ಚಿಂಚೋಳಿ: ದೇಶದಲ್ಲಿ ನಿರಂತರವಾಗಿ ಇಂಧನ ದರ ಹೆಚ್ಚಾಗುತ್ತಿದ್ದು, ಅದನ್ನು ನಿಯಂತ್ರಿಸುವಲ್ಲಿ ಕೇಂದ್ರ ಬಿಜೆಪಿ ಸರಕಾರ ವಿಫಲವಾಗಿದೆ ಎಂದು ಅರೋಪಿಸಿ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಸೈಕಲ್ ಯಾತ್ರೆ ಮೂಲಕ ಪ್ರತಿಭಟನೆ ನಡೆಸಿದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಜಮಾದಾರ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಸುಭಾಶ ರಾಠೊಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಮುಖಂಡ ಸುಭಾಶ ರಾಠೊಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ.
ಇದರಿಂದಾಗಿ ಜನಸಾಮಾನ್ಯರ ಬದುಕು ದುಬಾರಿಯಾಗಿದೆ. ದೇಶ ಮತ್ತು ರಾಜ್ಯದಲ್ಲಿ ಕೋವಿಡ್ ವೈರಸ್ ಹಾವಳಿ ಹೆಚ್ಚಾಗಿದೆ. ಅದನ್ನು ನಿಯಂತ್ರಿಸುವ ಭರಾಟೆಯಲ್ಲಿ ಪ್ರಧಾನಿ ಏಕಾಏಕಿ ಲಾಕ್‌ಡೌನ್ ಮಾಡಿದ್ದಾರೆ. ಇದರಿಂದಾಗಿ ವ್ಯಾಪಾರಸ್ಥರು, ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಇಂತಹ ಸಮಯದಲ್ಲಿಯೇ ಇಂಧನ ಬೆಲೆಯೂ ಗಗನಕ್ಕೇರುತ್ತಿದ್ದು, ಜನರ ಜೀವನ ಬದುಕು ತುಂಬಾ ಭಾರವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದ್ದರೂ ಕೇಂದ್ರ ಸರಕಾರ ಅಬಕಾರಿ ಸುಂಕ ಹೆಚ್ಚಿಸಿ ಕೋವಿಡ್ ಸಮಯದಲ್ಲಿ ಮತ್ತಷ್ಟು ಹೊರೆಯಾಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಜಿಪಂ ಸದಸ್ಯ ಗೌತಮ್ ಪಾಟೀಲ ಮಾತನಾಡಿ, ದೇಶದ ಜನ ಸಾಮಾನ್ಯರು ಎದುರಿಸುತ್ತಿರುವ ದುಬಾರಿ ತೈಲ ದರಗಳನ್ನು ಇಳಿಕೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಅಗತ್ಯ ಕ್ರಮ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಸವರಾಜ ಮಲಿ, ಸೈಯದ ಮಹೆಮೂದ ಪಟೇಲ ಸಾಸರಗಾಂವ, ಪ್ರವೀಣಕುಮಾರ ಟಿಟಿ.ಕೆ.ಎಂ. ಬಾರಿ, ಅಬ್ದುಲ್ ಬಾಸೀತ, ಗೋಪಾಲರಾವ್ ಕಟ್ಟಿಮನಿ, ರಾಮಶೆಟ್ಟಿ ಪವಾರ, ಅಮರ ಲೊಡನೋರ, ಸಂತೋಷ ಗುತ್ತೇದಾರ, ಚಿತ್ರಶೇಖರ ಪಾಟೀಲ, ಶಿವಕುಮಾರ ಕೊಳ್ಳುರ ಮಾತನಾಡಿದರು.
ಪುರಸಭೆ ಸದಸ್ಯರಾದ ಶಬ್ಬೀರ ಅಹಮೆದ, ಶಿವನಾಗಯ್ಯ ಸ್ವಾಮಿ, ಆರ್.ಗಣಪತರಾವ್, ಜಗನ್ನಾಥ ಕಟ್ಟಿ, ವಿಜಯಕುಮಾರ ಘಾಟಗೆ, ನಾಗೇಶ ಗುಣಾಜಿ, ಉಲ್ಲಾಸಕುಮಾರ, ಬಸವರಾಜ ಕಡಬೂರ, ಮಹ್ಮದ ಹಾದಿ, ನರಸಪ್ಪ ಕಿವಣೋರ ಇನ್ನಿತರರು ಭಾಗವಹಿಸಿದ್ದರು. ಶಿರಸ್ತೇದಾರ್ ವೆಂಕಟೇಶ ದುಗ್ಗನ್ ಅವರಿಗೆ ಮನವಿ ಸಲ್ಲಿಸಿದರು.