳು ಪಕ್ಷದೊಳಗೆ ಕೇಳಿ ಬಂದಿದೆ.
ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಿದ ಗೊಂದಲ : ನಾಮಪತ್ರ ಸಲ್ಲಿಕೆ ದಿನ ಸಮೀಪಿಸಿದರೂ ಕೂಡ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿಲ್ಲ. ಇದರಿಂದ ಕಾರ್ಯಕರ್ತರಲ್ಲಿ ಪಕ್ಷ ಗೆಲ್ಲಿಸಿಕೊಳ್ಳುವ ಉತ್ಸಾಹವಿದ್ದರೂ ಯಾರ ಪರ ಕೆಲಸ ಮಾಡಬೇಕೆಂಬ ಗೊಂದಲದಲ್ಲಿ ಮುಳುಗಿದ್ದಾರೆ. ಅತ್ತ ಬಿಜೆಪಿ ಕೂಡ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿಲ್ಲ. ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆಯಾಗಿದ್ದು, ಇದನ್ನು ಕೆಡವಲು ರಾಷ್ಟ್ರೀಯ ಪಕ್ಷಗಳು ಕಳೆದ 3 ದಶಕಗಳಿಂದ ವಿಫಲವಾಗಿವೆ. ಪ್ರಬಲ ಅಭ್ಯರ್ಥಿ ಹಾಕುವಲ್ಲಿ ಅನುಸರಿಸುತ್ತಿರುವ ವಿಳಂಬ ನೀತಿಯಿಂದಲೇ ಜೆಡಿಎಸ್‌ಗೆ ಲಾಭವಾಗಿದೆ. ಚುನಾವಣೆ ವರ್ಷದಲ್ಲಿ ರಾಷ್ಟ್ರೀಯ ಪಕ್ಷಗಳ ತಯಾರಿ ಯುದ್ಧ ಕಾಲದಲ್ಲಿ ಶಸ್ತ್ರಭ್ಯಾಸ ಎಂಬಂತಾಗಿದೆ. ಹಾಗಾಗಿ 30 ವರ್ಷಕ್ಕೂ ಹೆಚ್ಚು ಕಾಲ ಇಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಭದ್ರ ನೆಲೆಯೂರಿದೆ.