Advertisement

ಕಾಂಗ್ರೆಸ್‌ ಮುಕ್ತ ಭಾರತಕ್ಕೆ ಸ್ಪಂದನೆ

11:57 AM Mar 04, 2018 | Team Udayavani |

ಬೆಂಗಳೂರು: “ತ್ರಿಪುರಾ, ನಾಗಾಲ್ಯಾಂಡ್‌ ಮತ್ತು ಮೇಘಾಲಯದ ಜನ ಕಾಂಗ್ರೆಸ್‌ ಮುಕ್ತ ಭಾರತದ ಬಿಜೆಪಿ ಆಶಯಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ,’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Advertisement

ಈಶಾನ್ಯ ರಾಜ್ಯಗಳ ಚುನಾವಣಾ ಫ‌ಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಧರ್ಮ ಮತ್ತು ಜಾತಿ ಆಧಾರದಲ್ಲಿ ಒಡೆದು ಆಳುವ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷಗಳ ನಕಾರಾತ್ಮಕ ರಾಜಕೀಯವನ್ನು ತ್ರಿಪುರ, ಮೇಘಾಲಯ ಹಾಗೂ ನಾಗಾಲ್ಯಾಂಡ್‌ ಜನರು ಸ್ಪಷ್ಟವಾಗಿ ತಿರಸ್ಕರಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಪರ ಆಡಳಿತವನ್ನು ಬೆಂಬಲಿಸಿದ್ದಾರೆ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲೂ ಮತದಾರರು ಇದೇ ರೀತಿಯ ಫ‌ಲಿತಾಂಶಕ್ಕೆ ಕಾರಣೀಭೂತರಾಗಲಿದ್ದಾರೆ ಎಂದು ಭವಿಷ್ಯ ನುಡಿದರು. ಈಶಾನ್ಯ ರಾಜ್ಯಗಳ ಫ‌ಲಿತಾಂಶದ ನಂತರ ಕರ್ನಾಟಕದಲ್ಲಿ ಬಿಜೆಪಿಯು 150ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತ.

ಈ ಫ‌ಲಿತಾಂಶ ರಾಜ್ಯದ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಇನ್ನಷ್ಟು ಹುರುಪಿನಿಂದ ಕಾರ್ಯನಿರ್ವಹಿಸಲು ಪ್ರೇರಣೆಯಾಗಿದೆ. ಭ್ರಷ್ಟ, ಅದಕ್ಷ ಮತ್ತು ಸಂವೇದನಾಶೀಲ ರಹಿತ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಕಿತ್ತೂಗೆಯಲು ದಿನಗಣನೆ ಆರಂಭವಾಗಿದೆ ಎಂದು ಹೇಳಿದರು.

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಗೆ ಬಾರೀ ಯಶಸ್ಸು ದೊರೆಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮರ್ಥ ನಾಯಕತ್ವವೇ ಕಾರಣವಾಗಿದೆ. ಕರ್ನಾಟಕದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರಲು ಈ ಇಬ್ಬರೂ ನಾಯಕರ ಮಾರ್ಗದರ್ಶನ ನಮಗೆ ದೊರೆಯುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದರು.

Advertisement

ರಾಜ್ಯದ ಮೇಲೆ ಪರಿಣಾಮವಿಲ್ಲ: ಪರಮೇಶ್ವರ್‌: ಈಶಾನ್ಯ ರಾಜ್ಯಗಳ ಚುನಾವಣಾ ಫ‌ಲಿತಾಂಶ ಕರ್ನಾಟಕದ ವಿಧಾನಸಭೆ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಕೆಲ ಭಾಗಗಳಲ್ಲಿ ಮಿಶ್ರ ಪ್ರತಿಕ್ರಿಯೆ ಬಂದಿದೆ. ತ್ರಿಪುರಾದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ. ಚುನಾವಣೆಯಲ್ಲಿ ಇದೆಲ್ಲಾ ಸಾಮಾನ್ಯ.

ಇದರಿಂದ ಏನೋ ದೊಡ್ಡ ಸಾಧನೆ ಮಾಡಿದ್ದೇವೆ ಎಂದು ಬಿಜೆಪಿಯವರು ಬೀಗುವ ಅಗತ್ಯವಿಲ್ಲ ಎಂದರು. ಇದೇ ವೇಳೆ, ಬಿಜೆಪಿ ನಾಯಕರು ನಡೆಸುತ್ತಿರುವ ಬೆಂಗಳೂರು ರಕ್ಷಿಸಿ ಯಾತ್ರೆಗೆ ತಿರುಗೇಟು ನೀಡಿರುವ ಅವರು, ಬಿಜೆಪಿಯವರು ಬೇರೆ ರಾಜ್ಯದ ಫೋಟೊಗಳನ್ನು ಬಳಸಿ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿದರೆ, ನಾವೇನು ಕಡ್ಲೆಪುರಿ ತಿನ್ನುತ್ತ ಕೂದುತ್ತೇವಾ?

ಈ ಹಿಂದೆಯೂ ಬೇರೆ ರಾಜ್ಯದ ಫೋಟೊಗಳನ್ನು ಬಳಸಿ ಗುಂಡಿ ಮುಚ್ಚಿಲ್ಲ ಎಂದು ಆರೋಪ ಮಾಡಿದ್ದರು. ನಾವೂ ಅವರ ಸುಳ್ಳಿನ ಬಣ್ಣವನ್ನು ಜನರ ಮುಂದೆ ಬಿಚ್ಚಿಡುತ್ತೇವೆ. ಬೆಂಗಳೂರಿಗೇ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಬಿಜೆಪಿಗೆ ರಾಜ್ಯದಲ್ಲಿ ನಾಯಕರ ಕೊರತೆ ಇದೆ.

ಹೀಗಾಗಿ ಎಲ್ಲ ರಾಷ್ಟ್ರೀಯ ನಾಯಕರು ಆಗಮಿಸುತ್ತಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿಯವರ ಮೂರನೇ ಹಂತದ ಜನಾಶೀರ್ವಾದ ಯಾತ್ರೆ ಮಾ.20, 21, ಹಾಗೂ 24, 25 ರಂದು ಮೈಸೂರು ಭಾಗದಲ್ಲಿ ನಡೆಯಲಿದೆ. ಆದರೆ, ಇನ್ನೂ ಅಧಿಕೃತ ಆಗಿಲ್ಲ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next