ಮುಂಬೈ: ಭವಿಷ್ಯದಲ್ಲಿ ನೆಹರೂ-ಗಾಂಧಿ ಕುಟುಂಬದ ಹೊರಗಿನ ವರೂ ಕಾಂಗ್ರೆಸ್‌ನ ಅಧ್ಯಕ್ಷ ಗಾದಿಯೇರಬಹುದು. ಹೀಗೆಂದು ಹೇಳಿರುವುದು ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ.
ಆಂಗ್ಲವಾಹಿನಿಯೊಂದರ ಸಮ್ಮೇಳನದಲ್ಲಿ ಶುಕ್ರವಾರ ಅವರು ಮಾತನಾಡಿದರು. ಗಾಂಧಿ ಕುಟುಂಬದವರ ನೇತೃತ್ವ ಇಲ್ಲದೆ ಪಕ್ಷ ಉಳಿಯುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಪ್ರಶ್ನೆಗೆ ಕಾರ್ಯಕರ್ತರೇ ಉತ್ತರಿಸಬೇಕು ಎಂದಿದ್ದಾರೆ.
ಇದೇ ವೇಳೆ ಪ್ರಧಾನಿ ಹುದ್ದೆಗೆ ನನಗಿಂತಲೂ ಮನಮೋಹನ ಸಿಂಗ್ ಹೆಚ್ಚು ಸಮರ್ಥರಾಗಿದ್ದರು. ನನ್ನ ಮಿತಿಗಳು ನನಗೆ ತಿಳಿದಿತ್ತು. ಹೀಗಾಗಿಯೇ ಅವರನ್ನು ಆಯ್ಕೆ ಮಾಡಲಾಯಿತು ಎಂದು ಹೇಳಿಕೊಂಡಿದ್ದಾರೆ. ಜತೆಗೆ, 2019ರಲ್ಲಿ ಪಕ್ಷ ನಿರ್ಧರಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ ಎಂದರು.
2019ರಲ್ಲಿ ಗೆಲುವು ನಮ್ಮದೇ: ನಾವು 2014ರ ಲೋಕಸಭೆ ಚುನಾವಣೆ ವೇಳೆ ನರೇಂದ್ರ ಮೋದಿ ನಡೆಸಿದ ಕ್ಯಾಂಪೇನ್‌ಗೆ ನಾವು ಸ್ಪರ್ಧೆ ಒಡ್ಡಲು ಸಾಧ್ಯವಾಗಲಿಲ್ಲ. ಆದರೆ, 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲು ನಾವು ಅವಕಾಶ ನೀಡುವುದಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ, ಪ್ರಧಾನಿ ಮೋದಿ ಮತ್ತು ಅಟಲ್ ಅವರ ನಡುವಿನ ವ್ಯತ್ಯಾಸವೇನೆಂದರೆ, ಅಟಲ್ ಅವರಿಗೆ ಸಂಸದೀಯ ಪ್ರಕ್ರಿಯೆಗಳ ಬಗ್ಗೆ ಅಪಾರ ಗೌರವವಿತ್ತು ಎಂದಿದ್ದಾರೆ ಸೋನಿಯಾ.
ರಾಹುಲ್ ವಿಡಿಯೋ ವಿವಾದ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಿಂಗಾಪುರ ಕಾರ್ಯಕ್ರಮ ವಿವಾದಕ್ಕೀಡಾಗಿದೆ. ಕಾರ್ಯಕ್ರಮದ ತಿರುಚಿದ ವಿಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿದ್ದು, ತನ್ನ ಪ್ರಶ್ನೆಯನ್ನು ತಿರುಚಲಾಗಿದೆ ಎಂದು ಲೇಖಕ ಪ್ರಸೇನ್‌ಜಿತ್ ಕೆ ಬಸು ಆಕ್ಷೇಪಿಸಿದ್ದಾರೆ. ಅಲ್ಲದೆ ಈ ವಿಡಿಯೋವನ್ನು ಹಿಂಪಡೆಯಬೇಕು. ಇಲ್ಲವಾದರೆ ಸಿಂಗಾಪುರದ ನ್ಯಾಯಾಲಯದಲ್ಲಿ ದಾವೆ ಹೂಡುತ್ತೇನೆ ಎಂದು ಏಷ್ಯಾ ರಿಬಾರ್ನ್ ಎಂಬ ಕೃತಿಯ ಲೇಖಕ ಬಸು ಟ್ವೀಟ್ ಮಾಡಿದ್ದಾರೆ. ಅಲ್ಲದೆ ಕೇಳಿದ ಪ್ರಶ್ನೆಯ ಸಂಪೂರ್ಣ ವಿಡಿಯೋವನ್ನು ಪ್ರಕಟಿಸಿದ್ದಾರೆ.