ಇಂಡಿ: ಕಳೆದ ಹಲವು ದಿನಗಳಿಂದ ದೇಶದಲ್ಲಿ ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆಯಾಗುತ್ತಿರುವುದನ್ನು ಖಂಡಿಸಿ ಶಾಸಕ ಯಶವಂತ್ರಾಯಗೌಡ ಪಾಟೀಲ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಶಹಾ ಪೆಟ್ರೋಲ್ ಬಂಕ್ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಶಾಸಕ ಯಶವಂತ್ರಾಯಗೌಡ ಪಾಟೀಲ ಮಾತನಾಡಿ, ಕೊರೊನಾ ಸಂಕಷ್ಟದಲ್ಲಿ ಕೇಂದ್ರ ಸರ್ಕಾರ ನಿರಂತರ ಪೆಟ್ರೋಲ್-ಡೀಸೆಲ್ ಬೆಲೆ ಏರಿಸುತ್ತಿರುವುದು ಬಡ ಮತ್ತು ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಹಿಂದೆ ಕಾಂಗ್ರೆಸ್‌ನ ಮನಮೋಹನ ಸಿಂಗ್‌ರವರ 10 ವರ್ಷದ ಆಡಳಿತದಲ್ಲಿ ಅಂತಾರಾಷ್ಟ್ರೀಯ ಮಟ್ಟದ ತೈಲ ಬೆಲೆ ಗಗನಕ್ಕೇರಿತ್ತು. ಒಂದು ಬ್ಯಾರೆಲ್ ಆಯಿಲ್‌ಗೆ 110 ಡಾಲರ್ ಇತ್ತು. ಆದರೂ ಪೆಟ್ರೋಲ್ ಬೆಲೆ ಏರಿಸಲಿಲ್ಲ. ಬೆಲೆ ನಿಯಂತ್ರಣದಲ್ಲಿತ್ತು.
ಈಗ ಅಂತಾರಾಷ್ಟ್ರೀಯ ತೈಲ ಬೆಲೆ ಒಂದು ಬ್ಯಾರೆಲ್‌ಗೆ 40 ಡಾಲರ್ ಇಳಿಕೆಯಾಗಿದ್ದರೂ ತೈಲದ ಮೇಲೆ ಹೆಚ್ಚು ತೆರಿಗೆ ವಿ ಧಿಸುತ್ತಿರುವ ದೇಶ ಭಾರತ. ಪ್ರತಿ ಲೀಟರ್ ಪೆಟ್ರೋಲ್ ದರ 35 ರೂ. ಮಾತ್ರ ಇದ್ದು ಕೇಂದ್ರದ ತೆರಿಗೆ, ರಾಜ್ಯ ಡೀಲರ್ ಕಮಿಷನ್ ಸೆಸ್ ಸೇರಿ 100 ರೂ. ಆಗುತ್ತಿದೆ ಎಂದು ಆರೋಪಿಸಿದರು.
ದೇಶದಲ್ಲಿ ಎಲ್ಲ ವಲಯದ ಮೇಲೆ ಬೆಲೆ ಏರಿಕೆ ಗಂಭೀರ ಪರಿಣಾಮ ಬೀರಿದೆ. ಸದ್ಯಕ್ಕೆ ಪೆಟ್ರೋಲ್ ಬೆಲೆ 98 ರೂ. ಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ 90 ರೂ. ದಾಟಿದೆ. ಅಡುಗೆ ಅನಿಲದ ಬೆಲೆ ಸಿಲಿಂಡರ್‌ಗೆ 860 ರೂ. ಆಗಿದ್ದು ಜನ ಸಾಮಾನ್ಯರಿಗೆ ದೊಡ್ಡ ತಲೆನೋವಾಗಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆ ವಿರುದ್ಧ ಪ್ರತಿ ಹಳ್ಳಿಗಳಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು. ವಿಜಯಪುರ-ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಸಂಭಾಜಿರಾವ್ ಮಿಸಾಳೆ ಮಾತನಾಡಿ, ಇಂಧನ ಬೆಲೆ ಏರಿಸುವ ಮೂಲಕ ಕೇಂದ್ರ ಸರ್ಕಾರ ಜನರ ಜೇಬಿಗೆ ಕನ್ನ ಹಾಕುತ್ತಿದೆ.
ದರ ಏರಿಕೆಯಿಂದ ಕೇವಲ ವಾಹನ ಹೊಂದಿದವರಿಗೆ ಮಾತ್ರವಲ್ಲ. ರೈತರಿಗೂ ತೊಂದರೆಯಾಗುತ್ತಿದೆ ಎಂದರು. ಕಾಂಗ್ರೆಸ್ ಯುವ ಧುರೀಣ ಪ್ರಶಾಂತ ಕಾಳೆ, ತಾಪಂ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಲಿಯಾಸ ಬೋರಾಮಣಿ, ಜಾವೀದ ಮೋಮಿನ್, ಅವಿನಾಶ ಬಗಲಿ ಇತರರು ಮಾತನಾಡಿ, ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆಯಾಗುತ್ತಿದ್ದು 100ರ ಗಡಿ ದಾಟುತ್ತಿದೆ. ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರ ಬದುಕು ಸಂಕಷ್ಟಕ್ಕೆ ಸಿಲುಕುತ್ತಿದ್ದು, ಜನ ಸಾಮಾನ್ಯರ ಮೇಲಿನ ಹೊರೆ ಇಳಿಸುವಂತೆ ಆಗ್ರಹಿಸಿದರು. ಪುರಸಭೆ ಸದಸ್ಯ ಲಿಂಬಾಜಿ ರಾಠೊಡ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ತಾಪಂ ಮಾಜಿ ಅಧ್ಯಕ್ಷ ಅಣ್ಣಪ್ಪ ಬಿದರಕೋಟಿ, ಮುತ್ತಪ್ಪ ಪೋತೆ, ಮಲ್ಲು ಪಾಟೀಲ ಸಾಲೋಟಗಿ, ಸಿದರಾಯ ಐರೋಡಗಿ ಮಾತನಾಡಿದರು. ಈ ವೇಳೆ ಶಾಂತು ಹದಗಲ್, ಶಿವಕುಮಾರ ಬಿಸನಾಳ, ಸಿದ್ದು ಬೇಲ್ಯಾಳ, ಜೀತಪ್ಪ ಕಲ್ಯಾಣಿ, ಅಶೋಕ ಕರೂರ, ಇಸ್ಮಾಯಿಲ್ ಅರಬ್, ರಶೀದ ಅರಬ, ಶ್ರೀಶೈಲ ಪೂಜಾರಿ, ಸತೀಶ ಕುಂಬಾರ, ಅಯೂಬ ಬಾಗವಾನ, ಸತ್ತಾರ ಬಾಗವಾನ, ಭೀಮಾಶಂಕರ ಮೂರಮನ ಇತರರು ಇದ್ದರು.