ನವದೆಹಲಿ : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸೋಮವಾರ ದೆಹಲಿಯಲ್ಲಿ ನಡೆದ ರಾಜ್ಯ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಕೆಲವು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದ್ದು, ಚುನಾವಣಾ ರಣತಂತ್ರಗಳನ್ನು ಸಿದ್ಧಮಾಡಿಕೊಳ್ಳಲಾಗಿದೆ.
ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್ 75 ದಿನಗಳ ರೋಡ್ ಮ್ಯಾಪ್ ಸಿದ್ಧಪಡಿಸಿರುವ ಬಗ್ಗೆ ಘೋಷಿಸಿದ್ದು, ನಾಲ್ಕು ಬೃಹತ್ ಸಮಾವೇಶ ಮತ್ತು 52 ದಿನಗಳ ಕಾಲ ಬಸ್ ಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ಡಿಸೆಂಬರ್ 30 ರಂದು ಬಿಜಾಪುರ, ಜ 3ರಂದು ಹುಬ್ಬಳ್ಳಿ, ಜ.8ರಂದು ಚಿತ್ರದುರ್ಗದಲ್ಲಿ ಸಮಾವೇಶ. ಫೆಬ್ರವರಿ ಯಲ್ಲಿ ಹಿಂದುಳಿದ ವರ್ಗಗಳ ಸಮಾವೇಶ ಮತ್ತು ಜನವರಿ ಎರಡನೇ ವಾರದ ಬಳಿಕ ಜಂಟಿ ಬಸ್ ಯಾತ್ರೆ ನಡೆಸುವುದಾಗಿ ಘೋಷಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದ 40 ಪರ್ಸೆಂಟ್ ಕಮಿಷನ್ ಭ್ರಷ್ಟಾಚಾರದ ವಿಚಾರ ರಾಜ್ಯದ ಪ್ರತಿ ಮನೆ ಮನೆಗೆ ತೆಗೆದುಕೊಂಡು ಹೋಗುತ್ತೇವೆ. ರಾಜ್ಯದ 224 ಕ್ಷೇತ್ರಗಳಲ್ಲಿ ಯಾತ್ರೆ ಸಂಚರಿಸಲಿದೆ ಎಂದು ಸರ್ಜೇವಾಲ ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹರಿಪ್ರಸಾದ್, ಎಂ ಬಿ.ಪಾಟೀಲ್,ಡಾ.ಜಿ.ಪರಮೇಶ್ವರ್ , ಮುನಿಯಪ್ಪ ಎಚ್.ಕೆ.ಪಾಟೀಲ್ ಸಹಿತ ಎಲ್ಲ ಹಿರಿಯ ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮುಂದಿನ ಸಿಎಂ ವಿಚಾರ ಯಾರೂ ಪ್ರಸ್ತಾಪ ಮಾಡಬಾರದು ಎಂದು ತಾಕೀತು ಮಾಡಲಾಗಿದೆ. ಏನೇ ಸಮಸ್ಯೆ ಎದುರಾದರೂ ಹಿರಿಯ ನಾಯಕರ ಸಭೆಯಲ್ಲಿ ಇತ್ಯರ್ಥಕ್ಕೆ ಸೂಚನೆ ನೀಡಲಾಗಿದೆ. ಆಯಾ ಸಂದರ್ಭಕ್ಕೆ ತಕ್ಕಂತೆ ಕಾರ್ಯತಂತ್ರ ರೂಪಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ.