ರಾಯಚೂರು: ಅಧಿಕಾರಕ್ಕೆ ಬಂದಾಗಿನಿಂದ ರೈತರು, ಬಡವರು, ಕಾರ್ಮಿಕರ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಬಿಜೆಪಿ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ ಮುಖಂಡರು, ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ರೈತ ವಿರೋಧಿ ಭೂ ಸುಧಾರಣಾ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯ ಬೇಕು ಹಾಗೂ ಕೋವಿಡ್ ಚಿಕಿತ್ಸೆ ನೆಪದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಉತ್ಛ ನ್ಯಾಯಾಲಯದಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಕೇಂದ್ರ ಸರ್ಕಾರಕ್ಕೆ ಬಡವರ ಹಿತ ಬೇಕಿಲ್ಲ. ರೈತರಿಗೆ, ಕಾರ್ಮಿಕರಿಗೆ, ಬಡ ಜನರಿಗೆ ತೊಂದರೆಯಾಗುವಂಥ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ತರಾತುರಿಯಲ್ಲಿ ಜಾರಿಗೊಳಿಸುತ್ತಿದೆ. ದೇಶಾದ್ಯಂತ ಕೋವಿಡ್ ವಿರುದ್ಧ ಜನ ನಾನಾ ಸಂಕಷ್ಟ ಎದುರಿಸುತ್ತಿದ್ದರೆ ರಾಜ್ಯ ಸರ್ಕಾರ ಚಿಕಿತ್ಸಾ ಸಾಮಗ್ರಿ ಖರೀದಿಯಲ್ಲೂ ಅಕ್ರಮ ಎಸಗಿದೆ ಎಂದು ದೂರಿದರು.
ಸುಗ್ರೀವಾಜ್ಞೆ ಮೂಲಕ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಕಾಂಗ್ರೆಸ್ ಸರ್ಕಾರ ಹಿಂದೆ ಊಳುವವನೇ ಭೂ ಒಡೆಯ ಕಾಯ್ದೆ ಜಾರಿಗೆ ತಂದರೆ ಈಗಿನ ಬಿಜೆಪಿ ಸರ್ಕಾರ ಉಳ್ಳವನೇ ಭೂ ಒಡೆಯ ಎಂಬ ನೀತಿ ಅನುಸರಿಸುತ್ತಿದೆ. 300ಕ್ಕಿಂತ ಹೆಚ್ಚು ಕಾರ್ಮಿಕರನ್ನು ಹೊಂದಿರುವ ಕೈಗಾರಿಕೆ ನಿಲ್ಲಿಸುವ ಮೊದಲು ಸರ್ಕಾರದ ಪರವಾನಗಿ ಪಡೆಯಬೇಕಿತ್ತು. ಆದರೆ, ತಿದ್ದುಪಡಿ ಕಾಯ್ದೆ ಮೂಲಕ ಈ ಸಂಖ್ಯೆಯನ್ನು 100ಕ್ಕೆ ಇಳಿಸಿದೆ. ಇದರಿಂದ ಕಾರ್ಮಿಕರ ಬದುಕು ಅತಂತ್ರವಾಗಿದೆ ಎಂದರು.
ಅತಿವೃಷ್ಟಿಯಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಅಪಾರ ಹಾನಿಯಾಗಿದೆ. ಆದರೆ, ಅದರ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕಳೆದ ವರ್ಷ ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಸಮರ್ಪಕ ಪರಿಹಾರ ನೀಡಿಲ್ಲ. ಪರಿಹಾರ ಕೇವಲ ಭರವಸೆಯಾಗಿಯೇ ಉಳಿದಿದೆ. ಕಳೆದ ವರ್ಷ ಘೋಷಿಸಿದ ಪರಿಹಾರದ ಮೊತ್ತ, ಎಷ್ಟು ಜನರಿಗೆ ನೀಡಲಾಗಿದೆ, ಹಾನಿಯಾದ ಮನೆಗಳ ದುರಸ್ತಿ, ನೂತನ ಮನೆ ನಿರ್ಮಾಣ, ರೈತರಿಗೆ ನೀಡಿದ ಪರಿಹಾರ ಮತ್ತಿತರೆ ವಿವರಗಳ ಲೆಕ್ಕ ನೀಡುವಂತೆ ಆಗ್ರಹಿಸಿದರು.
ಜಿಲ್ಲಾಧ್ಯಕ್ಷ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ್, ಮುಖಂಡರಾದ ಎ.ವಸಂತಕುಮಾರ, ಎನ್.ಎಸ್ .ಬೋಸರಾಜು, ಜಿ.ಬಸವರಾಜರೆಡ್ಡಿ, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ಸಾಜಿದ್ ಸಮೀರ್, ನಿರ್ಮಲಾ ಬೆಣ್ಣಿ ಸೇರಿದಂತೆ ಅನೇಕರಿದ್ದರು.