ನವದೆಹಲಿ: ಪ್ರಜಾಪ್ರಭುತ್ವದ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಪ್ರತಿಭಟಿಸುತ್ತಿಲ್ಲ, ಆದರೆ ರಾಹುಲ್ ಗಾಂಧಿಯ 2,000 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ರಕ್ಷಿಸಲು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿರುವುದಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೋಮವಾರ (ಜೂನ್ 13) ಆರೋಪಿಸಿದ್ದಾರೆ.
ಇದನ್ನೂ ಓದಿ:ಬಿಸಿಸಿಐ ಗೆ ಭಾರೀ ಲಾಭ: 43,255 ಕೋಟಿ ರೂ ಗೆ ಬಿಕರಿಯಾದ ಐಪಿಎಲ್ ಪ್ರಸಾರ ಹಕ್ಕು!
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ರಾಹುಲ್ ಗಾಂಧಿ ಇಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವ ಮುನ್ನ ದೇಶಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಭಾರೀ ಪ್ರಮಾಣದಲ್ಲಿ ಜಮಾಯಿಸುವ ಮೂಲಕ ಪ್ರತಿಭಟನೆ ನಡೆಸಿದ್ದಾರೆ.
ತನಿಖಾ ಸಂಸ್ಥೆಯ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದೆ. ತಮ್ಮ ಮುಖವಾಡ ಬಯಲಾಗಲಿದೆ ಎಂಬ ಭಯದಿಂದ ಕಾಂಗ್ರೆಸ್ ಈ ರೀತಿ ನಡೆದುಕೊಳ್ಳುತ್ತಿದೆ. ಆದರೆ ದೇಶದಲ್ಲಿ ಕಾನೂನಿಗಿಂತ ಯಾರೂ ದೊಡ್ಡವರಲ್ಲ, ರಾಹುಲ್ ಗಾಂಧಿಯೂ ಹೊರತಾಗಿಲ್ಲ ಎಂದು ಸ್ಮೃತಿ ಇರಾನಿ ವಾಗ್ದಾಳಿ ನಡೆಸಿರುವುದಾಗಿ ವರದಿ ಹೇಳಿದೆ.
1930ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಕಂಪನಿಯನ್ನು ಸ್ಥಾಪಿಸಲಾಗಿದ್ದು, ಇದರ ಉದ್ದೇಶ ದಿನಪತ್ರಿಕೆಯನ್ನು ಪ್ರಕಟಿಸುವುದಾಗಿತ್ತು. ಎಜೆಲ್ ನಲ್ಲಿ 5,000 ಮಂದಿ ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದರು. ಆದರೆ ಇದೀಗ ಎಜೆಎಲ್ ಗಾಂಧಿ ಕುಟುಂಬದ ನಿಯಂತ್ರಣದಲ್ಲಿದೆ ಎಂದು ಇರಾನಿ ಜಾರಿ ನಿರ್ದೇಶನಾಲಯದ ಪ್ರಕರಣದ ಬಗ್ಗೆ ವಿವರಣೆ ನೀಡಿದ್ದಾರೆ.
ಕಂಪನಿಯ ಮಾಲೀಕತ್ವವನ್ನು ಕೇವಲ ಒಂದು ಕುಟುಂಬಕ್ಕೆ ವರ್ಗಾಯಿಸಲಾಗಿದೆ. ಈ ಸಂಸ್ಥೆ ಪತ್ರಿಕೆಯನ್ನು ಪ್ರಕಟಿಸುತ್ತಿಲ್ಲ, ಆದರೆ ಇದೊಂದು ರಿಯಲ್ ಎಸ್ಟೇಟ್ ಉದ್ಯಮದ ಸಂಸ್ಥೆಯಾಗಲಿದೆ ಎಂದು ಇರಾನಿ ದೂರಿದ್ದಾರೆ.