ಚಿತ್ರದುರ್ಗ: ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿ ಪರಶುರಾಂಪುರದಲ್ಲಿ ಬೃಹತ್ ಮೆರವಣಿಗೆ, ಕಾರ್ಯಕ್ರಮ ಮಾಡಿದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಬಿ.ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ರಾತ್ರಿ ದಿಢೀರ್ ಪ್ರತಿಭಟನೆ ನಡೆಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಡಾ.ಯೊಗೀಶ್ ಬಾಬು ನೇತೃತ್ವದಲ್ಲಿ ಪ್ರತಿಭಟಿಸಿದ ಸುಮಾರು ಹತ್ತು ಜನ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಪ್ರತಿಭಟನಾಕಾರರು ಮೊದಲು ಸಚಿವ ಶ್ರೀರಾಮುಲು ಹಾಗೂ ಸಂಸದ ನಾರಾಯಣಸ್ವಾಮಿ ಅವರನ್ನು ಬಂಧಿಸಿ ನಂತರ ನಮ್ಮನ್ನು ಬಂಧಿಸಿ. ಅವರೂ ನಿಯಮ ಉಲ್ಲಂಘನೆ ಮಾಡಿದ್ದಾರೆ. ಅವರಿಗೊಂದು ನ್ಯಾಯ ನಮಗೊಂದು ನ್ಯಾಯ ಯಾಕೆ ಎಂದು ಜಟಾಪಟಿ ನಡೆಸಿದರು.
ಕಾಂಗ್ರೆಸ್ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ನೀಡದ ಸರ್ಕಾರ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನೂರಾರು ಜನರನ್ನು ಸೇರಿಸಿದ್ದು ಯಾಕೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಕ್ಷಣ ಶ್ರೀರಾಮುಲು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹ ಮಾಡಿದರು.
ಪ್ರತಿಭಟನೆಯಲ್ಲಿ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.