Advertisement

ಚುನಾವಣಾ ಆಯೋಗಕ್ಕೆ  ಬಿಜೆಪಿ ಮನವಿ

08:23 AM Mar 11, 2017 | Team Udayavani |

ಬೆಂಗಳೂರು: ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಮೇಲೆ ಬಜೆಟ್‌ ಪ್ರಭಾವ ಬೀರುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡುವಂತೆ ರಾಜ್ಯ ಮುಖ್ಯ
ಚುನಾವಣಾಧಿಕಾರಿಗಳಿಗೆ ಬಿಜೆಪಿ ಮನವಿ ಮಾಡಿದೆ.

Advertisement

ಮಾಜಿ ಸಚಿವ ಹಾಗೂ ರಾಜ್ಯ ಬಿಜೆಪಿ ವಕ್ತಾರ ಸುರೇಶ್‌ ಕುಮಾರ್‌ ನೇತೃತ್ವದಲ್ಲಿ ಶುಕ್ರವಾರ ಮುಖ್ಯ ಚುನಾವಣಾಧಿಕಾರಿಗಳ
ಕಚೇರಿಯ ಜಂಟಿ ಆಯುಕ್ತರನ್ನು ಭೇಟಿ ಮಾಡಿದ ಬಿಜೆಪಿ ಮುಖಂಡರ ನಿಯೋಗ, ಮಾರ್ಚ್‌ 15ರಂದು 2017-18ನೇ ಸಾಲಿನ
ಬಜೆಟ್‌ ಮಂಡನೆಯಾಗಲಿದೆ. ಇದೇ ವೇಳೆ, ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಯೂ ಘೋಷಣೆ ಆಗಿದೆ.
ಈ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿ ಹಾಗೂ ಬಜೆಟ್‌ ಮಂಡನೆ ಸಂಬಂಧ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಮನವಿ
ಸಲ್ಲಿಸಿತು.

ಬಳಿಕ, ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌ ಕುಮಾರ್‌, ಮಾ.15ರಂದು ರಾಜ್ಯದ ಬಜೆಟ್‌ ಮಂಡನೆಯಾಗಲಿದೆ. ಈ ನಡುವೆ
ನಂಜನಗೂಡು ಹಾಗೂ ಗುಂಡ್ಲುಪೇಟೆಗೆ ಉಪ ಚುನಾವಣೆ ಘೋಷಣೆಯಾಗಿದ್ದು, ಈಗ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ, ಸಿಎಂ
ಸಿದ್ದರಾಮಯ್ಯ ಮಂಡಿಸಲಿರುವ ಬಜೆಟ್‌ ಚುನಾವಣಾ ಪ್ರಣಾಳಿಕೆಯಾಗಿರಬಾರದು ಮತ್ತು ಅದು ಉಪಚುನಾವಣೆಗಳ ಮೇಲೆ
ಪ್ರಭಾವ ಬೀರುವಂತದ್ದು ಆಗಬಾರದು. ಜನಪ್ರಿಯ ಯೋಜನೆ ಘೋಷಿಸುವುದು ಕೂಡ ಸರಿಯಲ್ಲ. ಬಜೆಟ್‌ ಮೂಲಕ ಮತದಾರರನ್ನು ಸೆಳೆಯುವ ಕೆಲಸ ಆಗಬಾರದು ಎಂದರು. 

ಆದರೆ, ಬಜೆಟ್‌ ಮುಂದೂಡಬೇಕೆನ್ನುವ ಒತ್ತಾಯ ಮಾಡುತ್ತಿಲ್ಲ. ಮುಕ್ತ ಚುನಾವಣೆಗೆ ಪೂರಕವಾಗಿರಬೇಕು. ಪ್ರಜಾಪ್ರಭುತ್ವ 
ಮೌಲ್ಯಗಳು ಉಳಿಯಬೇಕು. ಅದಕ್ಕಾಗಿ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ, ಮುಖಂಡ ಸುಬ್ಬ ನರಸಿಂಹ ಇದ್ದರು. ಸಾಮಾನ್ಯ ಜ್ಞಾನವಿಲ್ಲ
ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆ ಕ್ಷೇತ್ರಗಳ ಮೇಲೆ ರಾಜ್ಯ ಬಜೆಟ್‌ ಪ್ರಭಾವ ಬೀರದಂತೆ ನೋಡಿಕೊಳ್ಳಬೇಕೆಂದು
ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ  ನಾಯಕರಿಗೆ ಸಾಮಾನ್ಯ ಜ್ಞಾನವಿಲ್ಲ. ಪಂಚ ರಾಜ್ಯಗಳ ಚುನಾವಣೆ ಘೋಷಣೆಯಾದ ಬಳಿಕ ಕೇಂದ್ರ ಸರ್ಕಾರ ಬಜೆಟ್‌ ಮಂಡನೆಯಾಗಲಿಲ್ಲವೇ? ಆಗ ಇವರಿಗೆ ನೀತಿ ಸಂಹಿತೆಯ ವಿಷಯ ತಿಳಿದಿರಲಿಲ್ಲವೇ? 

ಸಿದ್ದರಾಮಯ್ಯ ಮುಖ್ಯಮಂತ್ರಿ 

Advertisement
Advertisement

Udayavani is now on Telegram. Click here to join our channel and stay updated with the latest news.

Next