ಬೆಂಗಳೂರು: ಪಕ್ಷದಲ್ಲಿ ಈಗಾಗಲೇ ಬೇರೊಂದು ಹುದ್ದೆಯಲ್ಲಿರುವ ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಬದಲಾಯಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹಾಲಿ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳ ಪಟ್ಟಿಯಲ್ಲಿ ಸ್ಥಾನ ಪಡೆದವರನ್ನು ಬದಲಾಯಿಸಿ ಬೇರೆಯವರಿಗೆ ಜಿಲ್ಲಾಧ್ಯಕ್ಷರ ಸ್ಥಾನ ನೀಡಲು ಪಕ್ಷದ ನಾಯಕರು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
ಬಳ್ಳಾರಿ ನಗರ ಜಿಲ್ಲಾಧ್ಯಕ್ಷ ಆಂಜನೇಯಲು ಬಳ್ಳಾರಿ ನಗರಾಭಿವೃದಿಟಛಿ ಪ್ರಾಧಿಕಾರದ ಅಧ್ಯಕ್ಷರಾಗಿರುವುದರಿಂದ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಕೈ ಬಿಡಲು ನಿರ್ಧರಿಸಲಾಗಿದೆ. ಬಳ್ಳಾರಿ ಗ್ರಾಮೀಣ ಜಿಲ್ಲಾಧ್ಯಕ್ಷ ಶಿವಯೋಗಿ ಅವರ ಬಗ್ಗೆ ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಮುಖಂಡರು ದೂರು ನೀಡಿರುವ ಹಿನ್ನೆಲೆಯಲ್ಲಿ ಅವರನ್ನೂ ಬದಲಾಯಿಸಲು ತೀರ್ಮಾನಿಸಿದೆ ಎನ್ನಲಾಗಿದೆ.
ಹಾಸನ ಜಿಲ್ಲಾಧ್ಯಕ್ಷ ಬಿ. ಶಿವರಾಮ್ ಕೆಪಿಸಿಸಿ ಉಪಾಧ್ಯಕ್ಷರಾಗಿದ್ದಾರೆ, ಮಂಡ್ಯ ಜಿಲ್ಲಾಧ್ಯಕ್ಷ ಆತ್ಮಾನಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ, ವಿಜಯಪುರ ಜಿಲ್ಲಾಧ್ಯಕ್ಷ ರವಿಗೌಡ ಕೆಪಿಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ ಹೀಗಾಗಿ ಅವರನ್ನು ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸಲು ಪಕ್ಷ ಚಿಂತಿಸಿದೆ ಎಂದು ತಿಳಿದು ಬಂದಿದೆ.
ಬೆಂಗಳೂರಿನಲ್ಲಿ ಹಾಲಿ ಇರುವ ನಗರ ಜಿಲ್ಲಾಧ್ಯಕ್ಷ ಎಸ್.ಟಿ. ಸೋಮಶೇಖರ್ ಶಾಸಕರಾಗಿರುವುದರಿಂದ ಅವರನ್ನೂ, ಮಹಾನಗರ ಜಿಲ್ಲಾಧ್ಯಕ್ಷ ಶೇಖರ್ ಅವರನ್ನೂ ಬದಲಾಯಿಸಬೇಕೆಂಬ ಒತ್ತಡವಿದೆ ಎನ್ನಲಾಗುತ್ತಿದೆ. ಈಗಿರುವ ಬೆಂಗಳೂರು ನಗರ,ಮಹಾನಗರ ಅಧ್ಯಕ್ಷರ ಬದಲಾಗಿ, ಲೋಕಸಭೆ ಕ್ಷೇತ್ರವಾರು ಮೂವರು ಅಧ್ಯಕ್ಷರನ್ನು ನೇಮಿಸಲು ಕೆಪಿಸಿಸಿ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಹಾಗಾದರೆ, ಬೆಂಗಳೂರು ದಕ್ಷಿಣ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ಲೋಕಸಭೆಗೊಬ್ಬ ಜಿಲ್ಲಾಧ್ಯಕ್ಷರ ನೇಮಕವಾಗಲಿದೆ. ಕೆಪಿಸಿಸಿ ಮೂಲಗಳ ಪ್ರಕಾರ ಮೂರು ಸ್ಥಾನಗಳನ್ನು ಒಕ್ಕಲಿಗ, ಅಲ್ಪ ಸಂಖ್ಯಾತರಿಗೆ ನೀಡುವ ಸಾಧ್ಯತೆ ಇದೆ. ಈ ಕುರಿತು ವಾರದಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.