ನವದೆಹಲಿ: ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾದಾಗಿನಿಂದ ನಿಗೂಢವಾಗಿಯೇ ಉಳಿದಿದ್ದ ರಾಯ್ಬರೇಲಿ, ಅಮೇಥಿ ಕ್ಷೇತ್ರಗಳಿಗೆ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ.
ಅದರಂತೆ ಕಾಂಗ್ರೆಸ್ ಶುಕ್ರವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ರಾಯ್ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕಿಶೋರಿ ಲಾಲ್ ಶರ್ಮಾ ಅವರನ್ನು ಕಣಕ್ಕಿಳಿಸಿದೆ. ಇದರೊಂದಿಗೆ ಕಾಂಗ್ರೆಸ್ ತನ್ನ ಎಲ್ಲ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆಗೊಳಿಸಿದಂತಾಗಿದೆ.
ಅಮೇಥಿ ಮತ್ತು ರಾಯ್ಬರೇಲಿ ಎರಡೂ ಕ್ಷೇತ್ರಗಳು ಕಾಂಗ್ರೆಸ್ ಭದ್ರಕೋಟೆಗಳಾಗಿವೆ. ರಾಹುಲ್ ಗಾಂಧಿ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಅಮೇಥಿಯಿಂದ ಬಿಜೆಪಿ ನಾಯಕಿ ಮತ್ತು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಕಾಂಗ್ರೆಸ್ ನಿಷ್ಠಾವಂತ ಕೆಎಲ್ ಶರ್ಮಾ ಅವರು ಅಮೇಠಿಯಲ್ಲಿ ಸ್ಮೃತಿ ಇರಾನಿ ಅವರನ್ನು ಎದುರಿಸಲಿದ್ದಾರೆ. ಏತನ್ಮಧ್ಯೆ, ರಾಹುಲ್ ಗಾಂಧಿ ಅವರ ಎದುರಾಳಿ ದಿನೇಶ್ ಪ್ರತಾಪ್ ಸಿಂಗ್, ಅವರನ್ನು ಗುರುವಾರ ರಾಯ್ಬರೇಲಿಯಿಂದ ಬಿಜೆಪಿಯ ಅಭ್ಯರ್ಥಿಯೆಂದು ಘೋಷಿಸಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ದಿನೇಶ್ ಸಿಂಗ್ ಸೋತಿದ್ದರು ಆದರೆ ಈ ಬಾರಿ ರಾಹುಲ್ ವಿರುದ್ಧ ಸ್ಪರ್ಧೆಗೆ ಇಳಿದಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದ್ದು ರಾಹುಲ್ ಗಾಂಧಿ ಹಾಗೂ ಕೆಎಲ್ ಶರ್ಮಾ ನಾಮಪತ್ರ ಸಲ್ಲಿಸಲಿದ್ದಾರೆ.
ಇದನ್ನೂ ಓದಿ: Daily Horoscope: ತಾತ್ಕಾಲಿಕ ಉದ್ಯೋಗಸ್ಥರ ಸಮಸ್ಯೆ ನಿವಾರಣೆ, ಆರೋಗ್ಯ ಉತ್ತಮ