Advertisement

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

03:38 PM Apr 28, 2024 | Team Udayavani |

ಬೆಂಗಳೂರು: ಕೇಂದ್ರ ಸರಕಾರ ಬರ ಪರಿಹಾರ ನೀಡಿಕೆಯಲ್ಲಿ ಅನ್ಯಾಯದ ಎಸಗಿದೆ ಎಂದು ವಿಧಾನಸೌಧ ಆವರಣದ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರು ಭಾನುವಾರ ಪ್ರತಿಭಟನೆ ನಡೆಸಿ ಆಕ್ರೋಶ ಹೊರ ಹಾಕಿದರು.

Advertisement

ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣ್ ದೀಪ್ ಸಿಂಗ್ ಸುರ್ಜೆವಾಲಾ ಸೇರಿ ಪ್ರಮುಖ ಸಚಿವರು ಕಾಂಗ್ರೆಸ್ ಶಾಸಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಆಕ್ರೋಶ ಹೊರ ಹಾಕಿದ ಸಿಎಂ ಸಿದ್ದರಾಮಯ್ಯ ‘ಕೇಂದ್ರ ಸರ್ಕಾರದ ಬಳಿ ನಾವು 18,172 ಕೋಟಿ ರೂ. ಬರ ಪರಿಹಾರ ಕೇಳಿದರೆ ಅವರು 3,400 ಕೋಟಿ ರೂ. ಮಾತ್ರ ಕೊಟ್ಟಿದ್ದಾರೆ. ಇನ್ನು 14,718 ಕೋಟಿ ರೂ. ಕೊಟ್ಟಿಲ್ಲ.ಆದರೆ ರಾಜ್ಯಕ್ಕೆ ಬಂದ ಬಿಜೆಪಿ ನಾಯಕರು ಸುಳ್ಳು ಹೇಳಿದರು.ಜೊತೆಗೆ ನಮಗೆ ಕೊಡಬೇಕಾದ ಬರ ಪರಿಹಾರ ಕೊಡದೇ ರಾಜ್ಯಕ್ಕೆ ತಾರತಮ್ಯ ಎಸಗಿದರು, ದ್ವೇಷದ ರಾಜಕಾರಣ ಮಾಡಿದರು, ಅನ್ನದಾತರಿಗೆ ಅನ್ಯಾಯ ಮಾಡಿದರು ಎಂದರು.

ಡಿ.ಕೆ.ಶಿವಕುಮಾರ್ ಮಾತನಾಡಿ, ‘ಬರಗಾಲದಿಂದ ಸಂಕಷ್ಟದಲ್ಲಿರುವ ರೈತರು, ಕಾರ್ಮಿಕರು, ಕೂಲಿ ಕೆಲಸಗಾರರಿಗಾಗಿ ನಾವು ಕೇಳುತ್ತಿದ್ದೇವೆ. ರಾಜ್ಯ ಸರ್ಕಾರದಿಂದ ನಾವು ಎಷ್ಟು ಸಾಧ್ಯವೋ ಅಷ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸಿದ್ದೇವೆ. ಆದರೆ ಕೇಂದ್ರ ಸರ್ಕಾರ 7 ತಿಂಗಳು ಕಳೆದ ಬಳಿಕ ಕೇವಲ 3,454 ಕೋಟಿ ಮಾತ್ರ ಬಿಡುಗಡೆ ಮಾಡಿದೆ.ಬರ ಪರಿಹಾರಕ್ಕಾಗಿ ಆಗ್ರಹಿಸಿ ನಮ್ಮ ಹೋರಾಟ ನ್ಯಾಯಾಲಯದಲ್ಲಿ ಹಾಗೂ ಜನರ ನಡುವೆಯೂ ಮುಂದುವರೆಯಲಿದೆ’ ಎಂದರು.

ಸುರ್ಜೆವಾಲಾ ಅವರು ಮಾತನಾಡಿ ‘ಕರ್ನಾಟಕಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ಜನರಿಗೆ ಖಾಲಿ ಚೊಂಬು ತಂದಿದ್ದಾರೆ.ಕರ್ನಾಟಕ ಕೇಳಿದ್ದ 18,172 ಕೋಟಿ ರೂ. ಬರ ಪರಿಹಾರ ನೀಡಲು ಕೇಂದ್ರ ಸರ್ಕಾರ ಸೆಪ್ರೆಂಬರ್ 2023 ರಿಂದಲೂ ನಿರಾಕರಿಸುತ್ತಲೇ ಬಂದಿದೆ.ಸುಪ್ರೀಂ ಕೋರ್ಟ್ ಹೇಳಿದ ಬಳಿಕವೂ ಇವರು ರಾಜ್ಯದ ರೈತರ ಕೈಗೆ ಕೊಟ್ಟಿದ್ದು ಲಾಲಿಪಾಪ್ ಅಷ್ಟೇ!. ನಾವೇನು ಭಿಕ್ಷೆ ಕೇಳುತ್ತಿಲ್ಲ, ಬರ ಪರಿಹಾರ ರೈತರ ಹಕ್ಕು’ ಎಂದರು.

Advertisement

ಸುಪ್ರೀಂ ಕೋರ್ಟ್ ಉಗಿದಿದ್ದನ್ನೂ ಸಾಧನೆ ಎನ್ನುವಂತೆ ಹೇಳಿಕೊಳ್ಳುವ ನಿರ್ಲಜ್ಜತನ ಬಿಜೆಪಿಗೆ ಗೆ ಮಾತ್ರ ಇರುವುದು.ಹಿಂದೆ ಬರ ಪರಿಹಾರದ ಕುರಿತಾದ ಪ್ರಶ್ನೆಗೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು “ಕೊಡುವುದೆಲ್ಲ ಕೊಟ್ಟಾಗಿದೆ, ಯಾವುದೇ ಬಾಕಿ ಇಲ್ಲ“ ಎಂದು ಉತ್ತರಿಸಿದ್ದರು. ನಮ್ಮ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತದಿದ್ದರೆ, ಸುಪ್ರೀಂ ಕೋರ್ಟ್ ನಿರ್ದೇಶನ ನೀಡದೆ ಇದ್ದರೆ ಕೇಂದ್ರ ಸರ್ಕಾರ ನಯಾಪೈಸೆ ಹಣ ನೀಡದೆ ವಂಚಿಸುತ್ತಿತ್ತು,ಈಗಲೂ ಕಾಲು ಬಾಗಕ್ಕಿಂತ ಕಡಿಮೆ ಹಣ ನೀಡಿ ವಂಚಿಸಿದೆ.ಮಾಡಿದ ವಂಚನೆಯನ್ನೂ ಸಾಧನೆ ಎಂದು ಹೇಳಿಕೊಳ್ಳುವ ಬಂಡತನ ಬಿಜೆಪಿಗೆ ಮಾತ್ರ ಸಾಧ್ಯವಾಗುತ್ತದೆ! ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ನಂತರ ಯಾವುದೇ ಸರ್ಕಾರ ಯಾವುದೇ ಘೋಷಣೆ ಮಾಡುವಂತಿಲ್ಲ, ಹೀಗಿದ್ದೂ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ, ಚುನಾವಣಾ ಆಯೋಗದ ಅನುಮತಿಯಂತೆ ಬರ ಪರಿಹಾರ ಘೋಷಣೆಯಾಗಿದೆ. ನೀತಿ ಸಂಹಿತೆ ಜಾರಿಯಾದ ನಂತರ ನಡೆದ ಸರ್ಕಾರದ ಬೆಳವಣಿಗೆಯನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ,
ಹೀಗಿದ್ದೂ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವ ಬಿಜೆಪಿ ವಿರುದ್ಧ ಚುನಾವಣ ಆಯೋಗ ಕಠಿಣ ಕ್ರಮ ಜರುಗಿಸಬೇಕು, ಬರ ಪರಿಹಾರದ ಬಗ್ಗೆ ಬಿಜೆಪಿ ಹೇಳಿಕೆ ನೀಡುವುದನ್ನು ನಿರ್ಬಂಧಿಸಬೇಕು” ಎಂದು ಕಾಂಗ್ರೆಸ್ ಎಕ್ಸ್ ಪೋಸ್ಟ್ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next