Advertisement

ಕೇಂದ್ರ ಸರ್ಕಾರದ ಧೋರಣೆಗೆ ಕಾಂಗ್ರೆಸ್‌ ಕಿಡಿ

02:15 PM Apr 05, 2022 | Team Udayavani |

ದಾವಣಗೆರೆ: ಅಚ್ಚೇ ದಿನ್‌ ಹೆಸರಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ, ಔಷಧಗಳ ಬೆಲೆ ಹೆಚ್ಚಳದ ಮೂಲಕ ಜನ ಜೀವನ ದುಸ್ತರ ಮಾಡುತ್ತಿದೆ ಎಂದು ಆರೋಪಿಸಿ ಸೋಮವಾರ ಜಿಲ್ಲಾ ಕಾಂಗ್ರೆಸ್‌ ಮುಖಂಡರು, ಪದಾಧಿಕಾರಿಗಳು, ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ಶ್ರೀ ಜಯದೇವ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಚ್‌.ಬಿ. ಮಂಜಪ್ಪ ಮಾತನಾಡಿ, ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಮತ್ತು ಔಷಧಗಳ ದರ ಏರಿಕೆಯಿಂದ ಜನರು ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಅಚ್ಚೇ ದಿನ್‌ ತರಲಾಗುವುದು ಎಂದು ಜನರಿಗೆ ಹೇಳಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸುವ ಮೂಲಕ ಜನರಿಗೆ ಅತ್ಯಂತ ಕೆಟ್ಟ ದಿನಗಳನ್ನು ತಂದಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿಯಂತ್ರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಕ್ಷದಿಂದ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ ಮಾತನಾಡಿ, ಪ್ರತಿನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನಸಾಮಾನ್ಯರು ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ದೂರಿದರು. ದಾವಣಗೆರೆ ಉತ್ತರ ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಾಗಾನಹಳ್ಳಿ ಪರಶುರಾಮ್‌ ಮಾತನಾಡಿ, ರೈತರು ಬೆಳೆದ ಬೆಳೆಗೆ ಸಮರ್ಪಕ ಬೆಲೆ ನೀಡದ ಕೇಂದ್ರ ಸರ್ಕಾರ ರೈತರು ಖರೀದಿಸುವ ಗೊಬ್ಬರ, ಬಿತ್ತನೆ ಬೀಜಗಳ ದರವನ್ನು ಹೆಚ್ಚಿಸುವ ಮೂಲಕ ಅನ್ನದಾತ ಸಂಕಷ್ಟದ ಪರಿಸ್ಥಿತಿಗೆ ಬರುವಂತೆ ಮಾಡಲಾಗಿದೆ ಎಂದು ಆರೋಪಿಸಿದರು.

ದಾವಣಗೆರೆ ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಯೂಬ್‌ ಪೈಲ್ವಾನ್‌ ಮಾತನಾಡಿ, ದೇಶದಲ್ಲಿ ಹಿಂದೂ ಮುಸ್ಲಿಂ ಸೇರಿದಂತೆ ಎಲ್ಲಾ ಧರ್ಮ ಜಾತಿಯವರು ಸಹೋದರರಂತೆ ಜೀವನ ನಡೆಸುತ್ತಿದ್ದಾರೆ. ಬಿಜೆಪಿಯವರು ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಹಿಜಾಬ್‌, ಹಲಾಲ್‌ ಎಂದು ವಿವಾದ ಎಬ್ಬಿಸುವ ಮೂಲಕ ಸಮಾಜದಲ್ಲಿ ಶಾಂತಿ ಕೆಡಿಸುತ್ತಿದ್ದಾರೆ ಎಂದು ದೂರಿದರು.

ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಧರ್ಮ ಮತ್ತು ರಾಜಕಾರಣವನ್ನು ಒಟ್ಟು ಮಾಡಿ ಕೋಮುವಾದಿ ಆಡಳಿತ ನಡೆಸುವ ಬಿಜೆಪಿಯಿಂದಾಗಿ ಮುಂದೊಂದು ದಿನ ಜನ ಬೆಲೆ ತೆರಬೇಕಾಗುತ್ತದೆ ಎಂದರು.

Advertisement

ದಾವಣಗೆರೆ ಉತ್ತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆ.ಜಿ. ಶಿವಕುಮಾರ್‌, ಎಪಿಎಂಸಿ ಮಾಜಿ ಅಧ್ಯಕ್ಷ ಮುದೇಗೌಡ್ರು ಗಿರೀಶ್‌ ,ನಗರಪಾಲಿಕೆ ಸದಸ್ಯರಾದ ಎ.ನಾಗರಾಜ್‌, ಕೆ. ಚಮನ್‌ ಸಾಬ್‌, ಎಸ್‌. ಮಲ್ಲಿಕಾರ್ಜುನ್‌, ಎಚ್‌. ಜಯಣ್ಣ, ಶಿರಮಗೊಂಡನಹಳ್ಳಿ ರುದ್ರೇಶ್‌, ನಿಖೀಲ್‌ ಕೊಂಡಜ್ಜಿ, ಎಲ್‌.ಎಂ.ಎಚ್‌. ಸಾಗರ್‌, ರಾಘವೇಂದ್ರ ಗೌಡ, ಹರೀಶ್‌ ಕೆ.ಎಲ್‌. ಬಸಾಪುರ, ಬಾತಿ ಶಿವಕುಮಾರ್‌, ನಂಜಾ ನಾಯ್ಕ, ಯಾಸೀನ್‌ ಪೀರ್‌, ಶುಭಮಂಗಳ, ರಾಜೇಶ್ವರಿ, ಲಕ್ಷ್ಮೀಬಾಯಿ, ಸಾಕಮ್ಮ, ಕವಿತಾ ಚಂದ್ರಶೇಖರ್‌, ರಾಧಾಬಾಯಿ, ಸುರೇಶ್‌ ಜಾಧವ್‌, ಡೋಲಿ ಚಂದ್ರು, ಕೋಳಿ ಇಬ್ರಾಹಿಂ, ಗುರುರಾಜ್‌, ರಾಕೇಶ್‌, ವಿನಯ್‌, ರವಿ ಇತರರು ಇದ್ದರು.

ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಕಳೆದ 10 ದಿನಗಳಲ್ಲಿ ಪ್ರತಿ ಲೀಟರ್‌ಗೆ 6.40 ರೂಪಾಯಿಯಷ್ಟು ಹೆಚ್ಚಳವಾಗಿದೆ. ಸ್ಥಳೀಯ ತೆರಿಗೆಯನ್ನು ಅವಲಂಬಿಸಿ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ವ್ಯತ್ಯಾಸವಾಗುತ್ತಿದೆ. ಮಾ. 22ರ ನಂತರ ಸತತ 9 ಬಾರಿ ಇಂಧನ ಬೆಲೆ ಹೆಚ್ಚಳವಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಮುಖೀಯಾಗುತ್ತಿವೆ. ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ.

– ಡಿ. ಬಸವರಾಜ್‌, ಕೆಪಿಸಿಸಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next