Advertisement

ಚುನಾವಣೆಯೇ ಕುರುಕ್ಷೇತ್ರ

06:00 AM Mar 20, 2018 | |

ನವದೆಹಲಿ: ಮುಂದಿನ ಲೋಕಸಭೆ ಚುನಾವಣೆ ಕುರುಕ್ಷೇತ್ರದಲ್ಲಿನ ಪಾಂಡವರು ಮತ್ತು ಕೌರವರ ನಡುವಿನ ಯುದ್ಧ ದಂತೆ ನಡೆಯಲಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಘೋಷಣೆ ಮಾಡಿದ್ದಾರೆ. ಚುನಾವಣೆಯಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವಿನ ಹೋರಾಟ ವಾಗಲಿದೆ ಎಂದು ಪ್ರತಿಪಾದನೆ ಮಾಡಿದ್ದಾರೆ. ಈ ಮೂಲಕ 2019ರ ಲೋಕಸಭೆ ಚುನಾವಣೆಗೆ ಸರಿಯಾಗಿ ಒಂದು ವರ್ಷ ಇರುವಂತೆಯೇ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪೂರ್ಣಾಧಿವೇಶನದಿಂದಲೇ ಭರ್ಜರಿ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ.  

Advertisement

ನವದೆಹಲಿಯಲ್ಲಿ ಭಾನುವಾರ ಮುಕ್ತಾಯವಾದ ಪಕ್ಷದ 84ನೇ ಪೂರ್ಣಾಧಿವೇಶನದಲ್ಲಿ ಸಮಾರೋಪ ಭಾಷಣ ಮಾಡುವ ವೇಳೆ ಈ ಮಾತುಗಳನ್ನಾಡಿದ್ದಾರೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರಬಲ ವಾಗ್ಧಾಳಿ ನಡೆಸಿದ ಅವರು, ಪ್ರಧಾನಿ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಏಕೆಂದರೆ ಅವರೇ ಭ್ರಷ್ಟಾಚಾರಿ. ನರೇಂದ್ರ ಮೋದಿ ತಾವೊಬ್ಬ ದೇವರ ಅವತಾರ ಎಂದು ಭಾವಿಸಿಕೊಂಡಿದ್ದಾರೆ ಎಂದು  ಆರೋಪಿಸಿದ್ದಾರೆ. ಮೋದಿ ಅವರ ಹೆಸರು ದೇಶದ ಕೋಟಿಗಟ್ಟಲೆ ವಂಚಿಸಿದ ವ್ಯಕ್ತಿಯ ಮತ್ತು ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಡೆಸಿದ ವ್ಯಕ್ತಿ (ಲಲಿತ್‌ ಮೋದಿ) ಜತೆಗೆ ಥಳಕು ಹಾಕಿಕೊಂಡಿದೆ ಎಂದು ಹೇಳಿದ್ದಾರೆ. 

50 ನಿಮಿಷಗಳ ಭಾಷಣ: ಅಧಿವೇಶನದ ಉದ್ಘಾಟನೆ ದಿನ ಚುಟುಕಾಗಿ ಮಾತನಾಡಿದ್ದ ರಾಹುಲ್‌ ಭಾನುವಾರ 50 ನಿಮಿಷಗಳ ಕಾಲ ಮಾತನಾಡಿದರು. “”ಬಿಜೆಪಿ ಎಂದರೆ ಅಧಿಕಾರಕ್ಕಾಗಿ ಹೋರಾಟ ನಡೆಸುವ ಕೌರವರಂತೆ ಮತ್ತು ಕಾಂಗ್ರೆಸ್‌ನ ಹೋರಾಟ ಎಲ್ಲವನ್ನೂ ಕಳೆದುಕೊಂಡು ಸತ್ಯಕ್ಕಾಗಿ ಹೋರಾಟ ನಡೆಸುವ ಪಾಂಡವರಂತೆ ಎಂದು ಬಣ್ಣಿಸಿದ ಅವರು, ಇತ್ತೀಚಿನ ಚುನಾವಣೆಗಳಲ್ಲಿ ಸತತ ಗೆಲುವು ಕಂಡಿದ್ದು ಹಾಗೂ ಕೇಂದ್ರದಲ್ಲಿ ನಾಲ್ಕು ವರ್ಷಗಳಿಂದ ಅಧಿಕಾರದಲ್ಲಿ ಇರುವುದು ಬಿಜೆಪಿಗೆ ಅಧಿಕಾರದ ಅಮಲು ಏರಿಸಿದೆ. ಆಡಳಿತ ಪಕ್ಷವೊಂದರ ಚುಕ್ಕಾಣಿ ಹಿಡಿದ ವ್ಯಕ್ತಿ ವಿರುದ್ಧ ಹತ್ಯೆ ಮಾಡಿದ ಗುರುತರ ಆರೋಪವಿದೆ. ಅಂಥವರನ್ನು ನಾಯಕರನ್ನಾಗಿ ಆ ಪಕ್ಷ ಒಪ್ಪಿಕೊಳ್ಳುತ್ತದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹೆಸರು ಪ್ರಸ್ತಾಪಿಸದೆ ಕಟಕಿಯಾಡಿದ್ದಾರೆ. ಇದೇ ವೇಳೆ, ಹೊಸ ಕಾಂಗ್ರೆಸ್‌ ನಿರ್ಮಾಣ ಮಾಡುತ್ತೇವೆ. ಅದುವೇ ತಮ್ಮ ಮೊದಲ ಆದ್ಯತೆ. ದೇಶವನ್ನು ಮುನ್ನಡೆಸುವುದೇ ಪಕ್ಷದ ಆದ್ಯತೆ ಎಂದರು.

ಅಧಿಕಾರಕ್ಕೆ ತರುವುದೇ ಆದ್ಯತೆ: ಮುಂದಿ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕು. ಅಧಿಕಾರಕ್ಕೆ ಬಂದ ಮೇಲೆ ಯುವಕರಲ್ಲಿನ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಪ್ರತಿ ಜಿಲ್ಲೆಯಲ್ಲಿನ ಕೌಶಲ್ಯ ಮಂಡಳಿಯನ್ನು ಲಿಂಕ್‌ ಮಾಡಲಾಗುತ್ತದೆ ಎಂದರು. 

ಗೌರಿ ಲಂಕೇಶ್‌, ಕಲಬುರ್ಗಿ ಹತ್ಯೆ ಪ್ರಸ್ತಾಪ
ಆರ್‌ಎಸ್‌ಎಸ್‌ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್‌ ಗಾಂಧಿ ಕನ್ನಡದ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಮತ್ತು ಹಿರಿಯ ಸಾಹಿತಿ, ವಿಚಾರವಾದಿ ಡಾ.ಎಂ.ಎಂ.ಕಲಬುರ್ಗಿ ಹತ್ಯೆಗೆ ಸಂಘ ಪರಿವಾರವೇ ಕಾರಣ ಎಂದು ಆರೋಪ ಮಾಡಿದರು. ದೇಶದಲ್ಲಿರುವ ಮುಸ್ಲಿಮರನ್ನು ನೀವು ಇಲ್ಲಿಯರಲ್ಲ. ಪಾಕಿಸ್ತಾನಕ್ಕೆ ತೆರಳಿ ಎಂದು ಎನ್ನುತ್ತಾರೆ. ಗುಜರಾತ್‌ನ ಉನಾದಲ್ಲಿ ದಲಿತರನ್ನು ಟಾರ್ಗೆಟ್‌ ಮಾಡಲಾಗುತ್ತದೆ. ಈಶಾನ್ಯ ರಾಜ್ಯದ ಜನರಿಗೆ ನೀವು ಏನನ್ನು ತಿನ್ನುತ್ತೀರೋ ಅದು ನಮಗೆ ಸರಿಯಾಗುತ್ತಿಲ್ಲ, ಮಹಿಳೆಯರಿಗೆ ಸರಿಯಾಗಿ ವಸ್ತ್ರ ಧರಿಸುವಂತೆ ಆದೇಶ ನೀಡುತ್ತಾರೆ ಎಂದು ಕಟು ಟೀಕಾ ಪ್ರಹಾರ ನಡೆಸಿದರು.

Advertisement

ಪ್ರಚಾರ ಮಾಡುವವರಿಗೆ  ಮಾತ್ರ ಅಚ್ಛೇ ದಿನ್‌ 
ಪ್ರಧಾನಿ ಮೋದಿ ವಿರುದ್ಧ ಸೋಮವಾರ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ ಉದ್ಯೋಗ ಸೃಷ್ಟಿಯಲ್ಲಿ ಯಾವುದೇ ಸಾಧನೆ ಉಂಟಾಗಿಲ್ಲ. ಅಚ್ಛೇ ದಿನ್‌ ಎನ್ನುವುದು ಕೇವಲ ಕೇವಲ ಪ್ರಚಾರ ಮಾಡು ವವರಿಗೆ ಮಾತ್ರ ಎಂದು ಬರೆದುಕೊಂಡಿದ್ದಾರೆ. ನೊಬೆಲ್‌ ಪುರಸ್ಕೃತ ಪೌಲ್‌ ಕ್ರೆಗನ್‌ ಭಾರತದಲ್ಲಿ ಸಾಮೂಹಿಕ ನಿರುದ್ಯೋಗ ಸಮಸ್ಯೆ ಕಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ನಾವು ಎರಡು ವರ್ಷಗಳಿಂದ ಹೇಳಿದ್ದನ್ನೇ ಕ್ರೆಗನ್‌ ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.

ಸರಣಿ ಸುಳ್ಳೇ ರಾಹುಲ್‌ ಸಾಧನೆ: ಸಚಿವ ಪ್ರಸಾದ್‌
ಪೂರ್ಣಾಧಿವೇಶನದಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಾಡಿದ ಭಾಷಣ ಸಂಪೂರ್ಣ ಮತ್ತು ಸುಳ್ಳಿನ ಸರಣಿ ಮತ್ತು ತಪ್ಪು ಮಾಹಿತಿಯಿಂದ ಕೂಡಿದೆ ಎಂದು ಟೀಕಿಸಿದ್ದಾರೆ ಕೇಂದ್ರ ಸಚಿವ ರವಿಶಂಕರ ಪ್ರಸಾದ್‌. ಹತ್ತು ವರ್ಷಗಳ ಯುಪಿಎ ಆಡಳಿತದಲ್ಲಿ ಹಲವಾರು ಹಗರಣಗಳು ಬೆಳಕಿಗೆ ಬಂದಿವೆ. ಈಶಾನ್ಯ ರಾಜ್ಯಗಳ ಚುನಾವಣೆಯಲ್ಲಿಯೂ ಅವರು ಸೋತಿದ್ದನ್ನು ಅವರು ಮರೆತಿದ್ದಾರೆ ಎಂದು ಟೀಕಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next